ಪ್ರಗತಿವಾಹಿನಿ ಸುದ್ದಿ: ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಲು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಚಿವ ನಾಗೇಂದ್ರ ಅವರು ನನ್ನ ಬಳಿ ಚರ್ಚೆ ನಡೆಸಿದ್ದರು. ರಾಜೀನಾಮೆ ನೀಡಿ ಎಂದು ನಾವು ಹೇಳಿರಲಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡದ ಅವರು, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಸಿಬಿಐ ಸೇರಿದಂತೆ ಯಾವುದೇ ರೀತಿಯ ತನಿಖೆಗೆ ನೀಡಿ, ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಸಚಿವ ನಾಗೇಂದ್ರ ಅವರು ನನ್ನ ಬಳಿ ಚರ್ಚೆ ನಡೆಸುವ ವೇಳೆ ಹೇಳಿದರು. ಯಾವುದೇ ಸಚಿವರಿಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಧೈರ್ಯ ಬರುವುದಿಲ್ಲ ಎಂದರು.
ಬುಧವಾರ ಸಂಜೆ ಅವರ ಬಳಿ ವಾಸ್ತವಾಂಶ ಏನಾಗಿದೆ ಎಂದು ತಿಳಿದುಕೊಂಡೆವು. ಸಿಎಂ ಅವರು ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಧ್ಯಮಗಳ ವರದಿ ಸುಳ್ಳು. ಪಕ್ಷಕ್ಕೆ ಮುಜುಗರವಾಗುವುದು ಬೇಡ ಎನ್ನುವುದು ನಾಗೇಂದ್ರ ಅವರ ಅಭಿಲಾಷೆ. ಆದ ಕಾರಣ ರಾಜೀನಾಮೆ ತೀರ್ಮಾನ ಮಾಡುತ್ತೇನೆ ಎಂದು ನಮ್ಮ ಜತೆ ಹೇಳಿದ್ದರು ಎಂದು ತಿಳಿಸಿದರು.
ಬಿಜೆಪಿ ಸಮಯದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ದಾಖಲೆಗಳು ಸಿಕ್ಕಿವೆ
ಬಿಜೆಪಿ ಕಾಲದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ದಾಖಲೆಗಳು ಸಿಕ್ಕಿವೆ. ಬಿಜೆಪಿ ಸಮಯದಲ್ಲಿನ ಅಕ್ರಮ ಹಣ ವರ್ಗಾವಣೆಯ ಪ್ರಕರಣಗಳು ಗೌಪ್ಯವಾಗಿ ಕೆಲವು ಲೋಕಾಯುಕ್ತ ತನಿಖೆ ಸೇರಿದಂತೆ ಇತರೇ ತನಿಖೆಯಾಗಿವೆ. ಕೆಲವು ಹಣ ಮತ್ತೆ ಮರಳಿ ಬಂದಿದೆ. ಈ ರೀತಿ ಗಮನಕ್ಕೆ ಬರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಲಾಗುವುದು. ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ಮೇಲೆ ಮಾಡಿರುವ ಆರೋಪವನ್ನು ಪರಿಶೀಲಿಸುತ್ತೇವೆ ಎಂದು ಉತ್ತರಿಸಿದರು.
ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿ, ಸಚಿವರುಗಳಿಗೆ ಹಿಂದೆ ಯಾವ, ಯಾವ ಪ್ರಕರಣಗಳು ನಡೆದಿವೆ ಎಂದು ಅವರಿಗೂ ತಿಳಿದಿವೆ. ಬಿಜೆಪಿ ಇದ್ದಾಗಲೂ ಈ ರೀತಿಯ ಪ್ರಕರಣಗಳು ನಡೆದಿವೆ. ಹಗರಣಗಳ ಬಗ್ಗೆ ಮಾಹಿತಿಯೂ ಬಂದಿದೆ. ದಾಖಲೆಯೂ ಸಿಕ್ಕಿದೆ. ಬಿಜೆಪಿಯವರು ಹಗರಣ ಮಾಡಿದ್ದಾರೋ ಬಿಟ್ಟಿದ್ದಾರೋ ಅದರ ಬಗ್ಗೆ ಈಗಲೇ ಮಾತನಾಡಲು ಹೋಗುವುದಿಲ್ಲ. ಆದರೆ ಎಲ್ಲವನ್ನು ತನಿಖೆಗೆ ಒಳಪಡಿಸುತ್ತೇವೆ ಎಂದರು.
ಎಲ್ಲಾ ನಿಗಮದ ಅಧ್ಯಕ್ಷರನ್ನು ಕರೆದು ಚರ್ಚೆ ನಡೆಸಲಾಗುವುದು. ಬಡ್ಡಿ ಆಸೆಗೆ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಸಿಎಂ ಹಾಗೂ ಆರ್ಥಿಕ ಇಲಾಖೆಯವರು ಒಂದಷ್ಟು ಸೂಚನೆಗಳನ್ನು ನೀಡಿದ್ದಾರೆ ಎಂದರು.
ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಯಲ್ಲಿ ಬಳಕೆಯಾಗಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ ಬಿಜೆಪಿಯ ದಡ್ಡತನದ ಹೇಳಿಕೆ ಎಂದು ಹೇಳಿದರು.
ಸಚಿವರ ಗಮನಕ್ಕೆ ಬಾರದೆ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆಯೇ ಎಂದಾಗ ಈ ರೀತಿ ಮಾಡಲು ಆಗುವುದಿಲ್ಲ, ಮಾಡಬಾರದು. ಬೋರ್ಡ್ ರೆಸಲ್ಯೂಷನ್ ಇಲ್ಲದೆ ಒಂದು ಬ್ಯಾಂಕಿನ ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡಲು ಆಗುವುದಿಲ್ಲ. ನಾನು ಇಂಧನ ಸಚಿವನಾಗಿದ್ದಾಗ ಅನೇಕ ಬ್ಯಾಂಕಿನವರು ಬಂದು ನಮ್ಮಲ್ಲಿ ಠೇವಣಿ ಇಡಿ ಎಂದು ಕೇಳುತ್ತಿದ್ದರು, ನಾನು ಇದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದರು.
ಪ್ರತಿ ನಿಗಮಕ್ಕೆ ಎಸಿಎಸ್ ಕಾರ್ಯದರ್ಶಿಗಳು ಇರುತ್ತಾರೆ. ಇಂತಹ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಈ ವಿಚಾರವಾಗಿ ಈಗಾಗಲೇ ಎಸ್ ಐಟಿ ರಚನೆ ಮಾಡಿ ತನಿಖೆಗೆ ನೀಡಿದ್ದಾರೆ. ಒಂದು ಬ್ಯಾಂಕಿನಲ್ಲಿ ಈ ರೀತಿಯ ಅಕ್ರಮ ಕಂಡುಬಂದರೆ ಪ್ರಕರಣದ ತನಿಖೆ ನೇರವಾಗಿ ಸಿಬಿಐಗೆ ತಲುಪುತ್ತದೆ. ಅವರು ಸಹ ತನಿಖೆ ನಡೆಸಲಿದ್ದಾರೆಎಂದು ತಿಳಿಸಿದರು.
ನಾಳೆ ರಾಜ್ಯಕ್ಕೆ ರಾಹುಲ್ ಗಾಂಧಿ ಭೇಟಿ; ಸಂಸದರು, ಪರಾಜಿತರ ಜತೆ ಚರ್ಚೆ
ಬೆಂಗಳೂರಿಗೆ ನಾಳೆ ಆಗಮಿಸುವ ರಾಹುಲ್ ಗಾಂಧಿ ಅವರು ನೂತನವಾಗಿ ಆಯ್ಕೆಯಾದ ಮತ್ತು ಪರಾಭವಗೊಂಡ ಸಂಸದರನ್ನು ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ ಎಂದು ಡಿಸಿಎಂ ಶಿವಕುಮಾರ್ ಅವರು ತಿಳಿಸಿದರು.
ಬಿಜೆಪಿಯ ಭ್ರಷ್ಟಾಚಾರದ ದರಪಟ್ಟಿಯನ್ನು ಜಾಹೀರಾತು ನೀಡಿದ ಕಾರಣಕ್ಕೆ ದಾಖಲಾಗಿರುವ ಪ್ರಕರಣ ಸಲುವಾಗಿ ನ್ಯಾಯಲಯಕ್ಕೆ ರಾಹುಲ್ ಗಾಂಧಿ ಅವರು ಹಾಜರಾಗಲಿದ್ದಾರೆ. ಬಿಜೆಪಿಯ ಯತ್ನಾಳ್ ಅವರೇ 2,500 ಕೋಟಿ ಹಣ ಸಿಎಂ ಸ್ಥಾನಕ್ಕೆ ನೀಡಬೇಕು ಎಂದು ಹೇಳಿದ್ದರು. ಕೆಲವು ಮಾಧ್ಯಮಗಳಲ್ಲಿ ನೀಡಿದ್ದ ದರಪಟ್ಟಿಯನ್ನೇ ನಾವು ಜಾಹೀರಾತು ನೀಡಿದ್ದೆವು. ನನ್ನ ಹಾಗೂ ಸಿದ್ದರಾಮಯ್ಯ ಅವರ ಮೇಲೆ ದೂರು ನೀಡಲಿ. ಆದರೆ ಈ ಬಿಜೆಪಿಯವರು ಹೆಸರು ಬರಲಿ ಎಂದು ರಾಹುಲ್ ಗಾಂಧಿ ಅವರ ಹೆಸರನ್ನು ಸೇರಿಸಿದ್ದಾರೆ.
ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕರಾಗಲಿದ್ದಾರೆ
ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ಯಾರಾಗಲಿದ್ದಾರೆ ಎಂದು ಕೇಳಿದಾಗ ರಾಹುಲ್ ಗಾಂಧಿ ಹೊರತಾಗಿ ಬೇರೆ ಆಯ್ಕೆ ಇಲ್ಲ. ನಮ್ಮ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಹ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿಲ್ಲ ಎಂದು ಒಂದಷ್ಟು ಜನ ಸಚಿವರು ಅಪಸ್ವರ ಎತ್ತಿದ್ದಾರೆ ಎಂದಾಗ ಮತಗಳನ್ನು ಯಾರು ಹಾಕಿದ್ದಾರೆ, ಯಾರು ಹಾಕಿಲ್ಲ ಎಂದು ಗೊತ್ತಾಗುವುದಿಲ್ಲ. ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ಏರಿದ್ದೇವೆ. 14 ಸ್ಥಾನಗಳ ನಿರೀಕ್ಷೆಯಲ್ಲಿ ಇದ್ದೆವು. 10 ಸ್ಥಾನಗಳು ಬರುತ್ತವೆ ಎಂದು ʼಡಬಲ್ ಡಿಜಿಟ್ʼ ಹೇಳಿದ್ದೆ. ಇನ್ನೂ ಹೆಚ್ಚಿನ ಸ್ಥಾನಗಳು ಬರಬೇಕಾಗಿತ್ತು ಎನ್ನುವ ನೋವಿದೆ. ನಾವು ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ ಎಂದರು.
ಗ್ರಾಮಾಂತರದಲ್ಲಿ ಎಲ್ಲಾ ವಿರೋಧಿಗಳು ಒಂದಾಗಿ ಕೆಲಸ ಮಾಡಿದ್ದಾರೆಯೇ ಎಂದಾಗ ಇದು ಸರ್ವೇ ಸಾಮಾನ್ಯ. ಕಾಂಗ್ರೆಸ್ ವಿರೋಧಿ ಮತಗಳು ಒಂದಾಗಿವೆ. ಅಲ್ಪಸಂಖ್ಯಾತರು ಬಿಟ್ಟರೆ, ದಳ- ಬಿಜೆಪಿಯ ಮತಗಳು ಒಂದಾಗುತ್ತವೆ ಎಂದು ಮೊದಲೇ ತಿಳಿದಿತ್ತು. ಆದರೆ ಇಷ್ಟರ ಮಟ್ಟಿಗೆ ಆಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. 1985 ರಲ್ಲಿ ಸೋತವನು ಆನಂತರ ಸೋಲು ನೋಡಿರಲಿಲ್ಲ, ಈಗ ಸೋಲು ನೋಡಿದ್ದೇನೆ. ಇದೆಲ್ಲವೂ ಒಂದು ಪಾಠ ಎಂದರು.
ಒಕ್ಕಲಿಗ- ಲಿಂಗಾಯತ ಮತಗಳು ಹಳೇ ಮೈಸೂರು ಭಾಗದಲ್ಲಿ ಒಂದಾಗಿವೆ ಎಂದು ಕೇಳಿದಾಗ ಇದಕ್ಕೆಲ್ಲಾ ನಾನು ಈಗಲೇ ಉತ್ತರ ಕೊಡುವುದಿಲ್ಲ. ನಮ್ಮ ಶಾಸಕರು, ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ನಂತರ ಮಾತನಾಡುತ್ತೇನೆ. ಯಾರನ್ನೂ ದೂಷಣೆ ಮಾಡುವುದಿಲ್ಲ. ಸೋತಿದ್ದೇವೆ ಅಷ್ಟೇ ಎಂದರು.
ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಅವರನ್ನು ಚುನಾವಣೆಗೆ ನಿಲ್ಲಿಸುವ ಆಲೋಚನೆ ಇದೆಯೇ ಎಂದಾಗ ನಿಮಗೆ (ಮಾಧ್ಯಮದವರಿಗೆ) ಇರಬಹುದು. ಈಗಾಗಿರುವ ಸೋಲಿನಿಂದ ನಾವು ಚೇತರಿಸಿಕೊಳ್ಳಬೇಕು. ಸೋತೆ ಎಂದು ಮನೆಯಲ್ಲಿ ಕುಳಿತುಕೊಳ್ಳುವವನು ನಾನಲ್ಲ. ನನ್ನನ್ನು ನಂಬಿರುವ ಜನ, ಕಾರ್ಯರ್ತರಿಗೆ ಶಕ್ತಿ ತುಂಬಲು ಕೆಲಸ ಮಾಡುತ್ತೇನೆ. ನನ್ನ ದೇಹದ ಕೊನೆಯ ರಕ್ತದ ಹನಿ ಇರುವ ತನಕ ನಂಬಿರುವ ಕಾರ್ಯಕರ್ತರ ರಕ್ಷಣೆ ಮಾಡಲು ತಂತ್ರ, ಪ್ರತಿತಂತ್ರ ಏನು ಮಾಡಬೇಕೋ ಎಲ್ಲವೂ ಗೊತ್ತಿದೆ. ದೊಡ್ಡ, ದೊಡ್ಡ ನಾಯಕರು ಸೋತಿದ್ದಾರೆ. ಇದು ನನ್ನ ವೈಯಕ್ತಿಕ ಸೋಲು ಎಂದು ಹೇಳಿದರು.
ಲೋಕಸಭಾ ಚುನಾವಣೆ ಸೋಲಿನ ಪರಾಮರ್ಶೆ ಮಾಡುವಿರಾ ಎಂದಾಗ, ಇದೇ ಜೂ. 8 ರಂದು ಸಭೆ ನಡೆಸಬೇಕು ಎಂದು ಆಲೋಚನೆ ಇತ್ತು. ಅಂದು ದೆಹಲಿಗೆ ತೆರಳುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು. ಈಗಲೇ ದುರಸ್ಥಿ ಮಾಡಬೇಕಲ್ಲವೇ? ಎಲ್ಲಾ ಸಚಿವರು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಯಾರನ್ನೂ ಇಲ್ಲಿ ದೂಷಣೆ ಮಾಡುವುದಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರು ಕೃಷಿ ಸಚಿವ ಸ್ಥಾನ ಬೇಡಿಕೆ ಇಟ್ಟಿದ್ದಾರೆ ಎಂದು ಕೇಳಿದಾಗ ಏನು ಬೇಕಾದರೂ ಆಗಲಿ. ರಾಜ್ಯಕ್ಕೆ ಒಳ್ಳೆಯದಾಗಲಿ. ರಾಜ್ಯಕ್ಕೆ ಒಳ್ಳೆಯದನ್ನು ಮಾಡಿದರೆ ಖುಷಿಯ ವಿಚಾರ ಎಂದರು.
ಜಾತಿಗೊಂದು ಹೆಚ್ಚುವರಿ ಉಪಮುಖ್ಯಮಂತ್ರಿ ಬೇಕು ಎನ್ನುವ ಸಚಿವ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ ಸುರ್ಜೇವಾಲ ಮತ್ತು ಸಿಎಂ ಬಳಿ ಈ ಪ್ರಶ್ನೆಗೆ ಉತ್ತರ ಕೇಳಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ