ಪ್ರಗತಿವಾಹಿನಿ ಸುದ್ದಿ: ಆರು ಜನರ ದುಷ್ಕರ್ಮಿಗಳ ಗ್ಯಾಂಗ್ ವೊಂದು ತಮಿಳುನಾಡು ಬಿಎಸ್ಪಿಯ ರಾಜ್ಯಾಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದು, ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ.
ಚೆನ್ನೈನ ಪೆರಂಬುರ್ ನಲ್ಲಿರುವ ಅವರ ನಿವಾಸದ ಸದಾಯಪ್ಪನ್ ರಸ್ತೆಯ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ಗಂಭೀರ ಸ್ಥಿತಿಗೆ ಜಾರಿದ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೂ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
10 ವಿಶೇಷ ಪೊಲೀಸ್ ತಂಡಗಳ ರಚನೆ
ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮಾಸ್ಟ್ರಾಂಗ್ ಅವರ ಹತ್ಯೆ ಪ್ರಕರಣದ ತನಿಖೆಗೆ ಚೆನ್ನೈನ 10 ವಿಶೇಷ ಪೊಲೀಸರ ತಂಡಗಳನ್ನು ರಚಿಸಲಾಗಿದೆ. ಚೆನ್ನೈ ಸಮೀಪದ ಪೆರಂಬೂರ್ ಬಳಿಯ ಅವರ ನಿವಾಸಕ್ಕೆ ಬೈಕ್ ನಲ್ಲಿ ಆಗಮಿಸಿದ 6 ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಆರ್ಮಾಸ್ಟ್ರಾಂಗ್ ಅವರನ್ನು ಹತ್ಯೆಗೈದಿದ್ದರು.
ಆರ್ಮಾಸ್ಟ್ರಾಂಗ್ ಅವರ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಚೆನ್ನೈನಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಆರ್ಮಸ್ಟ್ರಾಂಗ್ ನಂತರ ಪೆರಂಬೂರ್ ಗೆ ಮರಳಿ ಅಲ್ಲಿ ಜೀವನ ನಡೆಸುತ್ತಿದ್ದರು. ಪೆರಂಬೂರಿನಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕೆಲಸ ನೋಡಲು ಮನೆಯ ಬಳಿ ಬಂದಾಗ ದುಷ್ಕರ್ಮಿಗಳು ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ