Politics

*ಲೂಟಿಕೋರರ ಪಿತಾಮಹ ನೀನು: ಮಾಜಿ ಸಚಿವರ ವಿರುದ್ಧ ಗುಡುಗಿದ ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಬಿಜೆಪಿಯ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಲೂಟಿಕೋರರ ಪಿತಾಮಹ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ನಂತರ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆ ಮೇಲಿನ ಪ್ರಸ್ತಾಪ ಮುಂದುವರೆಸಲು ಮುಂದಾದರು. ಈ ವೇಳೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ದರೋಡೆ ಮಾಡಿರುವ ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಅವರು ಸದನಕ್ಕೆ ಹಾಜರಾಗಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಸಿದ್ದರಾಮಯ್ಯ ಅವರು ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಷಯದ ಚರ್ಚೆಗೆ ಪ್ರಸ್ತಾಪ ಮಾಡಿದಾಗೆಲ್ಲ ಬಿಜೆಪಿಯ ಮುಖ್ಯಮಂತ್ರಿಗಳು ಸದನದಲ್ಲಿ ಹಾಜರಿರುತ್ತಿದ್ದರೇ? ಅವರು ಗೈರಾಗಿರಲಿಲ್ಲವೇ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಶ್ವತ್ಥ್ ನಾರಾಯಣ ಅವರು ಮಾಡಬಾರದನ್ನು ಮಾಡಿರುವುದಕ್ಕೇ ಜನ ನಮ್ಮನ್ನು ಇಲ್ಲಿ ಕೂರಿಸಿ, ನಿಮ್ಮನ್ನು ಅಲ್ಲಿ ಕೂರಿಸಿ ತೀರ್ಪು ಕೊಟ್ಟಿದ್ದಾರೆ” ಎಂದು ಹರಿಹಾಯ್ದರು.

“ನನ್ನ ಹೆಸರು ಹೇಳಿ ಆಪಾದನೆ ಮಾಡಲಾಗಿದೆ, ಸಾಕ್ಷಿ ನೀಡಬೇಕು” ಎಂದು ಅಶ್ವತ್ಥ್ ನಾರಾಯಣ ಹೇಳಿದಾಗ “ಮಾಡಬಾರದ್ದು ಮಾಡಿರುವ ನಿಮ್ಮದನ್ನು ತೆಗೆಯುತ್ತೇವೆ, ಮಾತನಾಡುತ್ತೇವೆ ತಡೆಯಿರಿ” ಎಂದು ಗುಡುಗಿದರು.

“ನನ್ನ ವಿರುದ್ದ ಮಾಡಿದ ಆಪಾದನೆ ಹಿಟ್ ಅಂಡ್ ರನ್” ಎಂದು ಅಶ್ವತ್ಥ್ ನಾರಾಯಣ ಗದ್ದಲ ಎಬ್ಬಿಸಿದಾಗ “ರಾಮನಗರದ ಕಸ ಗುಡಿಸುತ್ತೇನೆ ಎಂದು ಹೇಳಿದ ನಿಮಗೆ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲಲು ಆಗಲಿಲ್ಲ” ಎಂದು ಡಿಸಿಎಂ ಕುಟುಕಿದರು.

ಮುಂದುವರೆದು “ಇಷ್ಟು ಹೊತ್ತಿನ ತನಕ ಮುಖ್ಯಮಂತ್ರಿಗಳು ಕುಳಿತಿರಲಿಲ್ಲವೇ? ಸದನದಲ್ಲಿ ನಾವೆಲ್ಲಾ ಕುಳಿತಿಲ್ಲವೇ? ಮುಖ್ಯಮಂತ್ರಿಗಳ ಮೇಲೆ ಆರೋಪವಿದೆ ಎಂದು ಹೇಗೆ ಹೇಳುತ್ತಾರೆ ಇವರು?” ಎಂದು ಬಿಜೆಪಿ ಶಾಸಕರ ಮೇಲೆ ಡಿಸಿಎಂ ಮುಗಿಬಿದ್ದರು. ʼ ಈ ರೀತಿ ಯಾರ ಹೆಸರನ್ನು ಬೇಕಾದರೂ ನಾವು ಬಳಸಿಕೊಳ್ಳಬಹುದೇ” ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದಾಗ “ಇವರು (ಅಶ್ವತ್ಥ್ ನಾರಾಯಣ) ಮುಖ್ಯಮಂತ್ರಿಗಳ ಹೆಸರನ್ನು ಹೇಗೆ ಬಳಸಿಕೊಂಡರು? ಎಂದು ಕಟುವಾಗಿ ಮರುಪ್ರಶ್ನಿಸಿದರು.

ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಶಾಸಕರು ಗದ್ದಲ ಮಾಡಿದಾಗ ಕಲಾಪವನ್ನು ಮುಂದೂಡಲಾಯಿತು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಹೇಳಿಕೆ ಕಡತದಿಂದ ತೆಗೆಯಲು ಮನವಿ

“ಎಸ್ಐಟಿ ಎಂದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ, ಇದನ್ನು ಸಹ ಕಡತದಿಂದ ತೆಗೆದುಹಾಕಬೇಕು” ಎಂದು ಡಿಸಿಎಂ ಅವರು ಸ್ವೀಕರ್ ಗೆ ಮನವಿ ಮಾಡಿದರು.

ಇದೇ ವೇಳೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ “ ನಾನು ಸ್ಪೀಕರ್ ಅವರ ಬಳಿ ಮನವಿ ಮಾಡುತ್ತಿದ್ದೇನೆ. ನನಗೂ ಈ ಸದನದ ಕಾನೂನು ಗೊತ್ತಿದೆ” ಎಂದಾಗ, “ನೀವು ಸಿಬಿಐ ಬಗ್ಗೆ ಹೇಳಿದ್ದೀರಲ್ಲ” ಎಂದು ವಿಪಕ್ಷ ನಾಯಕ ಅಶೋಕ್ ಹೇಳಿದರು. “ಮೊದಲು ಹೇಳಿದವರು ನೀವು ಮತ್ತು ದೇವೇಗೌಡರು” ಎಂದು ಶಿವಕುಮಾರ್ ಅವರು ತಿರುಗೇಟು ಕೊಟ್ಟರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button