Belagavi NewsBelgaum NewsKannada NewsKarnataka News

*ನೀರಿನ ಸಂರಕ್ಷಣೆ ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶ: ಕೇಂದ್ರ ಜಲ ಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ ಸ್ವಾಮಿ* 

ಪ್ರಗತಿವಾಹಿನಿ ಸುದ್ದಿ: ನೀರಿನ ಸಂರಕ್ಷಣೆ ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಅಭಿಯಾನದ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಕೇಂದ್ರ ಜಲ ಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ. ಸ್ವಾಮಿ ಹೇಳಿದರು. 

ಬೆಳಗಾವಿ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ (ಜು-02)  ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಲಶಕ್ತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನೀರಿನ ಸಂರಕ್ಷಣೆಯ ಜೊತೆಗೆ ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳು, ಕೆರೆ-ಕಟ್ಟೆಗಳ ನವೀಕರಣ ಕೊಳವೆ ಬಾವಿಗಳ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ ಕಾಮಗಾರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳಿ ಎಂದರು. 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಬೆಂಬಲದೊಂದಿಗೆ ಜಲಶಕ್ತಿ ಅಭಿಯಾನದಡಿ 228 ಅಮೃತ ಸರೋವರ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ತಳಮಟ್ಟದಲ್ಲಿ ಇದರ ಅನುಷ್ಟಾನದಿಂದಾದ ಲಾಭ ಸ್ಥಳಿಯವಾಗಿ ಹಾಗೂ ಅಂತರ್ಜಲ ಕುರಿತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಜಿಲ್ಲಾ ಹಿರಿಯ ಭೂ ವಿಜ್ಞಾನಿ ರವರಿಗೆ  ತಿಳಿಸಿದರು.

ಜಲಶಕ್ತಿ ಅಭಿಯಾನದಡಿ ಕೈಗೊಂಡ ಕಾಮಗಾರಿಗಳಿಂದ ಸುತ್ತಲಿನ ಜನರು ಅಥವಾ ಸ್ಥಳಗಳಲ್ಲಿ ಆಗುತ್ತಿರುವ ಪ್ರಯೋಜನಗಳು, ಅಂತರ್ಜಲಮಟ್ಟ ಹಾಗೂ ನೀರು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು. ಸ್ವಸಹಾಯ ಸಂಘ, ಸಂಸ್ಥೆಗಳ ನೆರವಿನಿಂದ ಜಲಮೂಲಗಳನ್ನು ಅಭಿವೃದ್ಧಿಪಡಿಸಬೇಕು. ಎನ್.ಆರ್.ಎಲ್. ಎಮ್. ಯೋಜನೆಯ ಸ್ವಸಹಾಯ ಸಂಘಗಳು ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಂಘಗಳ ಸದಸ್ಯರನ್ನು ಜಲಮೂಲಗಳ ಸಂರಕ್ಷಣೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು. 

ಎಲ್ಲ ಸರ್ಕಾರಿ ಇಲಾಖೆಗಳು, ಶಾಲಾ- ಕಾಲೇಜುಗಳ ಕಟ್ಟಡದ ಮೇಲೆ ಮಳೆ ನೀರು ಕೊಯ್ಲು ನಿರ್ಮಿಸಲು ಜಾಗೃತಿ ಮೂಡಿಸಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳು ಜಲಮೂಲಗಳ ಸಂರಕ್ಷಣೆಯಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಸೆಂಟ್ರಲ್ ಗ್ರೌಂಡ ವಾಟರ್ ಬೊರ್ಡ ವಿಜ್ಞಾನಿ ಡಾ. ಸುಚೆತನಾ ಬಿಸ್ವಾಸ್, ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ ಸೇರಿದಂತೆ ಕೃಷಿ, ತೋಟಗಾರಿಕೆ, ಅರಣ್ಯ, ಜಿಯೋಲಾಜಿಕಲ್ ಇಲಾಖೆ, ಸಣ್ಣ ನೀರಾವರಿ, ನಗರಾಭಿವೃದ್ಧಿ ಕೋಶ (ಡಿ.ಯು.ಡಿಸಿ) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button