ಪ್ರಗತಿವಾಹಿನಿ ಸುದ್ದಿ: ಬುಧವಾರ ಯಮಕನಮರಡಿ ಗ್ರಾಮದ ಬಿ.ಬಿ.ಹಂಜಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಿದ 6,22,627 ಮತದಾರರಿಗೆ ಕೃತಜ್ಞನಾಗಿದ್ದೇನೆ. ಮತ್ತು ಮತದಾರರ ತೀರ್ಪನ್ನು ಗೌರವಿಸುತ್ತೇನೆ. ಈ ಚುನಾವಣೆಯಲ್ಲಿ ನನಗೆ ಸೋಲುಂಟಾಗಿದೆ. ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಆಘಾತವನ್ನುಂಟು ಮಾಡಿದ್ದು ನಿಜ. ಆದರೆ 6,222,627 ಮತಗಳನ್ನು ನೀಡಿ, ಚಿಕ್ಕೋಡಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸ ಹಾಗೂ ಮೋದಿಯವರ ವಿಕಸಿತ ಭಾರತ ಸಂಕಲ್ಪಕ್ಕೆ ಮತದಾರರು ಕೈಜೋಡಿಸಿರುವುದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಎನ್‌ಡಿಎ ಸಂಸದೀಯ ನಾಯಕನಾಗಿ ಒಕ್ಕೂಟದ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ರಾಷ್ಟ್ರದ ಪ್ರಧಾನಿ ಮಾಡಿರುವುದಕ್ಕೆ ಸಂತಸ ಉಂಟಾಗಿದೆ. ಇದು ಭಾರತದ ಜನತೆಗೆ ಖುಷಿಯ ಸಂಗತಿಯಾಗಿದ್ದು, ವಿಶ್ವದಲ್ಲಿ ಭಾರತ ಮತ್ತೊಮ್ಮೆ ಮಹತ್ವದ ಹೆಜ್ಜೆ ಇರಿಸಲು ಎನ್‌ಡಿಎ ಒಕ್ಕೂಟದ ಸದಸ್ಯರು ತೋರಿದ ಒಗ್ಗಟ್ಟು ಮತ್ತು ಭಾರತದ ಶಕ್ತಿಯನ್ನು ಬಿಂಬಿಸಿದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಹಗಲು ರಾತ್ರಿ ದುಡಿದ ಬಿಜೆಪಿ ಕಾರ್ಯಕರ್ತರ ಶ್ರಮ ನಿರರ್ಥಕವಾಗದಂತೆ ಸದಾ ನಿಮ್ಮೊಂದಿಗೆ ಇದ್ದು ಸ್ಪಂದಿಸುವೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಕರ್ನಾಟಕದ ಅಭಿವೃದ್ಧಿಗೆ ಹೊಸ ಪರ್ವ ಪ್ರಾರಂಭವಾಗಲಿದೆ. ಅಭಿವೃದ್ಧಿಯ ಕಾರ್ಯದಲ್ಲಿ ಸದಾ ತಮ್ಮೊಂದಿಗಿದ್ದು, ಪ್ರಾಮಾಣಿಕ ಸ್ಪಂದನೆ ನೀಡುತ್ತೇನೆ. ಬಿಜೆಪಿ ಚಿಕ್ಕೋಡಿ ಜಿಲ್ಲೆಯಲ್ಲಿ ಸಂಘಟನಾತ್ಮಕವಾಗಿ ಬಲಗೊಳ್ಳಲು ಇನ್ನಷ್ಟು ಕ್ರಿಯಾಶೀಲವಾಗಿ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು. ನನ್ನ ಸ್ಪರ್ಧೆಗೆ ಅವಕಾಶ ನೀಡಿದ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ರವಿ ಹಂಜಿ, ಬಸವರಾಜ ಹುಂದ್ರಿ, ಶ್ರೀಶೈಲ ಯಮಕನಮರಡಿ, ಅಶೋಕ ಚಂದಪ್ಪಗೋಳ, ಪ್ರಹ್ಲಾದ ನಾಯಿಕ, ಚೇತನ ಪಾಟೀಲ, ಮಹಾವೀರ ನಾಶಿಪುಡಿ, ಸಿದ್ಧಲಿಂಗ ಸಿದ್ಧಗೌಡರ್, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ