*ಜಾಹೀರಾತು ವಿಚಾರದಲ್ಲಿ ರಾಹುಲ್ ಗಾಂಧಿ ವಿರುದ್ಧ ಕೇಸ್ ದಾಖಲಿಸಿದ್ದು ಯಾವ ರಾಜಕಾರಣ? ಡಿಸಿಎಂ ಪ್ರಶ್ನೆ*
ಪ್ರಗತಿವಾಹಿನಿ ಸುದ್ದಿ: ಜಾಹೀರಾತು ವಿಚಾರದಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಿರುವುದು ಯಾವ ರಾಜಕಾರಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಅವರ ವಿರುದ್ಧ ಕಾನೂನು ಪ್ರಕ್ರಿಯೆ ದ್ವೇಷದ ರಾಜಕಾರಣ, ರಾಹುಲ್ ಗಾಂಧಿ ಅವರು ಬಂದ ನಂತರ ಈ ಬೆಳವಣಿಗೆ ನಡೆಯುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ಅವರು ಉತ್ತರಿಸಿದ್ದಾರೆ.
ನಾನು ಆ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಪಡೆದಿಲ್ಲ. ಕಾಂಗ್ರೆಸ್ ಪಕ್ಷ ಯಾರ ಮೇಲೂ ದ್ವೇಷ ಮಾಡುವುದಿಲ್ಲ. ದ್ವೇಷ ರಾಜಕಾರಣದ ಬಗ್ಗೆ ನಾನು ಮಾತನಾಡಿದರೆ ವಿಚಾರ ಎಲ್ಲೆಲ್ಲೋ ಹೋಗುತ್ತದೆ. ಈ ವಿಚಾರದಲ್ಲಿ ನನಗೂ ಅಯ್ಯೋ ಎನಿಸುತ್ತದೆ. ಇಂತಹ ಕಠಿಣ ಪರಿಸ್ಥಿತಿಯನ್ನು ನಾವು ಅನುಭವಿಸಿದ್ದೇವೆ.
ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದು ನ್ಯಾಯಾಲಯದ ಮುಂದೆ ಹಾಜರಾದರು. ಅವರ ವಿರುದ್ಧ ಕೇಸು ಹಾಕಿರುವುದು ಯಾವ ರಾಜಕಾರಣ? ಬಿಜೆಪಿಯ ವಿರುದ್ಧದ ಜಾಹೀರಾತಿಗೂ ರಾಹುಲ್ ಗಾಂಧಿ ಅವರಿಗೂ ಏನು ಸಂಬಂಧ? ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಆ ಜಾಹೀರಾತು ಕೊಟ್ಟಿದ್ದು ರಾಹುಲ್ ಗಾಂಧಿ ಅವರೇ? ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾ ಅಥವಾ ಕೆಪಿಸಿಸಿ ಅಧ್ಯಕ್ಷರಾ?
ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ಹಾಗೂ ಮಾಧ್ಯಮಗಳ ವರದಿ ಆಧರಿಸಿ ಆ ಜಾಹೀರಾತನ್ನು ಕೆಪಿಸಿಸಿ ವತಿಯಿಂದ ನಾನು ಕೊಟಿದ್ದೆ. ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಈ ಕೇಸ್ ಹಾಕಿಸುವಾಗ ವಿಜಯೇಂದ್ರಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ? ನಾವು ಅವರಂತೆ ನೀಚ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ಸದಾ ದ್ವೇಷ ಮಾಡುತ್ತಾರೆ ಹೊರತು ಕಾಂಗ್ರೆಸ್ ಪಕ್ಷವಲ್ಲ” ಎಂದು ತಿಳಿಸಿದರು.
2028ಕ್ಕೆ ಮತ್ತೆ ನಮ್ಮ ಸರ್ಕಾರ ತರುವುದು ನನ್ನ ಜವಾಬ್ದಾರಿ
ಒಕ್ಕಲಿಗ ನಾಯಕರ ಸಭೆ ಬಗ್ಗೆ ಕೇಳಿದಾಗ, ನಾವು ನಮ್ಮ ಸಮಾಜದ ಬಗ್ಗೆ, ಲೋಕಸಭೆ ಚುನಾವಣೆ ಮತದಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಸೋತಿದ್ದು, ಸೋಲನ್ನು ಒಪ್ಪಿದ್ದೇವೆ. ರಾಜಕಾರಣದಲ್ಲಿ ಇದು ಸಹಜ. ನಮ್ಮ ಚೆಲುವರಾಯಸ್ವಾಮಿ, ಬಾಲಕೃಷ್ಣ ಅವರು 50 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಈಗ ಅವರು ಮತ್ತೆ ಗೆದ್ದಿದ್ದಾರೆ. ಈ ಸೋಲು ಶಾಶ್ವತವಲ್ಲ. ಜನರ ಭಾವನೆ, ಆಲೋಚನೆ ಆರು ತಿಂಗಳಿಗೆ ಬದಲಾಗುತ್ತದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಕೇವಲ 1 ಸ್ಥಾನ ಗೆದ್ದಿತ್ತು. ಈಗ 9 ಸ್ಥಾನ ಗೆದ್ದಿದೆ. ಇನ್ನು ನಾಲ್ಕೈದು ಕ್ಷೇತ್ರ ನಾವು ನಿರೀಕ್ಷೆ ಮಾಡಿದ್ದೆವು. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ. ನಾನು ಸಿದ್ದರಾಮಯ್ಯ, ಎಲ್ಲಾ ಸಚಿವ ಸಂಪುಟ ಸದಸ್ಯರು ಒಟ್ಟಾಗಿ ದುಡಿದು ಈ ಸರ್ಕಾರ ಮತ್ತೆ ತರುತ್ತೇವೆ” ಎಂದರು.
ದರ್ಶನ್ ಅವರ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಈ ಪ್ರಕರಣದಲ್ಲಿ ಯಾವುದೇ ಒತ್ತಡವಿಲ್ಲ. ಈ ಬಗ್ಗೆ ನಾನು ವಿಚಾರಿಸಿದ್ದೇನೆ. ಪ್ರಕರಣದಲ್ಲಿ 13 ಆರೋಪಿಗಳಿದ್ದು, ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೂ ಕ್ಯಾಮೆರಾ ಹಿಡಿದಿರುತ್ತೀರಿ, ಪೊಲೀಸರಿಗೆ ಸ್ವತಂತ್ರವಾಗಿ ವಿಚಾರಣೆ ನಡೆಸಲು ಆಗುತ್ತಿಲ್ಲ ಎಂದು ಅವರು ಶಾಮಿಯಾನ ಹಾಕಿಕೊಂಡಿದ್ದಾರೆ. ಈ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಗೃಹ ಸಚಿವರಿಂದ ಹಿಡಿದು ಯಾರೊಬ್ಬರೂ ಹಸ್ತಕ್ಷೇಪ ಮಾಡಿಲ್ಲ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ