Belagavi NewsBelgaum NewsKannada NewsKarnataka News

ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ಜನಪ್ರತಿನಿಧಿಗಳ ಗಮನ ಸೆಳೆಯಲು ಎಫ್ಒಎಬಿ ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತುರ್ತಾಗಿ ಆಗಬೇಕಾಗಿರುವ ಕೆಲಸಗಳನ್ನು ಮುಂದಿಟ್ಟು ಬೆಳಗಾವಿಯ ಸಮಗ್ರ ಅಭಿವೃದ್ಧಿ ಕುರಿತು ಜನಪ್ರತಿನಿಧಿಗಳ ಗಮನ ಸೆಳೆಯಲು ಫೆಡರೇಶನ್ ಆಫ್ ಅಸೋಸಿಯೇಷನ್ಸ್ ಆಫ್ ಬೆಳಗಾವಿ (FOAB) ನಿರ್ಧರಿಸಿದೆ.

ಬೆಳಗಾವಿ ಅಭಿವೃದ್ಧಿ ಕುರಿತಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿ ಯಶಸ್ಸು ಸಾಧಿಸಿರುವ ಎಫ್ಒಎಬಿ, ಈಗ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಕೈಗಾರಿಕೆ ಸಚಿವರು ಮತ್ತು ಜಿಲ್ಲೆಯ ಇತರ ಸಚಿವರು, ಶಾಸಕರು ಹಾಗೂ ಎಲ್ಲ ಸ್ತರದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಸ್ಥಿತ ರೀತಿಯಲ್ಲಿ ಬೇಡಿಕೆಗಳನ್ನು ಮುಂದಿಟ್ಟು ಕೆಲಸ ಮಾಡಲು ಮುಂದಾಗಿದೆ.

ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸೇರಿದ್ದ ಸಭೆಯಲ್ಲಿ ಈ ಕುರಿತು ಸಮಗರವಾಗಿ ಚರ್ಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಆಗಬೇಕಿರುವ ಕೆಲಸಗಳ ಕುರಿತು ಪಟ್ಟಿ ತಯಾರಿಸಿ, ಸಂಬಂಧಿಸಿದವರ ಮುಂದಿಡಲು ನಿರ್ಧರಿಸಲಾಯಿತು.

ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಿಂಗ್ ರೋಡ್ ಯೋಜನೆ ಜಾರಿಗೆ ಒತ್ತಡ ಹೇರಲು ನಿರ್ಧರಿಸಲಾಯಿತು. ಬಿಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ನೇಮಕ ಮತ್ತು ಉಪಕರಣ ಖರೀದಿಗೆ ಒತ್ತಾಯಿಸಲು ನಿರ್ಣಯಿಸಲಾಯಿತು. ಕೇಂದ್ರ ಸರಕಾರದಿಂದ ಮಂಜೂರಾಗಿರುವ ಇಎಸ್ಐ ಆಸ್ಪತ್ರೆ ಶೀಘ್ರ ಆರಂಭವಾಗಲು ಒತ್ತಡ ಹೇರಬೇಕೆಂದು ತೀರ್ಮಾನಿಸಲಾಯಿತು. ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿರುವಂತೆ ಸುವ್ಯವಸ್ಥಿತ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಸಹಾಯಧನ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೊಳಿಸುವ ಕುರಿತು ಗಮನ ಸೆಳೆಯಲು ನಿರ್ಧರಿಸಲಾಯಿತು.

ಎಲ್ಲಾ ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಒಂದೇ ವೇದಿಕೆಗೆ ಕರೆಯಬೇಕು. ಕೈಗಾರಿಕಾ ಎಸ್ಟೇಟ್‌ಗಳನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಮತ್ತು ಪ್ಲಗ್-ಅಂಡ್-ಪ್ಲೇ ಮಾದರಿಯಲ್ಲಿ ಮೂಲಸೌಕರ್ಯವನ್ನು ಒದಗಿಸಲು ಸರ್ಕಾರದ ಉಪಕ್ರಮಗಳ ಅಗತ್ಯವನ್ನು ಮನದಟ್ಟು ಮಾಡಬೇಕು. ಪ್ರಮುಖವಾದ 5 ಕೆಲಸಗಳ ಕುರಿತು ಎಲ್ಲ ಜನಪ್ರತಿನಿಧಿಗಳ ಗಮನ ಸೆಳೆಯಬೇಕು ಎನ್ನುವ ಸಲಹೆ ಬಂದಿತು. ಬೆಳಗಾವಿಯಲ್ಲಿ ಫಾರ್ಮಾ ಹಬ್ ಮತ್ತು ಲಸಿಕೆ ಪರೀಕ್ಷಾ ಪ್ರಯೋಗಾಲಯ (ಎನ್‌ಐಪಿಆರ್) ಸ್ಥಾಪನೆ, ಅತ್ಯಾಧುನಿಕ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಸಲಹೆ ಕೇಳಿಬಂದಿತು.

ಎಫ್ಒಎಬಿಗೆ ಎಲ್ಲ ನೋಂದಾಯಿತ ಸಂಘ ಸಂಸ್ಥೆಗಳನ್ನು ಸೇರಿಸಿಕೊಳ್ಳಬೇಕು. ಫೌಂಡ್ರಿ ಕ್ಲಸ್ಟರ್ ನಲ್ಲಿ ಅಧಿಕೃತ ಕಚೇರಿ ಸ್ಥಾಪಸಲು ಅನುಮತಿ ಕೋರಬೇಕು ಎಂದು ನಿರ್ಣಯಿಸಲಾಯಿತು.

ಚೈತನ್ಯ ಕುಲಕರ್ಣಿ, ಸಚಿನ್ ಸಬ್ನಿಸ್, ಪರಾಗ್ ಭಂಡಾರೆ, ಡಾ.ಎಚ್.ಬಿ. ರಾಜಶೇಖರ್ , ಸತೀಶ್ , ಎಂ.ಕೆ.ಹೆಗಡೆ, ಗಡಿಯಣ್ಣನವರ್, ಎನ್.ಜಿ.ಕುಲಕರ್ಣಿ, ಸಂದೀಪ್ ಚಿಪ್ರೆ, ಎಸ್ ವೈ ಕುಂದರಗಿ, ಎಸ್.ಎಂ.ಮೇಟಿ, ಅಮಿತ್ ಕಾಲ್ಕುಂದ್ರಿ, ಸದಾನಂದ ಹುಂಬರವಾಡಿ ಮೊದಲಾದವರಿದ್ದರು. ಚೈತನ್ಯ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button