ಪ್ರಗತಿವಾಹಿನಿ ಸುದ್ದಿ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಸಂತೋಷ್ ಹಾಗೂ ಪುಟ್ಟರಾಜು ಬಂಧಿತ ಆರೋಪಿಗಳು. ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪಿಗಳ ಬಗ್ಗೆ ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಗೌಡ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ವಿಶ್ವವಿದ್ಯಾಲಯವೊಂದರ ಉಪ ಕುಲಪತಿಯೊಬ್ಬರಿಗೂ ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡಿತ್ತು. ಬಂಧಿತ ಆರೋಪಿಗಳ ಗ್ಯಾಂಗ್ ನಲ್ಲಿ ಓರ್ವ ಯುವತಿ ಕೂಡ ಭಾಗಿಯಾಗಿದ್ದು, ಪ್ರಭಾವಿಗಳ ಸಂಪರ್ಕ ಮಾಡಿ ಫಾಲೋ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.
ವಿಐಪಿಗಳನ್ನು ಭೇಟಿ ಮಾಡಿ, ಅವರು ಬಳಸಿದ್ದ ರೂಮ್ ಗಳನ್ನೇ ಪಡೆದು ಹಿಡನ್ ಕ್ಯಾಮರಾ ರೀತಿ ಕ್ಯಾಮರಾ ಇಟ್ಟು ವಿಡಿಯೋ ಮಾಡುತ್ತಿದ್ದರಂತೆ. ಯುವತಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿ ಬಳಿಕ ವಿಡಿಯೋಗಳನ್ನು ಕಳುಹಿಸಿ, ಇದು ನಿಮ್ಮದೇ ವಿಡಿಯೋ ಎಂದು ಬೆದರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ. ಅಲ್ಲದೇ ಕೋಟ್ಯಂತರ ರೂಪಾಯಿ ಬೇಡಿಕೆ ಇಡುತ್ತಿದ್ದರಂತೆ.
ಶಾಸಕ ಹರೀಶ್ ಗೌಡ ದೂರಿನ ಅನ್ವಯ ಕೇಸ್ ದಾಖಲಿಸಿಕೊಂಡಿದ್ದ ಪೊಲಿಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ