Election NewsKannada NewsKarnataka NewsLatestNationalPolitics

18ನೇ ಲೋಕಸಭೆ ಅಧಿವೇಶನ ಆರಂಭ; ನೂತನ ಸಂಸದರಿಂದ ಪ್ರಮಾಣ ವಚನ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ: 18ನೇ ಲೋಕಸಭೆ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಮೊದಲ ಎರಡು ದಿನ ನೂತನ ಸಂಸದರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ವಾರಣಾಸಿ ಸಂಸದರಾಗಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದು, ನೂತನ ಸಂಸದರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.

ಜೂ.26 ರಂದು ಲೋಕಸಭಾ ಸ್ಪೀಕರ್‌ ಆಯ್ಕೆ ನಡೆಯಲಿದ್ದು, 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬಿಜೆಪಿ ನಾಯಕ ಮತ್ತು ಏಳು ಬಾರಿ ಸಂಸದರಾಗಿ ಅನುಭವ ಇರುವ ಭರ್ತೃಹರಿ ಮಹತಾಬ್‌ ಅವರನ್ನು ಹಂಗಾಮಿ ಸ್ಪೀಕರ್‌ ಆಗಿ ನೇಮಿಸಲಾಗಿದೆ.  ಮಹತಾಬ್‌ ಅವರು ಸತತವಾಗಿ ಏಳು ಬಾರಿ ಲೋಕಸಭೆ ಸದಸ್ಯರಾಗಿದ್ದವರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಲೋಕಸಭೆಯ ಹಂಗಾಮಿ ಸ್ಪೀಕರ್‌ ಭರ್ತೃಹರಿ ಮಹತಾಬ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಬಳಿಕ ಮಹತಾಬ್‌ ಅವರು ಸಂಸತ್‌ ಭವನ ತಲುಪಿ, ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಅಧಿವೇಶನ ಆರಂಭಿಸಿದರು.

ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಹಂಗಾಮಿ ಸ್ಪೀಕರ್‌ಗೆ ನೆರವಾಗಲು ಸದಸ್ಯರಾದ ಕೆ. ಸುರೇಶ್‌ (ಕಾಂಗ್ರೆಸ್‌), ಟಿ.ಆರ್‌.ಬಾಲು (ಡಿಎಂಕೆ), ರಾಧಾ ಮೋಹನ್‌ ಸಿಂಗ್‌, ಫಗ್ಗನ್‌ ಸಿಂಗ್‌ ಕುಲಸ್ತೆ (ಇಬ್ಬರೂ ಬಿಜೆಪಿ) ಹಾಗೂ ಸುದೀಪ್‌ ಬಂದ್ಯೋಪಾಧ್ಯಾಯ (ಟಿಎಂಸಿ) ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ. ಬಳಿಕ, ಮಂತ್ರಿ ಪರಿಷತ್ತಿನ ಸದಸ್ಯರು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸುವರು. ಆ ನಂತರ ಎರಡು ದಿನಗಳವರೆಗೆ ಉಳಿದ ಸದಸ್ಯರ ಪ್ರಮಾಣವಚನ ಪ್ರಕ್ರಿಯೆ ನಡೆಯಲಿದೆ.

ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯು 28ರಂದು ಪ್ರಾರಂಭ ವಾಗಲಿದ್ದು, ಜುಲೈ 2 ಅಥವಾ 3ರಂದು ಪ್ರಧಾನಿ ಚರ್ಚೆಗೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ನಂತರ ಎರಡೂ ಸದನಗಳನ್ನು ಸಂಕ್ಷಿಪ್ತ ಅವಧಿಗೆ ಮುಂದೂಡಲಾಗುತ್ತದೆ. ಕೇಂದ್ರ ಬಜೆಟ್‌ ಮಂಡನೆಗಾಗಿ ಜುಲೈ 22ರಂದು ಮತ್ತೆ ಸದನದ ಕಲಾಪ ನಡೆಯುವ ನಿರೀಕ್ಷೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button