Kannada NewsKarnataka NewsPolitics

*ಒಂದು ವಾರದೊಳಗೆ ಹೊಸ ಜಾಹೀರಾತು ನೀತಿ ಸಾರ್ವಜನಿಕ ಚರ್ಚೆಗೆ: ಡಿಸಿಎಂ ಡಿ.ಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಮುಂದಿನ ಒಂದು ವಾರದೊಳಗೆ ಜಾಹೀರಾತು ನೀತಿಯ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರಡು ಪ್ರತಿಯ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗುವುದು. ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣಗಳು ಇದ್ದ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಜಾಹೀರಾತು ನೀತಿ ಬಾಕಿ ಉಳಿದಿತ್ತು. ಪ್ರಸ್ತುತ ಸಂಘ, ಸಂಸ್ಥೆಗಳ ಜೊತೆ ಚರ್ಚೆ ನಡೆಸಲಾಗಿದೆ.

60 ಅಡಿಗಿಂತ ಹೆಚ್ಚು ಅಗಲ ಇರುವ ರಸ್ತೆಗಳಲ್ಲಿ ‘ಗ್ರೂಪ್ ಪ್ಯಾಕೇಜ್’ ತಯಾರಿಸಿ ಅವಕಾಶ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮೇಲೆ ಜಾಹಿರಾತು ನೀಡಲು ಅವಕಾಶ ನೀಡಲಾಗುವುದು. ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಬಾಡಿಗೆ ನೀಡಬಹುದು. 

ಕಟ್ಟಡಗಳ ವಿಸ್ತೀರ್ಣ, ಎತ್ತರಕ್ಕೆ ತಕ್ಕಂತೆ ಯೂನಿಫಾರ್ಮಿಟಿ ತರಲಾಗುವುದು. ಮನಬಂದಂತೆ ಹಾಕಲು ಅವಕಾಶವಿಲ್ಲ. ಫಲಕಗಳನ್ನು ಮಾಡಲು ಯಾವ ಗುಣಮಟ್ಟದ ವಸ್ತು ಬಳಸಬೇಕು ಎಂದು ನಂತರ ತಿಳಿಸಲಾಗುವುದು. ಸರ್ಕಾರದಲ್ಲಿ ಇರುವ ಮೀಸಲಾತಿಗೆ ಅನುಗುಣವಾಗಿ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಹಿಂದಿನ ಸರ್ಕಾರ ಒಂದಷ್ಟು ಅವಕಾಶ ನೀಡಿದ್ದು ಕಾನೂನು ಪ್ರಕಾರವಾಗಿ ಇದ್ದರೆ ರಕ್ಷಣೆ ಮಾಡಲಾಗುವುದು. ಏನೂ ಮಾಡದೆ ಇದ್ದವರನ್ನು ಕಾನೂನಿನ ಪ್ರಕಾರ ವಜಾ ಮಾಡಲಾಗುವುದು. 

60 ಅಡಿಗಿಂತ ರಸ್ತೆ ಕಡಿಮೆ ಇದ್ದು, ಕಮರ್ಷಿಯಲ್ ವಲಯ ಎಂದು ಗುರುತಿಸಿದ್ದರೆ ಅಲ್ಲಿ ಜಾಹೀರಾತು ಅಳವಡಿಕೆಗೆ ಅವಕಾಶ ನೀಡಲಾಗುವುದು. ಜನಸಾಂದ್ರತೆ ಹಾಗು ವಹಿವಾಟು ಹೆಚ್ಚಿರುವ ಕಡೆ ಅವಕಾಶ ನೀಡಲಾಗುವುದು. 

ಸರ್ಕಾರಕ್ಕೆ ಹಣ ಬಾಕಿ ಉಳಿಸಿಕೊಂಡಿರುವ, ದಾವೆ ಹೂಡಿರುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಯವುದಿಲ್ಲ. ನಾವು ಹೇಗೆ ಚುನಾವಣೆಗೆ ನಿಲ್ಲುವಾಗ ಯಾವುದೇ ಬಾಕಿಗಳನ್ನು ಉಳಿಸಿಕೊಳ್ಳದೆ ಇರುತ್ತೇವೆಯೆ, ಅದೇ ರೀತಿ ಇಲ್ಲಿ ಭಾಗವಹಿಸುವವರು ಎಲ್ಲಾ ಬಾಕಿಗಳನ್ನು ಕಟ್ಟಬೇಕು. 

ಒಂದಷ್ಟು ಪ್ರಕರಣಗಳು ನ್ಯಾಯಲಯದಲ್ಲಿವೆ ಎಂದಾಗ “ಆ ಪ್ರಕರಣಗಳಿಗೆ ನಾವು ಏನು ಮಾಡಲು ಆಗುವುದಿಲ್ಲ. ಅಲ್ಲಿ ತೀರ್ಮಾನವಾದ ನಂತರ ಬಗೆಹರಿಸಬಹುದು. ಜೊತೆಗೆ ನ್ಯಾಯಾಲಯವು ಒಂದಷ್ಟು ಸೂಚನೆಗಳನ್ನು ನೀಡಿತ್ತು ಅದನ್ನು ಗಣನೆಗೆ ತೆಗೆದುಕೊಂಡು ನಿಯಮಗಳನ್ನು ರೂಪಿಸಲಾಗಿದೆ. ಮೆಟ್ರೋ ಒಳಗೆ ಆ ನಿಗಮ ನೋಡಿಕೊಳ್ಳುತ್ತದೆ. ಹೊರಗಡೆ ಪಾಲಿಕೆ ಮತ್ತು ಮೆಟ್ರೋ ಸಹಭಾಗಿತ್ವದಲ್ಲಿ ಪ್ರತ್ಯೇಕ ಪ್ಯಾಕೇಜ್ ಘೋಷಣೆ ಮಾಡಲಾಗುವುದು” ಎಂದು ಹೇಳಿದರು.

ಸುಮಾರು 600 ಕೋಟಿ ಜಾಹೀರಾತು ಹಣ ಬಾಕಿ ಇದೆ ಇದಕ್ಕೆ ಪರಿಹಾರ ಏನು ಎಂದು ಕೇಳಿದಾಗ ” ಎಲ್ಲವನ್ನು ವಸೂಲಿ ಮಾಡಲಾಗುವುದು, ಹಾಗೂ ಬಾಕಿ ಉಳಿಸಿಕೊಂಡವರು ಭಾಗವಹಿಸಲು ಅವಕಾಶ ನೀಡುವುದಿಲ್ಲ” ಎಂದರು.

ವಾರ್ಷಿಕ ಆದಾಯ ಎಷ್ಟು ನಿರೀಕ್ಷೆ ಮಾಡಲಾಗುತ್ತಿದೆ ಎಂದಾಗ “ಇನ್ನು ಮಗುನೇ ಹುಟ್ಟಿಲ್ಲ, ಮೊದಲೇ ಬಟ್ಟೆಯನ್ನು ಏಕೆ ಹೊಲೆಸಲಿ” ಎಂದು ಮರು ಪ್ರಶ್ನಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button