Belagavi NewsBelgaum NewsKannada NewsKarnataka NewsPolitics

ಸಮರ್ಪಕ ಬೆಳೆ ಸಮೀಕ್ಷೆ, ಲ್ಯಾಂಡ್ ಬೀಟ್ ಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮರ್ಪಕ ಬೆಳೆ ಸಮೀಕ್ಷೆ; ಆರ್.ಟಿ.ಸಿ.ಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ; ಸರಕಾರಿ ಜಮೀನು ಅತಿಕ್ರಮಣ ತಡೆಗೆ ನಿಯಮಿತವಾಗಿ ಲ್ಯಾಂಡ್ ಬೀಟ್; ತಹಶೀಲ್ದಾರ, ಉಪ ವಿಭಾಗಾಧಿಕಾರಿಗಳು‌ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಿಕೆ ಸೇರಿದಂತೆ ಕಂದಾಯ ಇಲಾಖೆಯ ಪ್ರತಿಯೊಂದು ಕೆಲಸಕಾರ್ಯಗಳನ್ನು ಚುರುಕುಗೊಳಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಬೇಕು ಎಂದು ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ನೈರುತ್ಯ ಮುಂಗಾರು ಸಿದ್ಧತೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶನಿವಾರ(ಜೂ.15) ನಡೆದ ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲ ಕಾಲಕ್ಕೆ ಅನುಗುಣವಾಗಿ ಹಾಗೂ ಸಮರ್ಪಕವಾಗಿ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು. ಆರ್.ಟಿ.ಸಿ. ಗಳನ್ನು ಆಧಾರ್ ಸಂಖ್ಯೆಗೆ ಜೋಡಣೆಯನ್ನು ವಿಶೇಷ ಆಂದೋಲನ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು. ಆರ್.ಟಿ.ಸಿ. ಗೆ ಆಧಾರ್ ಜೋಡಣೆಯಿಂದ‌ ಮುಂಬರುವ ದಿನಗಳಲ್ಲಿ ಮ್ಯೂಟೇಶನ್, ಬೆಳೆಹಾನಿ ಪರಿಹಾರ ವಿತರಣೆ ಸೇರಿದಂತೆ ಸಾಕಷ್ಟು ಅನುಕೂಲವಾಗಲಿದೆ. 

ಸರಕಾರಿ‌ ಜಮೀನು, ಕೆರೆಗಳು, ಸ್ವಾಧೀನಪಡಿಸಿಕೊಂಡಿರುವ ಭೂಮಿ, ಸ್ಮಶಾನ‌ ಸೇರಿದಂತೆ ಪ್ರತಿಯೊಂದು ಇಲಾಖೆಗೆ ಸಂಬಂಧಿಸಿದ ಸರಕಾರಿ ಜಮೀನಿನ ಸಂರಕ್ಷಣೆ ಮತ್ತು ಅತಿಕ್ರಮಣ ತಡೆಗಾಗಿ ಲ್ಯಾಂಡ್ ಬೀಟ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದ್ದರಿಂದ ಪ್ರತಿಯೊಂದು ಜಿಲ್ಲೆಗಳ ವ್ಯಾಪ್ತಿಯಲ್ಲಿನ ಸರಕಾರಿ‌ ಜಮೀನಿನ ಬೀಟ್ ಕಡ್ಡಾಯವಾಗಿ ನಡೆಸುವ ಮೂಲಕ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರತಿ‌ ನಾಲ್ಕು ತಿಂಗಳಿಗೊಮ್ಮೆ ಬೀಟ್ ಮಾಡುವುದರಿಂದ‌ ಸರಕಾರಿ ಭೂಮಿಯ ಅತಿಕ್ರಮಣಕ್ಕೆ ಕಡಿವಾಣ ಹಾಕಬಹುದು. ಆದ್ದರಿಂದ ನಿಯಮಿತವಾಗಿ ಬೀಟ್ ಮಾಡಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಜಿಲ್ಲಾಧಿಕಾರಿಗಳಿಗೆ ಹೇಳಿದರು.

ಜುಲೈ ತಿಂಗಳಿನಲ್ಲಿ ಆಧಾರ್ ಜೋಡಣೆ ಮತ್ತು ಲ್ಯಾಂಡ್ ಬೀಟ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿದರು.

ಹೆಚ್ಚುವರಿ ಗೋಮಾಳ ಹಂಚಿಕೆಗೆ ಅವಕಾಶ

ಗೋಮಾಳ ಭೂಮಿ ಹಂಚಿಕೆಯನ್ನು ಕಾಯ್ದೆ ಅನುಸಾರ ಸರಕಾರ ನಿರ್ಬಂಧಿಸಿದೆ. ಆದರೆ ಹೆಚ್ಚುವರಿ ಭೂಮಿಯನ್ನು ಗುರುತಿಸಿ ನಿಯಮಾನುಸಾರ ಹಂಚಿಕೆ ಮಾಡಲು ಕಾಯ್ದೆಯಲ್ಲಿ ಅವಕಾಶವಿರುತ್ತದೆ. ಈ ಬಗ್ಗೆ ಪರಿಶೀಲನೆ ಮಾಡಿ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಬಗರ್ ಹುಕುಂ ಸಮಿತಿ ಮುಂದೆ ಮಂಡಿಸಲಾಗುವ ಪ್ರತಿಯೊಂದು ಅನರ್ಹ ಪ್ರಕರಣವನ್ನು ತಿರಸ್ಕರಿಸುವ ಮುಂಚೆ ಸಕಾರಣ ಸಮೇತ ವಿವರಿಸಬೇಕು. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕರಿಸಲಾಗಿರುವ ಮನವಿ/ಅರ್ಜಿಗಳು ಮತ್ತು‌ ಕುಂದುಕೊರತೆಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು.

ತಹಶೀಲ್ದಾರ, ಉಪ ವಿಭಾಗಾಧಿಕಾರಿಗಳು‌ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ವಿಶೇಷವಾಗಿ 90 ರಿಂದ 180 ದಿನಗಳರೆಗಿನ ಪ್ರಕರಣಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು. 

ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕಲಂ 46 ರಡಿಯಲ್ಲಿ ಭೂಕಂದಾಯ ಬಾಕಿ ವಸೂಲಾತಿಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಬದಲಾವಣೆಯ ಹಾದಿಯಲ್ಲಿ ಕಂದಾಯ ಇಲಾಖೆ

ಕಂದಾಯ ಇಲಾಖೆಯ ಕೆಲಸ ನಿರಂತರವಾಗಿರುತ್ತದೆ.‌ ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ. ಅವರ ನಿರೀಕ್ಷೆಯ ಪ್ರಕಾರ ಕೆಲಸ ಮಾಡುವ ಮೂಲಕ ಉತ್ತಮ ಸೇವೆ ಒದಗಿಸಬೇಕು ಎಂದು ಸಚಿವ ಕೃಷ್ಣ ಭೈರೃಗೌಡ ಕರೆ ನೀಡಿದರು.

ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವುದು ನಮ್ಮ ಕರ್ತವ್ಯ ಹಾಗೂ ಧರ್ಮ. ಕೆಲಸದ ಹೊರೆ ಹೆಚ್ಚಾಗಿದೆ ಎಂಬುದಕ್ಕಿಂತ ನಮ್ಮ ನಮ್ಮ ಕರ್ತವ್ಯವನ್ನು ಸೀಮಿತ ಅವಧಿಯಲ್ಲಿ ಮಾಡುತ್ತಿರುವುದರಿಂದ ಕಾರ್ಯ ಭಾರ ಎನಿಸುತ್ತಿದೆ. ಇಲಾಖೆ ಹಾಗೂ ನಮ್ಮ ಕಡೆಯಿಂದ ಜನರಿಗೆ ಅಳಿಸು ಸೇವೆ ಎಂದು ಸಕಾರಾತ್ಮಕ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಕಂದಾಯ ಇಲಾಖೆಯು ಬದಲಾವಣೆಯ‌ ಹಾದಿಯಲ್ಲಿ ಸಾಗುತ್ತಿದೆ. ಎಲ್ಲರ ಸಹಕಾರದಿಂದ ನಿಗದಿತ ಗುರಿ ಸಾಧನೆ ಸಾಧ್ಯವಾಗಲಿದೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಖಟಾರಿಯಾ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ (ನೋಂದಣಿ ಮತ್ತು ಸಾಮಾಜಿಕ‌ಭದ್ರತೆ) ಗಳಾದ ವಿ.ರಶ್ಮಿ ಮಹೇಶ್ , ಕಂದಾಯ ಇಲಾಖೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಇಲಾಖೆಯ ಆಯುಕ್ತರಾದ ಮಮತಾ ಬಿ‌.ಆರ್., ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣವರ ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಳಗಾವಿ ವಿಭಾಗದ ವ್ಯಾಪ್ತಿಯ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಯ‌ ಜಿಲ್ಲಾಧಿಕಾರಿಗಳು, ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button