ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ತಂಡದಿಂದ ಮಕ್ಕಳ ಮಾರಾಟ ಜಾಲದಿಂದ ಹೆಣ್ಣು ಮಗುವಿನ ರಕ್ಷಣೆ ಮಾಡಲಾಗಿದೆ. ಜೂ.೦೮ ರಂದು ಹೆಣ್ಣು ಮಗುವೊಂದರ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣವೇ ಕಾರ್ಯ ಪ್ರವೃತ್ತರಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪೂರ್ಣ ಪ್ರಮಾಣದ ಮಾಹಿತಿ ಪಡೆದುಕೊಂಡು ಹೆಣ್ಣು ಮಗುವಿನ ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಮತ್ತು ಮಾಳಮಾರುತಿ ಪೋಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ದಿನಾಂಕ: ೦೯/೦೬/೨೦೨೪ ರಂದು ಬೆಳಿಗ್ಗೆ ೬.೦೦ ಗಂಟೆಗೆ ನಿಸರ್ಗ ಹೋಟೆಲ್ ಹತ್ತಿರ ಹೆಣ್ಣು ಮಗುವನ್ನು ರಕ್ಷಣಾ ಕಾರ್ಯಚರಣೆ ಮಾಡಲಾಗಿದೆ. ಅದರಂತೆ ತಕ್ಷಣವೇ ಮಗು ಮಾರಾಟ ಮಾಡುತ್ತಿರುವ ಮಹಿಳೆಯ ಮೇಲೆ ಕಾನೂನು ಕ್ರಮಕ್ಕಾಗಿ ಎಫ್.ಐ.ಆರ್ ದಾಖಲು ಮಾಡಲಾಗಿದೆ.
ಮಗು ಮಾರಾಟ ಜಾಲದಲ್ಲಿ ಸಹಕರಿಸಿರುವ 5 ಜನರನ್ನು ಸಹ ಮಾಳಮಾರುತಿ ಪೋಲಿಸ್ ಠಾಣೆಯ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿ ತನಿಖೆ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಕ್ಕಳ ರಕ್ಷಣೆ ಪಾಲನೆ ಪೋಷಣೆಗೆ ಸಂಬಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಸಂಬಂಧಿಸಿದಂತೆ ಮಕ್ಕಳ ಮಾರಾಟ, ಹೆಣ್ಣು ಮಕ್ಕಳ ಮಾರಾಟ, ಹೆಣ್ಣು ಭ್ರೂಣ ಹತ್ಯೆ, ಇಂತಹ ಯಾವುದೇ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ನಿರ್ಧಾಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಮಕ್ಕಳ ಮಾರಾಟ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ಕಂಡುಬಂದಲ್ಲಿ ಸದರಿ ಮಾಹಿತಿಯನ್ನು ಮಕ್ಕಳ ಸಹಾಯವಾಣಿ-೧೦೯೮, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ನಿಡಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಹಾಂತೇಶ ಭಜಂತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ