ರಾಜ್ಯಕ್ಕೆ ಇನ್ನೂ ಇಬ್ಬರು ಉಪಮುಖ್ಯಮಂತ್ರಿ?

ರಾಜ್ಯಕ್ಕೆ ಇನ್ನೂ ಇಬ್ಬರು ಉಪಮುಖ್ಯಮಂತ್ರಿ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕರ್ನಾಟಕದಲ್ಲಿ ಬಿಜೆಪಿ ಹಲವು ಹೊಸ ದಾಖಲೆಗಳನ್ನು ಬರೆಯಲು ಹೊರಟಂತಿದೆ. ಅನೇಕ ಅನಿರೀಕ್ಷಿತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಿರುವ ಬಿಜೆಪಿ ಹೈಕಮಾಂಡ್ ಈಗ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಐವರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಗೆ ಬಿಜೆಪಿ ಮುಂದಾಗಿದೆ ಎನ್ನುವ ದಟ್ಟ ವದಂತಿ ಹರಡಿದೆ. ಈಗಾಗಲೆ ಮೂವರ ಉಪಮುಖ್ಯಮಂತ್ರಿಗಳನ್ನು ಮಾಡಿರುವುದೇ ರಾಜ್ಯದ ಮಟ್ಟಿಗೆ ದಾಖಲೆ. (ಆಂಧ್ರಪ್ರದೇಶದಲ್ಲಿ ಪ್ರಸ್ತುತ ಐವರು ಉಪಮುಖ್ಯಮಂತ್ರಿಗಳಿದ್ದಾರೆ.) ಈಗ ಅದಕ್ಕೂ ಮುಂದೆ ಹೊಗಿ ಇನ್ನೂ ಇಬ್ಬರನ್ನು ಉಪಮುಖ್ಯಮಂತ್ರಿ ಗಾದಿಯಲ್ಲಿ ಕೂಡ್ರಿಸಲಿದೆ.

ಹಾಲಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಅಶ್ವತ್ಥ ನಾರಾಯಣ

ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಾಗ ಇಬ್ಬರು ಅಚ್ಛರಿಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪಕ್ಷದೊಳಗೆ ಅಸಮಾಧಾನ ಏಳುವುದಕ್ಕೂ ಕಾರಣವಾಗಿತ್ತು. ಅದರಲ್ಲೂ ಶಾಸಕರೂ ಅಲ್ಲದ ಲಕ್ಷ್ಮಣ ಸವದಿಗೆ ಮಂತ್ರಿಸ್ಥಾನ ನೀಡಿದಾಗಲೇ ಎದ್ದಿದ್ದ ಅಸಮಾಧಾನ ಗಾಯಕ್ಕೆ ಉಪ್ಪು ಸವರುವಂತೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಆದರೆ ಅಷ್ಟೇ ವೇಗವಾಗಿ ಅಸಮಾಧಾನ ಹೊರಬರದಂತೆ ನೋಡಿಕೊಳ್ಳುವಲ್ಲೂ ಯಶಸ್ವಿಯಾಯಿತು. ಜಾರಕಿಹೊಳಿ ಸಹೋದರರು ಮತ್ತು ಉಮೇಶ ಕತ್ತಿ ಭಿನ್ನಮತಕ್ಕೆ ಕಾರಣರಾಗಬಹುದು ಎನ್ನುವ ಶಂಕೆ ಸಧ್ಯಕ್ಕೆ ದೂರವಾಗಿದೆ.

ಇದೀಗ, ಅನರ್ಹರಲ್ಲಿ ಒಬ್ಬರಿಗೆ ಮತ್ತು ಪಕ್ಷದೊಳಗಿನ ನಿಷ್ಠಾವಂತರೊಬ್ಬರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲು ನಿರ್ಧರಿಸಲಾಗಿದೆ. ತನ್ಮೂಲಕ ಪಕ್ಷದಲ್ಲಿ ಎರಡನೇ ಹಂತದ ನಾಯಕರಿಲ್ಲ ಎನ್ನುವ ಕೊರತೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕರನ್ನು ಬೆಳೆಸಲು ಮುಂದಾಗಿದೆ. ಇದರಲ್ಲೂ ಅಚ್ಛರಿಯ ನಿರ್ಧಾರವೇ ಹೊರಬೀಳಬಹುದು.

ಸಂವಿಧಾನಿಕವಲ್ಲ

ಹಾಗೆ ನೋಡಿದರೆ ಉಪಮುಖ್ಯಮಂತ್ರಿ ಹುದ್ದೆ ಸಂವಿಧಾನಿಕವಲ್ಲ. ಅದು ಕೇವಲ ಹೆಸರಿಗಷ್ಟೆ. ಮಂತ್ರಿಗಳಿಗಿರುವ ಸೌಲಭ್ಯಕ್ಕೆ ಹೊರತಾದ ಯಾವುದೇ ಸೌಲಭ್ಯಗಳೂ ಉಪಮುಖ್ಯಮಂತ್ರಿ ಹುದ್ದೆಗಿಲ್ಲ. ಆದಾಗ್ಯೂ ಮುಖ್ಯಮಂತ್ರಿಯ ನಂತರದ ಹುದ್ದೆ ಎನ್ನುವ ಸಾಮಾನ್ಯ ನಂಬಿಕೆ ಆ ಹುದ್ದೆಗಿದೆ.

ಯಡಿಯೂರಪ್ಪ ಸಂಪುಟದಲ್ಲಿ ಕೆ.ಎಸ್.ಈಶ್ವರಪ್ಪ ಮತ್ತು ಆರ್. ಅಶೋಕ ಉಪಮುಖ್ಯಮಂತ್ರಿಗಳಾಗಿ ಈ ಹಿಂದೆ ಕೆಲಸ ಮಾಡಿದವರು. ಯಡಿಯೂರಪ್ಪ ಕೂಡ ಈ ಹಿಂದೆ 2006ರಲ್ಲಿ ಜೆಡಿಎಸ್ ಜೊತೆ ಸರಕಾರ ರಚಿಸಿದಾಗ ಉಪಮುಖ್ಯಮಂತ್ರಿಗಳಾಗಿದ್ದವರು. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button