Kannada NewsKarnataka News

ಪ್ರವಾಹದಿಂದ ಹಾನಿ -ನೇಕಾರ ಆತ್ಮಹತ್ಯೆ

ಪ್ರವಾಹದಿಂದ ಹಾನಿ -ನೇಕಾರ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರವಾಹದಿಂದಾಗಿ ಆದ ಹಾನಿಗೆ ಈವರೆಗೂ ಸರಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ. ಖಾಸಗಿಯವರು ನೀಡಿದ ಪರಿಹಾರ ಸಮನಾಗಿ ಹಂಚಿಕೆಯಾಗಿಲ್ಲ. ಹಾಗಾಗಿ ಸಾವಿರಾರು ಕುಟುಂಬಗಳು ನಷ್ಟ ಭರಿಸಲಾಗದೆ, ಮುಂದಿನ ಜೀವನಕ್ಕೆ ದಾರಿ ಕಾಣದೆ ಸಂಕಷ್ಟಪಡುತ್ತಿವೆ.
ಮಲಪ್ರಭಾ ನದಿ ಪ್ರವಾಹದ ನೀರು ಮನೆಗೆ ನುಗ್ಗಿ ಅಪಾರ ನಷ್ಟವಾಗಿರುವುದಕ್ಕೆ ಮನನೊಂದು ರಾಮದುರ್ಗದಲ್ಲಿ ನೆರೆಗೆ ಕುಸಿದು ಬಿದ್ದಿರುವ ಮನೆಯಲ್ಲಿ ನೇಕಾರನೊಬ್ಬ ನೇಣು  ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
 ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.  ಗ್ರಾಮದ ರಮೇಶ ನೀಲಕಂಠಪ್ಪ ಹವಳಕೋಡ (42) ಮೃತವ್ಯಕ್ತಿ. ಈಚೇಗೆ ಮಲಪ್ರಭಾ ನದಿ ಪ್ರವಾಹಕ್ಕೆ 3 ಮಗ್ಗಗಳು ನೀರಿನಲ್ಲಿ ಮುಳುಗಿ ಸಂಪೂರ್ಣ ಹಾಳಾಗಿದ್ದವು. ಅಲ್ಲದೆ ಮನೆ ಕೂಡಾ ಕುಸಿದಿತ್ತು. ಇದ್ದೂರಿನಲ್ಲಿರುವ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ ವಾಸವಾಗಿದ್ದರು. ಮಗ್ಗಗಳು ನೀರಿಗೆ ಆಹುತಿ ಆಗಿದ್ದರಿಂದ ಮನನೊಂದು ಬಿದ್ದಿರುವ ತಮ್ಮ ಸ್ವಂತ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಮಗನ ಸಾವಿನಿಂದ ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ಮೃತನಿಗೆ ತಂದೆ, ಹೆಂಡತಿ ಹಾಗೂ ಓರ್ವ ಪುತ್ರಿ ಇದ್ದಾರೆ. ರಾಮದುರ್ಗ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರ ತುರ್ತಾಗಿ ಪರಿಹಾರ ಕಾರ್ಯಕೈಗೊಳ್ಳದಿದ್ದಲ್ಲಿ ಇನ್ನೆಷ್ಟು ಜೀವಗಳು ಬಲಿಯಾಗಲಿವೆಯೋ ಎನ್ನುವ ಆತಂಕ ಉಂಟಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button