ಈ ವರ್ಷಾಂತ್ಯಕ್ಕೆ ಬೆಳಗಾವಿಯಿಂದ 40 ವಿಮಾನ ಹಾರಾಟ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇದೇ ವರ್ಷಾಂತ್ಯದೊಳಗೆ ಬೆಳಗಾವಿಯಿಂದ 40 ವಿಮಾನ ಹಾರಾಟ ನಡೆಸಲಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ ತಿಳಿಸಿದ್ದಾರೆ.
ಶನಿವಾರ ಸಂಜೆ ಇಲ್ಲಿಯ ಫೌಂಡ್ರಿಕ್ಲಸ್ಟರ್ ಸಭಾಭವನದಲ್ಲಿ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂದಿನ ತಿಂಗಳು ಬೆಳಗಾವಿಯಿಂದ ಹೈದರಾಬಾದ್, ತಿರುಪತಿ ಸಂಪರ್ಕ ಆರಂಭವಾಗಲಿದೆ. ವರ್ಷಾಂತ್ಯದೊಳಗೆ ಬೆಳಗಾವಿಯಿಂದ ನವದೆಹಲಿಗೂ ವಿಮಾನ ಹಾರಾಟ ಶುರುವಾಗಲಿದೆ ಎಂದು ಅವರು ತಿಳಿಸಿದರು.
ಉಡಾನ್ ಯೋಜನೆ ಬೆಳಗಾವಿಗೆ ಸಿಗಲಿ ಇಲ್ಲಿಯ ಮಾಧ್ಯಮಗಳು, ಸಂಘ-ಸಂಸ್ಥೆಗಳು, ಹಾಗೂ ಸಂಸದರು, ಶಾಸಕರ ಪ್ರಯತ್ನವೇ ಕಾರಣ. ಅಷ್ಟೊಂದು ಹೋರಾಟ ಮಾಡದಿದ್ದರೆ ಉಡಾನ್ ಯೋಜನೆಯಿಂದ ಬೆಳಗಾವಿ ಕೈತಪ್ಪಿ ಹೋಗುತ್ತಿತ್ತು ಎಂದು ಮೌರ್ಯ, ಉಡಾನ್ 3ರಲ್ಲಿ ದೇಶದಲ್ಲೇ ಅತೀ ಹೆಚ್ಚು ರೂಟ್ ಪಡೆದ ಕೀರ್ತಿ ಬೆಳಗಾವಿಗೆ ಸಲ್ಲುತ್ತದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಪ್ರತಿ ತಿಂಗಳು 21 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ ಎಂದು ರಾಜೇಶಕುಮಾರ ಮೌರ್ಯ ಹೇಳಿದರು.
ಸಧ್ಯಕ್ಕೆ ಬೆಳಗಾವಿಯಿಂದ ಸುಮಾರು 20 ವಿಮಾನ ಹಾರಾಟ ನಡೆಸುತ್ತಿದೆ. 4 ವಿಮಾನ ಯಾನ ಸಂಸ್ಥೆಗಳು ಇಲ್ಲಿಂದ ಕಾರ್ಯಾಚರಣೆ ನಡೆಸುತ್ತಿವೆ. ಮುಂದಿನ ತಿಂಗಳಲ್ಲಿ ಟ್ರೂ ಜೆಟ್ ಕೂಡ ಹಾರಾಟ ಶುರು ಮಾಡಲಿದೆ.
ಉಡಾನ್ ಒಂದು ಮತ್ತು ಎರಡರಲ್ಲಿ ಬೆಳಗಾವಿ ಸೇರಿರಲಿಲ್ಲ. ಹುಬ್ಬಳ್ಳಿ ವಿಮಾನ ನಿಲ್ದಾಣ ಸೇರಿದ್ದರಿಂದ ಬೆಳಗಾವಿಯಿಂದ ಸಂಚರಿಸುತ್ತಿದ್ದ ವಿಮಾನಗಳೆಲ್ಲ ಹುಬ್ಬಳ್ಳಿಗೆ ಸ್ಥಳಾಂತರವಾಗಿದ್ದವು. ಆ ಸಂದರ್ಭದಲ್ಲಿ ಬೆಳಗಾವಿಯ ಸಂಘ-ಸಂಸ್ಥೆಗಳು ಹೋರಾಟ ನಡೆಸಿದ್ದವು. ಇದಕ್ಕೆ ಸಂಸದರು, ಶಾಸಕರು ಸಹ ಕೈಜೋಡಿಸಿ, ಪ್ರಯತ್ನ ನಡೆಸಿದ್ದರು.
ಸ್ಥಗಿತವಾಗಿರುವ ವಿಮಾನ ನಿಲ್ದಾಣಗಳನ್ನು ಕ್ರಿಯಾಶೀಲಗೊಳಿಸಲೆಂದು ಕೇಂದ್ರ ಸರಕಾರ ವಿಮಾನಯಾನ ಸಂಸ್ಥೆಗಳಿಗೆ ಸಹಾಯಧನ ನೀಡುವ ಯೋಜನೆಯೇ ಉಡಾನ್. ಇದರಿಂದ ವಿಮಾನಯಾನ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿವೆ. ವಿಶೇಷವೆಂದರೆ ಬೆಳಗಾವಿಯಿಂದ ಹಾರಾಟ ನಡೆಸುವ ಎಲ್ಲ ವಿಮಾನಗಳಲ್ಲೂ ಸಂಚಾರದಟ್ಟಣೆ ಇದ್ದು, ಸರಾಸರಿ ಶೇ.80ರಷ್ಟು ಪ್ರಯಾಣಿಕರು ತುಂಬಿರುತ್ತಾರೆ.
ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ