ಸರಕಾರಿ ಜಾಗ ಬಳಸಿ ಸಂತ್ರಸ್ತರಿಗೆ ಸೂರು ಕಲ್ಪಿಸಿ – ಅಶೋಕ ಪೂಜಾರಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಗೋಕಾಕ ನಗರದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಹಾಗೂ ವಸತಿ ರಹಿತ ಬಡ ಜನರಿಗೆ ಗೋಕಾಕ ಸರಹದ್ದಿನಲ್ಲಿರುವ ಸರಕಾರಿ ಜಾಗದಲ್ಲಿ ಶಾಸ್ವತ ವಸತಿ ಸೌಲಭ್ಯವನ್ನು ಕಲ್ಪಿಸುವಂತೆ ಆಗ್ರಹಿಸಿ, ಗೋಕಾಕಿನ ಹಿರಿಯ ಮುಖಂಡ ಅಶೋಕ ಪೂಜಾರಿ ಅವರ ನೇತೃತ್ವದಲ್ಲಿ ತಾಲೂಕಿನ ವಸತಿ ರಹಿತರು ಹಾಗೂ ಪ್ರಮುಖರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೋಮವಾರದಂದು ಮನವಿ ಸಲ್ಲಿಸಿ ಮಾತನಾಡಿದ ಅಶೋಕ ಪೂಜಾರಿ ಅವರು, ಗೋಕಾಕ ನಗರದ ಪಶ್ಚಿಮ ಮತ್ತು ಉತ್ತರ ದಿಕ್ಕಿಗೆ ಮಾರ್ಕಂಡೇಯ ಮತ್ತು ಘಟಪ್ರಭಾ ನದಿಗಳು ಹರಿಯುತ್ತವೆ. ಈ ಎರಡು ನದಿಗಳಿಗೆ ಮಾರ್ಕಂಡೇಯ ಜಲಾಶಯ, ಹಿಡಕಲ್ ಜಲಾಶಯ ಮತ್ತು ಧೂಪಧಾಳ ಜಲಾಶಯಗಳು ಗೋಕಾಕ ನಗರದ ಮೇಲ್ಮಟ್ಟದ ಪ್ರದೇಶಗಳಲ್ಲಿ ಇವೆ.
ಘಟಪ್ರಭಾ ನದಿಗೆ ಹಿರಣ್ಯಕೇಶಿ ಕೂಡುವುದರಿಂದ ಈ ಮೂರು ನದಿಗಳ ಪ್ರವಾಹಗಳಿಗೆ ಸಿಲುಕಿ ಗೋಕಾಕ ನಗರ ಮೇಲಿಂದ ಮೇಲೆ ಸಂಕಷ್ಟಕ್ಕೆ ಸಿಲುಕುತ್ತಿದೆ. ಈ ವರ್ಷದ ಆಗಷ್ಟ ತಿಂಗಳಲ್ಲಿಯ ಪ್ರವಾಹವು ಕಂಡು ಕೇಳರಿಯದ ಅವಾಂತರ ಸೃಷ್ಟಿಸಿದೆ. ಈ ಅವಾಂತರಕ್ಕೆ ಶಾಸ್ವತ ಪರಿಹಾರ ಕಂಡು ಹಿಡಿಯಬೇಕಾಗಿದೆ ಎಂದು ವಿವರಿಸಿದರು.
೩೧೨ ಎಕರೆ ೧೦ ಗುಂಟೆ
ನೆರೆಯಿಂದಾಗಿ ಸಾವಿರಾರು ಬಡ ಜನರು ಸೂರು ಕಳೆದುಕೊಂಡಿದ್ದಾರೆ. ಬಾಡಿಗೆಯಲ್ಲಿ ವಾಸಿಸುವ ಬಡ ಜನರು, ವಸತಿ ರಹಿತರು ಸೇರಿದಂತೆ ಸಾವಿರಾರು ಜನರಿಗೆ ಶಾಸ್ವತ ಸೂರು ಒದಗಿಸಬೇಕಾಗಿದೆ. ಇಷ್ಟೊಂದು ಜನರಿಗೆ ಖಾಸಗಿ ಜಮೀನು ಖರೀದಿಸಿ, ನಿವೇಶನ ಒದಗಿಸುವುದು ಸಾಧ್ಯವಿಲ್ಲ. ಗೋಕಾಕ ಸರಹದ್ದಿನಲ್ಲಿರುವ ಸವೇ ನಂ. ೨೪೪/ಎ ದಲ್ಲಿರುವ ಸರಕಾರದ ಸುಮಾರು ೩೧೨ ಎಕರೆ ೧೦ ಗುಂಟೆ ಜಾಗವನ್ನು ಅಭಿವೃದ್ದಿ ಪಡಿಸುವ ಮೂಲಕ ಅಲ್ಲಿ ಶಾಸ್ವತ ವಸತಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು.
ಈ ಪ್ರದೇಶದ ಜಮೀನನ್ನು ಬ್ರಿಟಿಷ್ ಸರಕಾರ ಸ್ವಾತಂತ್ರ ಪೂರ್ವದಲ್ಲಿ ಗೋಕಾಕ ಮಿಲ್ಸ್ ಕಂಪನಿಗೆ ನೀಡಿತ್ತು. ಆದರೆ, ಆ ಕಂಪನಿಯು ಪೂರ್ಣ ಜಮೀನನ್ನು ಉಪಯೋಗಿಸಿಕೊಂಡಿಲ್ಲ. ರಾಜ್ಯ ಸರಕಾರ ಲೀಜ್ ಅವಧಿ ವಿಸ್ತರಿಸಿರುವದೂ ಅವೈಜ್ಞಾನಿಕವಾಗಿದೆ. ಹಾಗಾಗಿ ಈ ಖುಲ್ಲಾ ಜಾಗವನ್ನು ಹಿಂದಕ್ಕೆ ಪಡೆದು ಅಲ್ಲಿ ತಾಲೂಕಿನ ವಸತಿ ರಹಿತರಿಗೆ ಶಾಸ್ವತ ವಸತಿ ಸೌಲಭ್ಯ ಕಲ್ಪಿಸುವಂತೆ ಸರಕಾರಕ್ಕೆ ವರದಿ ಕಳುಹಿಸುಂತೆ ಮನವಿ ಮಾಡಿದರು.
ಮನವಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಈ ಕುರಿತು ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಸುವುದಾಗಿ ಹಾಗೂ ವಸತಿ ರಹಿತರಿಗೆ ಶಾಸ್ವತ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದರು.
ದಸ್ತಗೀರ ಪಹೇಲ್ವಾನ್, ರಾಜು ಜಾಧವ, ಎ.ವೈ.ಪಂಗಣ್ಣವರ, ಸುನಿಲ ಮುರಕಿಭಾವಿ, ಎಂ.ಟಿ.ಪಾಟೀಲ, ಪ್ರವೀಣ ಪಾಟೀಲ, ಲಕ್ಷ್ಮಣ ತಳ್ಳಿ, ಸುಭಾಷ ಕವಲಗಿ, ಶ್ರೀಶೈಲ್ಯ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ