*ಬೆಂಗಳೂರು ಅಭಿವೃದ್ಧಿಯ ಹರಿಕಾರ ನಾಡಪ್ರಭು ಕೆಂಪೇಗೌಡರು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಬರುವ ಯಲಹಂಕದ ಪಾಳೇಗಾರರಾಗಿದ್ದರು. ಹಂಪಿಯ ವೈಭವನ್ನು ಕಂಡು ಯಲಹಂಕವನ್ನು ದೊಡ್ಡ ನಗರವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಕಂಡು ಬೆಂಗಳೂರು ಎಂಬ ಮಹಾನಗರ ನಿರ್ಮಾಣ ಮಾಡಿದರು. ವಿಶ್ವದಲ್ಲೇ ಎಲ್ಲ ನಗರಗಳಲ್ಲಿ ಅತೀ ಹೆಚ್ಚು ಕೆರೆಗಳು ಇರುವುದು ಬೆಂಗಳೂರಿನಲ್ಲಿ ಮಾತ್ರ. ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ ನಾಡಪ್ರಭು ಕೆಂಪೇಗೌಡರು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗುರುವಾರ (ಜೂ.27) ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಜನತೆ ಕೆಂಪೇಗೌಡರ ದೂರದೃಷ್ಟಿ, ಕಾರ್ಯವೈಖರಿಯಂತೆ ಅವರ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶ ಕಂಡ ಮಹಾನ್ ವ್ಯಕ್ತಿಗಳ ಚರಿತೆಯನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು. ನಿಮ್ಮ ಸಾಧನೆಯ ಮೂಲಕ ದೇಶವೇ ಹೆಮ್ಮೆ ಪಡುವಂತಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಕೊಟ್ಟು ಓದಬೇಕು. ನಿಮ್ಮ ಗುರಿ, ನಿಮ್ಮ ಸಾಧನೆ ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿ ಹೆಜ್ಜೆ ಹಾಕಬೇಕು. ಶಿಕ್ಷಣವೇ ನಿಮ್ಮ ಆಯುಧ ಉನ್ನತ ಶಿಕ್ಷಣ ಪಡೆದು ದೇಶಕ್ಕೆ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್, ಕೆಂಪೇಗೌಡರ ಸಾಧನೆ ವಿಶ್ವವೇ ಬೆರಗಾಗುವಂತೆ ಮಾಡಿದ ದೊಡ್ಡ ಸಾಧನೆ. ಸುಮಾರು 450 ವರ್ಷಗ ಹಿಂದೆಯೇ ಅವರು ಯಲಹಂಕದಂತಹ ಚಿಕ್ಕ ಊರನ್ನು ದೊಡ್ಡ ನಗರವಾಗಿ ನಿರ್ಮಾಣ ಮಾಡಿದ್ದಾರೆ. ಎಲ್ಲ ಯುವಕರಿಗೆ ಕೆಂಪೇಗೌಡರು ಎಲ್ಲ ಸ್ಫೂರ್ತಿ, ಅವರ ಜೀವನದ ಸಾಧನೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಸುಮಾರು 450 ವರ್ಷಗಳಷ್ಟು ಹಿಂದೆಯೇ ವ್ಯಾಪಾರಿಗಳನ್ನು ಕರೆತಂದು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರವರ ವೃತ್ತಿಗಳಿಗೆ ಅನುಸಾರವಾಗಿ ಪೇಟೆಗಳನ್ನು ನಿರ್ಮಿಸಿಕೊಟ್ಟು ನಗರವು ಬೆಳೆಯಲು ಅನುವು ಮಾಡಿಕೊಟ್ಟ ಕೀರ್ತಿ ಕೆಂಪೆಗೌಡರಿಗೆ ಸಲ್ಲುತ್ತದೆ.
ಕೆಂಪೇಗೌಡರು ನಿರ್ಮಿಸಿದ ಎಲ್ಲಾ ಪೇಟೆಗಳು ಇಂದಿಗೂ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ವಾಣಿಜ್ಯ ವ್ಯವಹಾರದ ಮಹತ್ವವುಳ್ಳ ಪೇಟೆಗಳಾಗಿವೆ. ನಾಡಿನ ಇತಿಹಾಸದಲ್ಲಿ ಯಾವುದೇ ರಾಜರೂ ಸಹ ತಮ್ಮ ಅವಧಿಯಲ್ಲಿ ಇಷ್ಟು ಕೆರೆಗಳನ್ನು ಕಟ್ಟಿಸಿರುವುದು ಕಂಡುಬರುವುದಿಲ್ಲ. ಇದು ಕೆಂಪೇಗೌಡರ ಇವರ ಹೆಗ್ಗಳಿಕೆಯಾಗಿದೆ ಎಂದು ಡಿಸಿಪಿ ರೋಹನ್ ಜಗದೀಶ್ ಅವರು ಹೇಳಿದರು.
ನಾಡಪ್ರಭು ಕೆಂಪೇಗೌಡ ಜೀವನ ಚರಿತ್ರೆ, ಪೇಟೆ, ಕೆರೆ, ಉದ್ಯಾನವನಗಳು, ದೇವಾಲಯಗಳ ನಿರ್ಮಾಣ ಅವರ ಸಾಧನೆಯ ಕುರಿತು ಹಿರಿಯ ಸಾಹಿತಿ ಡಾ. ಗುರುಪಾದ ಮಾರಿಗುದ್ದಿ ಅವರು ಉಪನ್ಯಾಸ ನೀಡಿದರು.
ಪುಸ್ತಕ ಬಿಡುಗಡೆ
ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆ ಮಾಡಿದರು.
ಪ್ರಬಂಧ ಸ್ಪರ್ಧೆ; ವಿಜೇತರಿಗೆ ಸನ್ಮಾನ
ಕಾರ್ಯಕ್ರಮದ ಕೊನೆಯಲ್ಲಿ ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಭಾಷಣ ಪ್ರಬಂಧ ಹಾಗೂ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಎಸ್.ಎಸ್.ಎಲ್. ಸಿ-ಪಿಯುಸಿ ಮತ್ತು ಪದವಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಡಿಸಿಪಿ ರೋಹನ್ ಜಗದೀಶ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನಕುಮಾರ ಹಂಚಾಟಿ, ಸಮಾಜದ ಮುಖಂಡರು, ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತ ಕೋರಿದರು. ಸುನೀತಾ ದೇಸಾಯಿ ನಿರೂಪಿಸಿ, ವಂದಿಸಿದರು.
ಮೆರವಣಿಗೆ ಕಾರ್ಯಕ್ರಮ
ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ್, ನಾಡಪ್ರಭು ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ನಗರದ ಕುಮಾರ ಕಲಾ ಮಂದಿರದವರೆಗೂ ತಲುಪಿತು. ಮೆರವಣಿಗೆ ಕಾರ್ಯಕ್ರಮದಲ್ಲಿ ವೀರಗಾಸೆ, ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರು ಹಾಗೂ ಮತ್ತಿತರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ