ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಜುಲೈ 8 ಹಾಗೂ 9 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಉಸ್ತುವಾರಿ ಕಾರ್ಯದರ್ಶಿಗಳ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಗಳು…
ಜಿಲ್ಲಾಧಿಕಾರಿಗಳು- ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಿನ್ನೆ 10 ಗಂಟೆಯಿಂದ ನಡೆಯಿತು. ನಿನ್ನೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.15 ಗಂಟೆಯವರೆಗೆ ಸುಮಾರು 9 ಗಂಟೆಗಳ ಕಾಲ ಪರಿಶೀಲನಾ ಸಭೆ ನಡೆಸಲಾಯಿತು.
ಇಂದೂ ಕೂಡ 10.30 ರಿಂದ ಈವರೆಗೆ ನಡೆದಿದೆ.
- ಡಿ.ಸಿ. ಮತ್ತು ಸಿ.ಇ.ಓ. ಗಳ ಸಭೆ ಪ್ರತಿಯನ್ನು ಪ್ರತಿ 3 ತಿಂಗಳಿಗೆ ಒಮ್ಮೆ ನಡೆಸುವುದು ನಮ್ಮ ಉದ್ದೇಶ. ಕಳೆದ ವರ್ಷ 12-9-2023 ಮತ್ತು 13-9-2023 ರ ದಿನಾಂಕಗಳಂದು ಸಭೆ ನಡೆಸಿದ್ದೆವು. ಆ ನಂತರ ಅಕ್ಟೋಬರ್ ತಿಂಗಳಿನಿಂದಲೆ ಜಿಲ್ಲಾಧಿಕಾರಿಗಳು/ ಜಿಲ್ಲಾಡಳಿತ ಮತದಾರರ ಪಟ್ಟಿ ಸಿದ್ಧತೆ ಮತ್ತು ಚುನಾವಣಾ ತಯಾರಿಗಳಲ್ಲಿ ತೊಡಗಿಕೊಂಡರು. ಆದ್ದರಿಂದ ಸಭೆ ನಡೆಸಲಾಗಿರಲಿಲ್ಲ. ಆದರೆ ಹಲವು ವಿಡಿಯೊ ಕಾನ್ಫರೆನ್ಸ್ ಗಳನ್ನು ಮಾಡಿದ್ದೆವು. ಬರಗಾಲ, ಬರಗಾಲದ ಪರಿಹಾರ, ಕುಡಿಯುವ ನೀರು, ಮೇವು ಮುಂತಾದವುಗಳನ್ನು ನಿಭಾಯಿಸುವ ಕುರಿತೂ ಸಹ ಸಭೆಗಳನ್ನು ನಡೆಸಿದ್ದೆವು.
- ಈ ವರ್ಷದ ಜೂನ್ ಮೊದಲ ವಾರದವರೆಗೆ ಕೋಡ್ ಆಫ್ ಕಂಡಕ್ಟ್ ಇದ್ದ ಕಾರಣದಿಂದ ಜುಲೈ ಮೊದಲ ವಾರದಲ್ಲೆ ಸಭೆ ನಡೆಸುತ್ತಿದ್ದೇವೆ.
- ಡಿ.ಸಿ./ ಸಿ.ಇ.ಓ. ಗಳು ಸರ್ಕಾರ ಎಂಬ ವಾಹನದ ಚಕ್ರಗಳು/ ಸ್ಟೀಯರಿಂಗ್ ಇದ್ದ ಹಾಗೆ. ಇವುಗಳು ಸರಿಯಿದ್ದರೆ ಮಾತ್ರ ಸರಾಗವಾಗಿ ಮುನ್ನಡೆಯಲು ಸಾಧ್ಯ. ಇವುಗಳನ್ನು ಸರಿಯಾಗಿಟ್ಟುಕೊಳ್ಳಬೇಕೆಂಬ ಉದ್ದೇಶದಿಂದಲೆ ಈ ಸಭೆಗಳನ್ನು ನಡೆಸುತ್ತಿದ್ದೇವೆ.
- ಸಭೆಯಲ್ಲಿ ಚೆನ್ನಾಗಿ ಕೆಲಸ ಮಾಡುವವರ ಬೆನ್ನು ತಟ್ಟುವ ಹಾಗೆಯೆ, ಸರಿಯಾಗಿ ಕೆಲಸ ಮಾಡದವರ ಕಿವಿ ಹಿಂಡಿ ಚುರುಕುಗೊಳಿಸುವುದು ಸಭೆಯ ಒಂದು ಉದ್ದೇಶವಾದರೆ, ಮತ್ತೊಂದು ಮುಖ್ಯ ಉದ್ದೇಶ ಸರಕಾರದ ಧ್ಯೇಯೋದ್ದೇಶಗಳೇನು? ಆಶಯಗಳೇನು? ಆಸಕ್ತಿಗಳೇನು? ಆದ್ಯತೆಗಳೇನು? ಎಂಬುದನ್ನು ಮನವರಿಕೆ ಮಾಡಿಕೊಟ್ಟು ಕೆಲಸ ಮಾಡಿಸುವುದೂ ಆಗಿದೆ.
- ನಮ್ಮ ಉದ್ದೇಶ ದಮನಿತರು, ದಲಿತರು, ಮಹಿಳೆಯರು, ರೈತರು, ಕಾರ್ಮಿಕರು, ಯುವ ಜನರು, ಮಕ್ಕಳು ಮುಂತಾದವರ ಏಳಿಗೆ/ ಅಭಿವೃದ್ಧಿ ಸಾಧ್ಯವಾಗಬೇಕು. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗಬೇಕು. ಹಾಗಾಗಬೇಕಾದರೆ ಅವಕಾಶ ವಂಚಿತ ಜನರಿಗೆ ಹೆಚ್ಚು ಆದ್ಯತೆಗಳು ಸಿಗಬೇಕು . ಇವುಗಳ ಜೊತೆಗೆ ಪ್ರಾದೇಶಿಕ ಅಸಮಾನತೆ ಕೂಡ ಕಡಿಮೆಯಾಗಬೇಕು.
- ಸಭೆಯಲ್ಲಿ ವಿಪತ್ತು ನಿರ್ವಹಣೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ನರೇಗಾ, ಹೆದ್ದಾರಿ, ಮೂಲಸೌಕರ್ಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಅನರ್ಹ ಪಡಿತರ ಚೀಟಿಗಳ ರದ್ದು ಸೇರಿದಂತೆ 30 ಇಲಾಖೆಗಳ 68 ವಿಷಯಗಳ ಕುರಿತು ಚರ್ಚಿಸಲಾಯಿತು. ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ಜಿಲ್ಲಾವಾರು ಪರಿಶೀಲಿಸಲಾಯಿತು. ಕಡಿಮೆ ಸಾಧನೆಯಾದ ಜಿಲ್ಲೆಗಳ ಅಧಿಕಾರಿಗಳಿಗೆ ಕೆಲಸಗಳನ್ನು ಚುರುಕುಗೊಳಿಸುವಂತೆ ಸೂಚಿಸಲಾಯಿತು.
ವಿಪತ್ತು ನಿರ್ವಹಣೆ - ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹಿಂದಿನ ಅನುಭವದ ಆಧಾರದಲ್ಲಿ ರಾಜ್ಯದ 27ಜಿಲ್ಲೆಗಳ 177 ತಾಲ್ಲೂಕುಗಳ 1,247 ಗ್ರಾಮ ಪಂಚಾಯಿತಿಗಳಲ್ಲಿ ಪ್ರವಾಹದ ಅಪಾಯ ಹೊಂದಿರುವ (Flood prone) 2,225 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳ 20,38,334 ಜನರು ಪ್ರವಾಹ ಪೀಡಿತರಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಧಿಕಾರಿಗಳು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ. ಯಾವುದೇ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು.
- ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 783.69 ಕೋಟಿ ರೂ. ಅನುದಾನ ಲಭ್ಯವಿದೆ. ಪೂರ್ವ ಮುಂಗಾರು ಅವಧಿಯಲ್ಲಿ 3,714 ಮನೆ ಹಾನಿ ಹಾಗೂ ಬೆಳೆ ಹಾನಿ ಸಂಭವಿಸಿದೆ. ಇದಕ್ಕೆ ಎಸ್.ಡಿ.ಆರ್.ಎಫ್. ಮಾನದಂಡಗಳಂತೆ ಪರಿಹಾರ ವಿತರಿಸಲು ಸೂಚಿಸಲಾಗಿದೆ.
ಡೆಂಗ್ಯೂ ನಿಯಂತ್ರಿಸಿ. - ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಇದುವರೆಗೆ 7,362 ಪ್ರಕರಣ ಪತ್ತೆಯಾಗಿದ್ದು, ಪ್ರಸ್ತುತ 303 ಸಕ್ರಿಯ ಪ್ರಕರಣಗಳಿವೆ. 7 ಸಾವು ಸಂಭವಿಸಿದೆ. ಸೊಳ್ಳೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
- ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆಗೆ ವಿಶೇಷ ವಾರ್ಡ್ ಸಜ್ಜುಗೊಳಿಸಬೇಕು. ಮೆಡಿಕಲ್ ಕಾಲೇಜುಗಳಲ್ಲಿಯೂ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್ ಇರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇರಿಸಬೇಕು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಬೇಕು. ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ಪ್ರತಿದಿನ ಪರಿಶೀಲನೆ ನಡೆಸಬೇಕು. ಯಾವುದೇ ರೀತಿಯ ಉದಾಸೀನ ಪ್ರವೃತ್ತಿಯನ್ನು ಸಹಿಸುವುದಿಲ್ಲವೆಂದು ಮನವರಿಕೆ ಮಾಡಿಕೊಡಲಾಗಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಒಂದೂ ಸಾವು ಆಗದಂತೆ ಕ್ರಮವಹಿಸಬೇಕೆಂದು ನಿದೇಶನ ನೀಡಲಾಗಿದೆ.
- ಇದಾದ ಮೇಲೆ ಭವಿಷ್ಯದ ಕರ್ನಾಟಕವನ್ನು ನಿರ್ಮಾಣ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಲಾಯಿತು. ಸಭೆಯಲ್ಲಿ ತಕ್ಷಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ದೀರ್ಘಕಾಲೀನ ಕ್ರಮಗಳ ಕುರಿತು ಗಮನ ಹರಿಸಲಾಯಿತು.
- ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ ಕರ್ನಾಟಕ ಕಟ್ಟಲು ಹಾಕಿಕೊಳ್ಳಬೇಕಾದ ಗುರಿಗಳು, ತೆಗೆದುಕೊಳ್ಳಬೇಕಾದ ಕ್ರಮಗಳೇನು? ಅದಕ್ಕಾಗಿ ಜಿಲ್ಲಾಡಳಿತವು ಈ ಕ್ಷಣದಿಂದ ಏನು ಮಾಡಬೇಕು ಎಂಬ ಸೂಚನೆಗಳನ್ನು ನೀಡಲಾಗಿದೆ. ಅವಕಾಶ ವಂಚಿತ ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು, ಉತ್ಪಾದನಾ ಚಟುವಟಿಕೆಗಳು ಹೆಚ್ಚಾಗಬೇಕು, ಕೈಗಾರಿಕೆಗಳು ಬರಬೇಕು, ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಜನರು ಸ್ವಂತ ವೆಚ್ಚದಿಂದ ಆಸ್ಪತ್ರೆಗಳಿಗೆ ಖರ್ಚು ಮಾಡಿ ಬಡತನಕ್ಕೆ ಜಾರಬಾರದು.
- ಇದು ಸಾಧ್ಯವಾಗಬೇಕಾದರೆ ನಾವು ನಮ್ಮ ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಅನುದಾನ ಒದಗಿಸಿದ್ದೇವೆ. ಇವುಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಬೇಕಾದವರು ಡಿ.ಸಿ./ಸಿ.ಇ.ಓ.ಗಳು, ಮುಂತಾದ ಅಧಿಕಾರಿಗಳು. ನೀವು ಸಮರ್ಪಕವಾಗಿ ಕೆಲಸ ಮಾಡಬೇಕು ಎಂದು ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದೇವೆ.
- ಬಡವರು, ದುಡಿಯುವ ವರ್ಗಗಳಿಗೆ ಸರ್ಕಾರದ ಅಗತ್ಯತೆ ಬಹಳ ಇರುತ್ತದೆ. ಸರ್ಕಾರ ಜನಪರವಾಗಿ ಕೆಲಸ ಮಾಡಿದರೆ ಮಾತ್ರ ಈ ವರ್ಗಗಳ ಅಭಿವೃದ್ಧಿ ಸಾಧ್ಯವಾಗುತ್ತದೆಂದು ಮನವರಿಕೆ ಮಾಡಿಕೊಡಲಾಗಿದೆ.
- ಆದ್ದರಿಂದಲೆ ನಾವು ನಿನ್ನೆಯಿಂದ ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆ ನಡೆಸಿದ್ದೇವೆ. ಗುಣ ಮಟ್ಟದ ಶಿಕ್ಷಣ ದೊರೆಯದಿದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ.
- ಕರ್ನಾಟಕ ರಾಜ್ಯವು ಪ್ರಗತಿ ಪರ ರಾಜ್ಯ ಎಂದು ಕರೆಸಿಕೊಳ್ಳಬೇಕಾದರೆ ಇಲ್ಲಿ ಅತ್ಯುತ್ತಮ ಶಿಕ್ಷಕರು ಶ್ರಮಿಸಿ ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಕೊಟ್ಟಿದ್ದರು. ಹೆಚ್ಚು ಬುದ್ಧಿವಂತ ಜನರು ಈ ನಾಡಿನಿಂದ ಸೃಷ್ಟಿಯಾಗುತ್ತಿದ್ದರು. ಉತ್ತಮ, ಉದಾತ್ತ, ವೈಜ್ಞಾನಿಕ , ವೈಚಾರಿಕ ಶಿಕ್ಷಣ ಇಲ್ಲಿ ಸಾಧ್ಯವಾದ ಕಾರಣಕ್ಕೆ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಉತ್ತಮವಾದ, ವೈಚಾರಿಕ, ವೈಜ್ಞಾನಿಕವಾದ ಶಿಕ್ಷಣ ಇದ್ದರೆ ಮಾತ್ರ ಉದಾತ್ತವಾದ, ಸಹನಶೀಲವಾದ ಸಮಾಜ ನಿರ್ಮಾಣವಾಗುತ್ತದೆ. ಇದರಿಂದ ಶಾಂತಿ-ಸುವ್ಯವಸ್ಥೆಗಳು ನಿರ್ಮಾಣವಾಗುತ್ತವೆ. ಶಾಂತಿ ಸುವ್ಯವಸ್ಥೆ ಸಮರ್ಪಕವಾದರೆ ಸಮಗ್ರ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಡಲಾಗಿದೆ.
- 9,811 ಶಾಲಾ ಕೊಠಡಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 1,000 ಪಿ.ಯು. ಕಾಲೇಜುಗಳ ಕೊಠಡಿಗಳು ಸೇರಿವೆ. ಅವುಗಳನ್ನು ಶೀಘ್ರವಾಗಿ ನಿರ್ಮಿಸಿ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಶಿಕ್ಷಕರು ಶ್ರದ್ಧೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಅವರಲ್ಲಿ ಬದ್ಧತೆ ಮತ್ತು ಶಿಸ್ತು ಮೈಗೂಡುವಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ಮುಂದಿನ ಸಭೆಯ ವೇಳೆಗೆ ಈ ಕುರಿತು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
- ವಸತಿ ನಿಲಯ, ವಸತಿ ಶಾಲೆಗಳಿಗೆ 114 ಕಡೆ ಮತ್ತು 8,058 ಅಂಗನವಾಡಿಗಳಿಗೆ ಜಾಗ ಕೊಡಲು ಬಾಕಿ ಇದೆ. ಅಲ್ಲೆಲ್ಲ ಕೂಡಲೆ ಜಾಗ ಕೊಡಬೇಕೆಂದು ನಿರ್ದೇಶನ ನೀಡಲಾಗಿದೆ.
- ಇಷ್ಟೆಲ್ಲ ಮಾಡುವುದರ ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕು. ಆದ್ದರಿಂದಲೆ ನಾನು ಎಸ್ಎಸ್ಎಲ್ಸಿ ಯಾಗಲಿ, ಪಿಯುಸಿಯಾಗಲಿ ಯಾವುದೇ ಗ್ರೇಸ್ ಮಾರ್ಕ್ಸ್ ಕೊಡಬಾರದು ಎಂದು ಹೇಳಿದ್ದೇನೆ. ಡಿಸಿ/ಸಿಇಓಗಳು ಶಿಕ್ಷಣದ ಕುರಿತು ಅತಿ ಹೆಚ್ಚು ಗಮನಹರಿಸಬೇಕೆಂದು ಸೂಚನೆ ನೀಡಿದ್ದೇನೆ. ಶಿಕ್ಷಕರು ಶ್ರದ್ಧೆಯಿಂದ ಕೆಲಸ ಮಾಡಬೇಕು.
- ಇದರ ಜೊತೆಗೆ ಜನ ಸಂಪರ್ಕ ಸಭೆಗಳನ್ನು ನಡೆಸಬೇಕು. ಜಿಲ್ಲಾಡಳಿತ ಸಮರ್ಪಕವಾಗಿ ಕೆಲಸ ಮಾಡಿದರೆ ರಾಜ್ಯ ಮಟ್ಟದ ಜನಸ್ಪಂದನ ಸಭೆಗಳಿಗೆ ಕಡಿಮೆ ಜನ ಬರುತ್ತಾರೆ.
22.ನಾವೆಲ್ಲರೂ ಭವಿಷ್ಯದ ಕರ್ನಾಟಕ ಕುರಿತು ಆತಂಕಿರರಾಗಬೇಕಾಗಿದೆ. ರಾಜ್ಯದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಒಂದು ಸ್ಯಾಂಪಲ್ ಸರ್ವೆಯ ಪ್ರಕಾರ ರಾಜ್ಯದ ಶೇ. 33.78 ರಷ್ಟು ಮಣ್ಣು ಅಸಿಡಿಕ್ ಆಗಿದೆ. ಶೇ. 26.7 ರಷ್ಟು ಆಲ್ಕಲೈನ್ ಆಗಿದೆ. ಸಹಜವಾಗಿರುವ ಮಣ್ಣಿನ ಪ್ರಮಾಣ ಸುಮಾರು ಶೇ.40 ರಷ್ಟು. ಇದರಿಂದ ಜನರು ರಸಗೊಬ್ಬರ ಬಳಸುವ ಪ್ರಮಾಣ ಹೆಚ್ಚಾಗುತ್ತಿದೆ. 2014-15 ರಲ್ಲಿ 37.4 ಲಕ್ಷ ಮೆಟ್ರಿಕ್ ಟನ್ ಬಳಕೆಯಾಗುತ್ತಿದ್ದರೆ, 2023-24 ರಲ್ಲಿ 40 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬಳಕೆಯಾಗಿದೆ. 2017-18 ರಲ್ಲಿ 16.66 ಲಕ್ಷ ಮಣ್ಣು ಮಾದರಿಗಳ ಪರೀಕ್ಷೆ ಮಾಡಲಾಗಿತ್ತು. ಇದರ ಪ್ರಕಾರ ಶೇ. 50.41 ರಷ್ಟು ಸಹಜ ಕಾರ್ಬನ್ನಿನ ಕೊರತೆ ಇದೆ. ನೈಟ್ರೋಜನ್ನಿನ ಕೊರತೆ ಶೇ.73.77 ರಷ್ಟಿದೆ. ಪೊಟ್ಯಾಶಿಯಂನ ಕೊರತೆ ಶೇ.24.94 ರಷ್ಟು. ಈ ಕೊರತೆಯನ್ನು ರೈತರು ರಸಗೊಬ್ಬರದ ಮೂಲಕ ತುಂಬಿಕೊಳ್ಳಲು ನೋಡುತ್ತಿದ್ದಾರೆ. ಇದು ಭವಿಷ್ಯದಲ್ಲಿ ಬಹಳ ದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕುತ್ತದೆ. ರೈತರ ಖರ್ಚು ಹೆಚ್ಚಾಗುತ್ತಿದೆ, ಅದಕ್ಕೆ ತಕ್ಕನಾಗಿ ಬೆಲೆಗಳು ಸಿಗುತ್ತಿಲ್ಲ. ನಮ್ಮ ರೈತರ ಉತ್ಪನ್ನಗಳಲ್ಲಿ ಕೆಮಿಕಲ್ಲುಗಳು ಜಾಸ್ತಿಯಾಗುತ್ತಿವೆ. ಇದರಿಂದ ಜನರ ಭೌತಿಕ ಮತ್ತು ಬೌದ್ಧಿಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ರೋಗಗ್ರಸ್ತ ಜನರು ತುಂಬಿ ಹೋಗುತ್ತಾರೆ. ಆದ್ದರಿಂದ ಡಿ.ಸಿ./ಸಿ.ಇ.ಓ.ಗಳು
ಸಾವಯವ ಕೃಷಿ, ನೈಸಗಿಕವಾದ ಕಾರ್ಬನ್ ಹೆಚ್ಚಿಸಲು ಕ್ರಮವಹಿಸಬೇಕೆಂದು ಸೂಚಿಸಿದ್ದೇವೆ.
- ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ನಗರ ಆಡಳಿತ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಇಲಾಖೆಗಳು ಹೆಚ್ಚು ಜನಪರವಾಗಿ ಕೆಲಸ ಮಾಡಿದರೆ ಜನರ ಬಹುಪಾಲು ಸಮಸ್ಯೆಗಳು ಕಡಿಮೆಯಾಗುತ್ತವೆ.
- ಕಂದಾಯ ಇಲಾಖೆಯಲ್ಲಿ ಹಲವಾರು ಹೊಸ ಉಪಕ್ರಮ(ಇನಿಷಿಯೇಟಿವ್) ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲಿ ಸರ್ಕಾರಿ ಜಮೀನು ಒತ್ತುವರಿ ತಡೆಯಲು ಲ್ಯಾಂಡ್ ಬೀಟ್ ಮಾಡಲಾಗುತ್ತಿದೆ. ಕಂದಾಯ ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಲಾಗುತ್ತಿದೆ. ಬಾಕಿ ಇರುವ ಫೋಡಿ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಹೊಸದಾಗಿ ಸರ್ವೆಯರ್ ಗಳನ್ನು ನೇಮಕ ಮಾಡಲಾಗುತ್ತಿದೆ. ಬಾಕಿ ಉಳಿದ ಕಂದಾಯ ಗ್ರಾಮಗಳ ಘೋಷಣೆ ಮಾಡಿ ಅವರಿಗೆ ಹಕ್ಕು ಪತ್ರ ನೀಡುವ ಪ್ರಕ್ರಿಯೆಯನ್ನು ಚುರುಕುಗೊಂಡಿಸಲಾಗಿದೆ.
- ಕಂದಾಯ ನ್ಯಾಯಾಲಯಗಳಲ್ಲಿ ಕಳೆದ ಒಂದು ವರ್ಷದಲ್ಲಿ 52,238 ಪ್ರಕರಣಗಳು ಇತ್ಯರ್ಥವಾಗಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಪ್ರತಿ ಪ್ರಕರಣ ಇತ್ಯರ್ಥವಾಗಲು ಸರಾಸರಿ 212 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಅದು 97 ದಿನಗಳಿಗೆ ಇಳಿಕೆಯಾಗಿದೆ. ಆದರೂ ವಿವಿಧ ಕಾರಣಗಳಿಗಾಗಿ ಹೊಸದಾಗಿ ದಾಖಲಿಸಿಕೊಂಡ ಅಪೀಲುಗಳೂ ಸೇರಿ 56,000 ಪ್ರಕರಣಗಳು ಕಂದಾಯ ನ್ಯಾಯಾಲಯಗಳಲ್ಲಿವೆ. ಅವುಗಳನ್ನು ನಿಗಧಿತ ಕಾಲಾವಧಿಯಲ್ಲಿ ಇತ್ಯರ್ಥಗೊಳಿಸಲು ನಿರ್ದೇಶನ ನೀಡಲಾಗಿದೆ.
- ರಾಜ್ಯದ ರೈತರ ಬಹುಕಾಲದ ಬೇಡಿಕೆಯಾದ ಫೋಡಿಗಳನ್ನು ಪ್ರಾರಂಭಿಸಿದ್ದೇವೆ. ಅದಕ್ಕಾಗಿ ಹೊಸದಾಗಿ 750 ಸರ್ವೆಯರ್ ಗಳನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ. ಇದರ ಜೊತೆಗೆ 1,000 ವಿಲೇಜ್ ಅಕೌಂಟೆಂಟ್ ಗಳ ನೇಮಕಾತಿಯೂ ನಡೆಯುತ್ತಿದೆ. ಜಿಲ್ಲಾಧಿಕಾರಿಗಳು ಕೂಡಲೆ ಫೋಡಿ ಪ್ರಕರಣಗಳು, ದರಖಾಸ್ತು ಫೋಡಿಗಳನ್ನು ಮಾಡಿ ದೀರ್ಘ ಕಾಲದ ಸಮಸ್ಯೆಯನ್ನು ಮುಕ್ತಾಯ ಮಾಡಲು ಕ್ರಮವಹಿಸಲು ಸೂಚನೆ ನೀಡಲಾಗಿದೆ.
- ರಾಜ್ಯದಲ್ಲಿ ಸರ್ಕಾರಿ ಜಮೀನು ಗುರುತಿಸಿ, ಅವುಗಳ ರಕ್ಷಣೆ ಮಾಡಲು ಲ್ಯಾಂಡ್ ಬೀಟ್ ಎಂಬ ತಂತ್ರಾಂಶ ರೂಪಿಸಲಾಗಿದೆ. 91,000 ಜಮೀನುಗಳ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದೆ.
- ಭೂ ಸುರಕ್ಷಾ ಕಾರ್ಯಕ್ರಮದಡಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಇಂಡೆಕ್ಸ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಈ ವರೆಗೆ 3.28 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. 31 ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಆಗಸ್ಟ್‌ನಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಕೈಗೊಳ್ಳಲಾಗುವುದು.
- ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 33,841 ಪೆನ್ಷನ್ ಅರ್ಜಿಗಳು ಇತ್ಯರ್ಥ ಮಾಡಬೇಕೆಂದು ಸೂಚಿಸಲಾಯಿತು. ಅರ್ಜಿ ಬಂದ 45 ದಿನಗಳ ಒಳಗೆ ಇತ್ಯರ್ಥ ಮಾಡಬೇಕೆಂಬ ನಿಯಮವಿದೆ. ಅದನ್ನು 30 ದಿನಗಳಿಗೆ ಇಳಿಕೆ ಮಾಡಲು ಸೂಚನೆಗಳನ್ನು ನೀಡಲಾಗಿದೆ.
30.ನೀವುಗಳು ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳಾಗಿ/ ಸಿಇಓಗಳಾಗಿ ಹೋಗುವಾಗ ಆಯಾ ಜಿಲ್ಲೆಯ ಲೆಗಸಿ ಏನು? ಅದರ ವೈಶಿಷ್ಟö್ಯತೆ ಏನು? ಜನರ ವೈಶಿಷ್ಟö್ಯತೆ ಏನು? ಅಲ್ಲಿನ ಬಡತನ, ಶಿಕ್ಷಣ, ಆರೋಗ್ಯ, ಜಾತಿ/ ವರ್ಗಗಳ ಸ್ಥಿತಿ ಗತಿ, ಪರಿಸರ, ಉತ್ಪಾದಕತೆ, ಕೈಗಾರಿಕೆಗಳು ಇತ್ಯಾದಿಗಳ ಕುರಿತು ನಿಮಗೆ ತಿಳುವಳಿಕೆ ಇರಬೇಕು. ಆಯಾ ಜಿಲ್ಲೆಯ ಗೆಝೆಟಿಯರ್‌ಗಳನ್ನು ಓದಿಕೊಳ್ಳಬೇಕು, ಎಕನಾಮಿಕ್ ಸರ್ವೆ ಮುಂತಾದವುಗಳನ್ನು ತಿಳಿದುಕೊಳ್ಳಬೇಕು. ಬೀದರ್ ಇದ್ದ ಹಾಗೆ ಮಂಗಳೂರು ಇಲ್ಲ, ಕೋಲಾರವೂ ಇಲ್ಲ.
ಕಲುಷಿತ ನೀರು
- ಕಲುಷಿತ ನೀರು ಕುಡಿದು ಹಲವು ಸಾವು- ನೋವುಗಳು ಸಂಭವಿಸಿವೆ. ಇಂತಹ ಪ್ರಕರಣಗಳು ಮರುಕಳಿಸಿದರೆ, ಹಿರಿಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ನಗರ ಹಾಗೂ ಗ್ರಾಮೀಣ ಪ್ರದೇಶಗಳೆರಡರಲ್ಲೂ ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷೆ ಮಾಡಬೇಕು ಎಂದು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವುಗಳು ಸಂಭವಿಸಿದರೆ ಅಂಥ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲೂ ಹಿಂಜರಿಯುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.
- ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆಗೆ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಕಲುಷಿತ ನೀರು ಪರೀಕ್ಷೆಗೆ ಸಾಕಷ್ಟು ಪ್ರಮಾಣದಲ್ಲಿ ಕಿಟ್ ಲಭ್ಯವಿದೆ. ಪ್ರತಿ ಹೋಬಳಿಗೆ ಭೇಟಿ ನೀಡಿ ಪ್ರಮಾಣ ಪತ್ರ ಒದಗಿಸಲು ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಇದುವರೆಗೆ 42945 ಜನವಸತಿ ಪ್ರದೇಶಗಳಲ್ಲಿ ಜಂಟಿ ತಪಾಸಣೆ ನಡೆಸಲಾಗಿದೆ.
- ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳ ದುರಸ್ತಿಗೆ ಯೋಜನೆ ರೂಪಿಸಬೇಕು. ಈಗಾಗಲೇ ಅಂತಹ ಶುದ್ಧ ನೀರು ಘಟಕಗಳ ಪರಿಶೀಲನೆ ನಡೆಸಲಾಗಿದ್ದು, ಸಮರ್ಪಕ ಯೋಜನೆ ರೂಪಿಸಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
- ಪಿ.ಡಿ.ಓ. ಗಳು, ಗ್ರಾಮಲೆಕ್ಕಾಧಿಕಾರಿಗಳು ತಾವು ಕೆಲಸ ಮಾಡುವ ಕೇಂದ್ರ ಸ್ಥಾನದಲ್ಲಿಯೇ ನೆಲೆಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಿ.ಇ.ಓ.ಗಳು ನಿಗಾ ವಹಿಸಬೇಕು.
ಜನಸ್ಪಂದನ ಅರ್ಜಿಗಳ ಸಕಾರಾತ್ಮಕ ವಿಲೇವಾರಿ:
- ಎರಡು ಜನಸ್ಪಂದನ ಸಭೆ ನಡೆಸಿದಾಗ 15 ರಿಂದ 20 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಜಿಲ್ಲಾಧಿಕಾರಿಗಳು ಕೇವಲ ಅರ್ಜಿಗಳನ್ನು ವರ್ಗಾಯಿಸಿ ಸುಮ್ಮನಾಗಬೇಡಿ. ಅವರ ಸಮಸ್ಯೆಗಳನ್ನು ಬಗೆಹರಿಸಿ. ಅವರಿಗೆ ಪರಿಹಾರ ಒದಗಿಸಿ. ನಿಯಮಾನುಸಾರ ಅವರಿಗೆ ಪರಿಹಾರ ಒದಗಿಸಲು ಸಾಧ್ಯವಾಗದಿದ್ದರೆ ಹಿಂಬರಹ ಒದಗಿಸಿ. ಅರ್ಜಿಗಳ ವಿಲೇವಾರಿ ಸಕಾರಾತ್ಮಕವಾಗಿಲ್ಲ. ಜನರಿಗೆ ಪರಿಹಾರ ದೊರೆಯುವಂತಹ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.
- ಜನಸ್ಪಂದನ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಆರಂಭಿಸಬೇಕು. ಅಧಿವೇಶನದ ಮುಗಿದ ಬಳಿಕ ಜಿಲ್ಲಾ ಜನಸ್ಪಂದನ ಕಾರ್ಯಕ್ರಮವನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ತಪ್ಪದೇ ಜನಸ್ಪಂದನಾ ಸಭೆಗಳನ್ನು ಮಾಡಬೇಕು. ಜಿಲ್ಲಾಧಿಕಾರಿಗಳು ಸ್ವೀಕರಿಸುವ ಅರ್ಜಿಗಳನ್ನು ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು. 40,702 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಇನ್ನೂ 8ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದೆ. ತಕ್ಷಣ ವಿಲೇವಾರಿ ಮಾಡಲು ಸೂಚಿಸಲಾಗಿದೆ.
ವಲಸೆ ಕುರಿಗಾರರ ಹಿತ ಕಾಪಾಡಿ. - ಎಲ್ಲ ವಲಸೆ ಕುರಿಗಾರರಿಗೆ ಗುರುತಿನ ಚೀಟಿ ವಿತರಿಸಬೇಕು. ಕುರಿಗಾರರು ಕ್ಯಾಂಪ್ ಮಾಡಿರುವ ಸ್ಥಳಕ್ಕೇ ಪಶುವೈದ್ಯರು ತೆರಳಿ ಲಸಿಕೆ ಹಾಗೂ ಚಿಕಿತ್ಸೆ ನೀಡಬೇಕು. ಕುರಿಗಳ ಆಕಸ್ಮಿಕ ಮರಣ ಸಂಭವಿಸಿದಲ್ಲಿ ಮಾಲೀಕರಿಗೆ ತ್ವರಿತವಾಗಿ ಪರಿಹಾರ ವಿತರಿಸಬೇಕು.
ವಿದ್ಯಾರ್ಥಿ ವೇತನ, ಹಾಸ್ಟೆಲ್ ಪ್ರವೇಶ
- ರಾಜ್ಯದಲ್ಲಿ ಮೊದಲ ಬಾರಿಗೆ 1,31,21,302 ಮೆಟ್ರಿಕ್ ಪೂರ್ವ ಮಕ್ಕಳಿಗೆ ಮೊದಲ ಬಾರಿಗೆ ಪ್ರಥಮ ತ್ರೈಮಾಸಿಕ ಅವಧಿಯಲ್ಲಿಯೇ ವಿದ್ಯಾರ್ಥಿ ವೇತನ ನೀಡಲಾಗಿದ್ದು, 95,436 ವಿದ್ಯಾರ್ಥಿಗಳ ಆಧಾರ್ ಸೀಡ್ ಮಾಡಬೇಕಾಗಿದೆ. ಇದನ್ನು ಶೀಘ್ರವೇ ಪೂರ್ಣಗೊಳಿಸಲು ಸೂಚಿಸಲಾಯಿತು.
- ಹಾಸ್ಟೆಲ್ ಪ್ರವೇಶ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕವೇ ಕೈಗೊಳ್ಳಬೇಕು. ತಾಂತ್ರಿಕ ತೊಡಕುಗಳಿದ್ದರೆ ನಿವಾರಿಸಿಕೊಂಡು, 10 ದಿನಗಳ ಒಳಗೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಇಂದಿರಾ ಕ್ಯಾಂಟೀನ್
- ಈಗಾಗಲೇ ಅನುಮತಿ ನೀಡಲಾಗಿರುವ ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಆದಷ್ಟು ಬೇಗನೆ ಜಾಗ ಗುರುತಿಸಬೇಕು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 70 ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಆದಷ್ಟು ಬೇಗನೆ ಸ್ಥಳ ಗುರುತಿಸಬೇಕು. ಹೊಸ ಮೆನು ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು.
ರಾಷ್ಟ್ರೀಯ ಹೆದ್ದಾರಿ/ ರೈಲ್ವೆ ಇಲಾಖೆಗಳ ಭೂಸ್ವಾಧೀನ
- ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎದುರಾಗುವ ತಾಂತ್ರಿಕ ತೊಂದರೆಗಳನ್ನು ಎರಡು ತಿಂಗಳ ಒಳಗಾಗಿ ಬಗೆಹರಿಸಬೇಕು. ರಾಜ್ಯದ ಸುಮಾರು 50 ಕಡೆ ತಾಂತ್ರಿಕ ಕಾರಣಗಳಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು. ಇನ್ನಿತರ ತೊಡಕುಗಳನ್ನು ಆದಷ್ಟು ಬೇಗನೆ ನಿವಾರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಮೀನು ಹಸ್ತಾಂತರಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ಕಾರಣದಿಂದ ಯೋಜನೆ ಅನುಷ್ಠಾನ ವಿಳಂಬವಾಗಬಾರದು. ಆದ್ಯತೆ ಮೇರೆಗೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು.
ಆಹಾರ ನಾಗರಿಕ ಸರಬರಾಜು
- ರಾಜ್ಯದಲ್ಲಿ 4,37,23,911 ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಬಿಪಿಎಲ್ ಅಡಿಯಲ್ಲಿ 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿವೆ. ಈ ಕುರಿತು ಪರಿಶೀಲನೆ ನಡೆಸಿ, ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು. ಒಟ್ಟಾರೆ ಸಾರಾಂಶ ಒಬ್ಬ ಅರ್ಹರೂ ಬಿಟ್ಟು ಹೋಗಬಾರದು. ಅನರ್ಹರು ಸವಲತ್ತು ಪಡೆಯಬಾರದು. ಈ ಕುರಿತು ಅಗತ್ಯ ಕ್ರಮವಹಿಸಬೇಕೆಂದು ತಿಳಿಸಲಾಗಿದೆ.
ಪ್ರವಾಸೋದ್ಯಮ
43.ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಗುರುತಿಸಬೇಕು. ಖಾಸಗಿ ಸಹಭಾಗಿತ್ವದಲ್ಲಿ ಮಾತ್ರವಲ್ಲ ಸರ್ಕಾರದ ವತಿಯಿಂದಲೂ ಹೆಜ್ಜೆ ಇರಿಸಬೇಕು. ರಾಜ್ಯದಲ್ಲಿ ನಿರುದ್ಯೋಗ ಹೋಗಲಾಡಿಸಲು ಸಮರ್ಥ ಕ್ಷೇತ್ರ ಪ್ರವಾಸೋದ್ಯಮವಾಗಿದೆ. ಕರಾವಳಿ, ಮಲೆನಾಡು ಮತ್ತು ಬಯಲು ಸೀಮೆಗಳ ವಿವಿಧ ಪ್ರದೇಶಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿವೆ. ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿ ಪ್ರವಾಸೋದ್ಯಮದ ಚಟುವಟಿಕೆಗಳನ್ನು ಹೆಚ್ಚಿಸಲು ಕ್ರಮವಹಿಸಬೇಕೆಂದು ಸೂಚಿಸಲಾಗಿದೆ.
ಅಪಘಾತಗಳ ನಿಯಂತ್ರಣಕ್ಕೆ ಸಮನ್ವಯ ಅಗತ್ಯ –
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ
44.ಜಿಲ್ಲಾಧಿಕಾರಿಗಳು ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ರಾಜ್ಯದಲ್ಲಿ [ನಗರ + ಗ್ರಾಮೀಣ ಪ್ರದೇಶಗಳು ಸೇರಿ] 2023 ರ ಏಪ್ರಿಲ್‌ನಿಂದ 2024 ರ ಮಾರ್ಚ್ವರೆಗೆ 43,780 ಅಪಘಾತಗಳಾಗಿವೆ. 11,611 ಜನ ಮರಣ ಹೊಂದಿದ್ದಾರೆ. 51,207 ಜನರು ಗಾಯಗೊಂಡಿದ್ದಾರೆ. ಯಾವುದೇ ಕುಟುಂಬ ಅಪಘಾತಕ್ಕೆ ತುತ್ತಾದರೆ ಸಂಪೂರ್ಣ ಬಡತನಕ್ಕೆ ಜಾರುತ್ತದೆ. 18-35 ರ ವಯಸ್ಸಿನವರು ಶೇ.45 ರಷ್ಟು ಜನರು ಅಪಘಾತಗಳಿಂದ ಮರಣ ಹೊಂದುತ್ತಿದ್ದಾರೆ.
45.ಜಿಲ್ಲಾಡಳಿತ ಒಂದಿಷ್ಟು ಆಸಕ್ತಿ ವಹಿಸಿದರೆ ಸಾವು ನೋವುಗಳನ್ನು ಅರ್ಧಕ್ಕರ್ಧ ಕಡಿಮೆ ಮಾಡಬಹುದು.
46.ರಾಜ್ಯದಲ್ಲಿ 14 ರಾಷ್ಟಿçÃಯ ಹೆದ್ದಾರಿ ಮತ್ತು 114 ರಾಜ್ಯ ಹೆದ್ದಾರಿಗಳಲ್ಲಿ ಶೇ.63 ಸಾವುಗಳು ಸಂಭವಿಸುತ್ತಿವೆ.
47.ಹೇಗೆ ಸಾಧ್ಯ ಎಂಬ ಪ್ರಶ್ನೆ ಬರುತ್ತದೆ. ಸಾಧ್ಯ ಎಂಬುದಕ್ಕೆ ಬೆಂಗಳೂರು ಮೈಸೂರು ಹೆದ್ದಾರಿಯೇ ಸಾಕ್ಷಿ-ನಾವು ಅಧಿಕಾರಕ್ಕೆ ಬಂದ 2023 ರಲ್ಲಿ ಪ್ರತಿ ದಿನ ಈ ರಸ್ತೆಯಲ್ಲಿ ಅಪಘಾತಗಳಾಗುತ್ತಿದ್ದವು. ಸಾವು ನೋವುಗಳು ಸಂಭವಿಸುತ್ತಲೇ ಇದ್ದವು. ಆಗ ನಾವು ಎರಡು ಮೂರು ಗಂಭೀರ ಸಭೆಗಳನ್ನು ನಡೆಸಿದ್ದರಿಂದ ಸಾವು ನೋವುಗಳ ಪ್ರಮಾಣ ಕಡಿಮೆಯಾದವು.
48.ಈ ಹೆದ್ದಾರಿಯಲ್ಲಿ ಜನವರಿ-2023 ರಿಂದ ಜೂನ್-2023 ರವರೆಗೆ 341 ಅಪಘಾತಗಳಾಗಿದ್ದವು. 127 ಸಾವುಗಳು ಸಂಭವಿಸಿದರೆ, 382 ಜನರು ಗಾಯಗೊಂಡಿದ್ದರು.
49.2024 ರ ಜನವರಿಯಿಂದ ಜೂನ್‌ವರೆಗೆ 157 ಅಪಘಾತಗಳಾಗಿವೆ. 40 ಜನ ಮರಣ ಹೊಂದಿದ್ದಾರೆ. 230 ಜನರು ಗಾಯಗೊಂಡಿದ್ದಾರೆ.
50.2023 ಕ್ಕೆ ಹೋಲಿಸಿದರೆ 2024ರ ಈ 6 ತಿಂಗಳಲ್ಲಿ 87 ಕಡಿಮೆ ಜನರು ಮರಣ ಹೊಂದಿದ್ದಾರೆ. ಸಾವುಗಳ ಪ್ರಮಾಣ ಶೇ.69 ರಷ್ಟು ಕಡಿಮೆಯಾಗಿದೆ.
51.ನಾವು ತೆಗೆದುಕೊಂಡ ಒಂದು ಸಣ್ಣ ಇನಿಷಿಯೇಟ್ ಮಾಡಿದ್ದರಿಂದ ಇದು ಸಾಧ್ಯವಾಗುವುದಾದರೆ, ನೀವು ಈ ಕುರಿತು ಆಸಕ್ತಿ ವಹಿಸಿದರೆ ದೊಡ್ಡ ಪ್ರಮಾಣದಲ್ಲಿ ಸಾವು ನೋವುಗಳನ್ನು ಕಡಿಮೆ ಮಾಡಬಹುದು ಎಂದು ಉದಾಹರಣೆ ಸಮೇತ ಮನವರಿಕೆ ಮಾಡಿಕೊಡಲಾಗಿದೆ.
- ರಸ್ತೆ ಸುರಕ್ಷತಾ ಸಪ್ತಾಹಗಳು ಕಾಟಾಚಾರಕ್ಕೆ ನಡೆಯಬಾರದು. ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡರೆ ಹಲವು ಅಪಘಾತಗಳನ್ನು ತಡೆಯಬಹುದಾಗಿದೆ. ನಮ್ಮ ನಿರ್ಲಕ್ಷ್ಯದಿಂದ ಜನರ ಪ್ರಾಣ ಹಾನಿ ಉಂಟಾಗುವುದನ್ನು ಸಹಿಸಲು ಸಾಧ್ಯವಿಲ್ಲ. ಹಾಟ್‌ಸ್ಟಾಟ್‌ಗಳನ್ನು ಗುರುತಿಸಿ ಹೆದ್ದಾರಿಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ, ಟ್ರಾಮಾ ಸೆಂಟರ್ ನೆಟ್‌ವರ್ಕ್ ಮಾಡಬೇಕು ಎಂದರು.
ಅಂಗನವಾಡಿ ನೇಮಕ ಪೂರ್ಣಗೊಳಿಸಿ. - ಅಂಗನವಾಡಿ ಕಾರ್ಯಕರ್ತೆಯರ 4,180 ಹುದ್ದೆಗಳು ಹಾಗೂ ಸಹಾಯಕಿಯರ 9,411 ಹುದ್ದೆಗಳು ಖಾಲಿಯಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿ ಪ್ರಕರಣ ತಡೆಗೆ ಕ್ರಮ. - ರಾಜ್ಯದಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ
- ದೌರ್ಜನ್ಯ ತಡೆ ಅಧಿನಿಯಮದ ಅಡಿ ದಾಖಲಾಗಿರುವ ಒಟ್ಟು 26 ಕೊಲೆ ಪ್ರಕರಣಗಳಲ್ಲಿ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಬೇಕಾಗಿದ್ದು, ಆದಷ್ಟು ಬೇಗನೆ ನೌಕರಿ ಒದಗಿಸಬೇಕು. ಜಿಲ್ಲೆಯಲ್ಲಿ ಉಪ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ನಡೆಸಬೇಕು.
ಹಿಂದುಳಿದ ವರ್ಗ - ಗಂಗಾಕಲ್ಯಾಣ ಯೋಜನೆಯಡಿ ಒಟ್ಟು 9,616 ಬೋರ್‌ವೆಲ್ ಕೊರೆಯಲಾಗಿದ್ದು, 4,413 ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನೂ 5203 ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
- ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು. ರಾಜ್ಯದಲ್ಲಿ 217 ವಕ್ಫ್ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ. 22,581 ವಕ್ಫ್ ಖಾತೆ ಮ್ಯುಟೇಶನ್ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
ನಗರಾಭಿವೃದ್ಧಿ ಇಲಾಖೆ - ನಗರಾಭಿವೃದ್ಧಿ ಇಲಾಖೆಯು ಅಭಿವೃದ್ಧಿಯ ಪ್ರಮುಖ ಕೊಂಡಿ. ಇಲ್ಲಿ ಸಮರ್ಪಕವಾಗಿ ಒಳ ಚರಂಡಿ ವ್ಯವಸ್ಥೆ, ಕಸ ವಿಲೇವಾರಿ, ಶುದ್ಧ ಕುಡಿಯುವ ನೀರು, ಜನಪರ ಆಡಳಿತ ವ್ಯವಸ್ಥೆಗಳನ್ನು ರೂಪಿಸಬೇಕು. ಸರ್ಕಾರಗಳು ನೀಡುವ ಅನುದಾನಗಳನ್ನು ಸಮರ್ಪಕವಾಗಿ ಬಳಸಬೇಕು, ಪರಿಶಿಷ್ಟರ ಕಲ್ಯಾಣಕ್ಕೆ, ಹಿಂದುಳಿದವರ, ಅಂಗವಿಕಲರ ಕಲ್ಯಾಣಕ್ಕೆ ಒಟ್ಟಾರೆ ನಾಗರಿಕರ ಕಲ್ಯಾಣಕ್ಕೆ ಕೊಡಬೇಕಾದ ಆದ್ಯತೆಗಳನ್ನು ಕೊಡಬೇಕೆಂದು ಸೂಚಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
59.ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕೂಡ ರಸ್ತೆ ಬದಿಗಳಲ್ಲಿ ಕಸ ಚೆಲ್ಲುವುದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆದು ರಾಜ್ಯದ ಸೌಂದರ್ಯವನ್ನು ವಿರೂಪಗೊಳಿಸುವುದರ ಜೊತೆಗೆ, ಜನ- ಜಾನುವಾರುಗಳ ಆರೋಗ್ಯವನ್ನೂ ಹಾಳು ಮಾಡ ಲಾಗುತ್ತಿದೆ. ಆದ್ದರಿಂದ ಜಿಲ್ಲಾಡಳಿತವು ಈ ಎಲ್ಲ ವಿಷಯಗಳ ಕುರಿತು ಗಮನ ಹರಿಸಿ ಸಮಸ್ಯೆಗಳನ್ನು ಜನಪರವಾಗಿ ಇತ್ಯರ್ಥ ಮಾಡಬೇಕೆಂದು ಸೂಚಿಸಲಾಯಿತು.
ಪಶುಸಂಗೋಪನಾ ಇಲಾಖೆ
- ಅನುಗ್ರಹ ಯೋಜನೆ ನಮ್ಮ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಈ ಕುರಿತು ಗಮನ ಹರಿಸಿ ಪರಿಹಾರ ನೀಡಲು ಕ್ರಮವಹಿಸಬೇಕು.
- ಅಲೆಮಾರಿ ಕುರಿಗಾರರು ಗನ್ ಲೈಸೆನ್ಸ್ ಕೇಳಿದರೆ ಕೂಡಲೆ ಕೊಡಬೇಕು.
- ಅರಣ್ಯಗಳಲ್ಲಿ ಕುರಿ ಮೇಯಿಸಲು ಅಡ್ಡಿ ಮಾಡಬಾರದು.
- ಕುರಿ ಮಂದೆಗಳು ಇರುವ ಕಡೆಯೇ ವ್ಯಾಕ್ಸಿನ್ ಕೊಡಬೇಕು.
- ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸುವುದು.
ಮುಖ್ಯಮಂತ್ರಿಯವರ ಮುಕ್ತಾಯದ ನುಡಿಗಳು
1. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ- ಸಿಇಓ- ಎಸ್ಪಿ ಸಮನ್ವಯದಿಂದ, ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ.
2. ಸರ್ಕಾರ ಸಮಾಜದ ಅಸಮಾನತೆ ತೊಡೆದು ಹಾಕುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಸರ್ಕಾರದ ಹಣ ದುರುಪಯೋಗ ಆಗದಂತೆ ಕೆಲಸ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಬೇಕು. ಚರ್ಚೆ ಸಂದರ್ಭದಲ್ಲಿ ಹಲವು ಲೋಪದೋಷಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಇವುಗಳನ್ನು ಸರಿಪಡಿಸಿಕೊಂಡು ಹೋಗಬೇಕು.
3. ಉದ್ದೇಶಪೂರ್ವಕವಾಗಿ ಇಂತಹ ಲೋಪ ದೋಷಗಳನ್ನು ಮುಂದುವರೆಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು.
4. ನಾವೆಲ್ಲರೂ ಸರ್ಕಾರದ ಸೇವಕರು. ಅದಕ್ಕೆ ವಿಧಾನಸೌಧದಲ್ಲಿ ಕೆಂಗಲ್ ಹನುಮಂತಯ್ಯನವರು ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ.
5. ನಾವು ಸಮಾಜವನ್ನು, ಸಮಾಜದಲ್ಲಿರುವ ಅಸಮಾನತೆಯ ಕಾರಣವನ್ನು ಅರ್ಥ ಮಾಡಿಕೊಂಡು, ನಮ್ಮ ಜನಪರ ಯೋಜನೆಗಳನ್ನು ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಉದಾಹರಣೆಗೆ ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ಜಾರಿಯಾಗಿವೆ.
6. ಇತರ ಕೆಲವು ಕಾರ್ಯಕ್ರಮಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು.
7. ಈಗಾಗಲೇ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ನೀವೆಲ್ಲರೂ ಸೇರಿ ಜಿಲ್ಲೆ ಅಭಿವೃದ್ಧೀ ಕುರಿತು ಚಿಂತನೆ ನಡೆಸಬೇಕು.
8. ಜನಪರ ಕಾರ್ಯಕ್ರಮಗಳನ್ನು ನಾವು – ನೀವು ಎಲ್ಲಾ ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಏಕೆಂದರೆ ಜನರ ತೆರಿಗೆ ಹಣದಿಂದ ನಾವೆಲ್ಲರೂ ಇದ್ದೇವೆ. ಅವರ ಋಣ ತೀರಿಸಬೇಕು.
9. ಸಮಾಜದ ಋಣ ನಮ್ಮ ಮೇಲಿದೆ ಎಂಬುದನ್ನು ಅರಿತು ಕೆಲಸ ಮಾಡಬೇಕು.
10. ಮೂರು ತಿಂಗಳ ನಂತರ ಮತ್ತೆ ಸಭೆ ನಡೆಸಲಾಗುವುದು. ಆಗ ಸುಧಾರಣೆಯಾಗದಿದ್ದರೆ ಸಹಿಸಲಾಗದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ