Kannada NewsKarnataka News

37 ವರ್ಷ ಸರಕಾರಿ ಕೆಲಸದಲ್ಲಿ 37 ಪೈಸೆಯನ್ನೂ ಸಂಬಳ ಹೊರತು ಮುಟ್ಟಿಲ್ಲ

 

ಜಾತಿ, ಭೇದ ಭಾವ, ದ್ವೇಷಕ್ಕೆ ಬಲಿಯಾಗದಿರಿ, ಯೌವ್ವನ ಹಾಳುಮಾಡಿ ಕೊಳ್ಳಬೇಡಿ- ಎಚ್. ಎಂ. ಮುಜಿಬ್ ಅಹಮ್ಮದ್

ಪ್ರಗತಿವಾಹಿನಿ ಸುದ್ದಿ, ಅಥಣಿ- ಗುರು ಇಲ್ಲದೆ ವಿದ್ಯೆ ಇಲ್ಲ. ಭವಿಷ್ಯದಲ್ಲಿ ಇದೆ ತಾನೆ ಬುನಾದಿ, ಪಿ ಯು ವರ್ಗದಲ್ಲಿರುವ ತಾವು ಈಗಾಗಲೇ ಅರ್ಧದಷ್ಟು ತಿಳಿದುಕೊಂಡಿರುವಿರಿ. ಜಾತಿ, ಭೇದ ಭಾವ, ದ್ವೇಷಕ್ಕೆ ಬಲಿಯಾಗದಿರಿ ಹಾಗೂ ಯೌವನ ಹಾಳು ಮಾಡಗೊಡಬೇಡಿ.

ಆದರ್ಶ ಕಾರ್ಯದ ಗುರಿ ಇರಬೇಕು. ಭಾರತ ದೇಶದ ಮಣ್ಣಿನ ಗುಣ ಧರ್ಮ, ಸಂಸ್ಕೃತಿ, ಪರಂಪರೆಯ ದಾರಿಯಲ್ಲಿ ಸಾಗಿ ಬರುವುದಾಗಿದೆ. ತಾಯ್‌ನಾಡಿನ ಸೇವೆ ಪ್ರಮುಖವಾಗಿರಬೇಕು. ನಾವು ಮಾನವರು ಬದಲಾವಣೆಯತ್ತ ಸಾಗುವುದು ನಮ್ಮ ಧರ್ಮ ಎಂದು ನಿವೃತ್ತ ಜಿಲ್ಲಾಧಿಕಾರಿ ಎಚ್ ಎಂ ಮುಜೀಬ್ ಅಹಮ್ಮದ್ ಹೇಳಿದರು.

ಸ್ಥಳಿಯ ಶ್ರೀಕೃಷ್ಣರಾವ್ ಅಣ್ಣಾರಾವ್ ಲೋಕಾಪುರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ಮತ್ತು ಇಂಗ್ಲೀಷ್ ವಿಭಾಗದ ತರಗತಿಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಈ ಸಂಸ್ಥೆಯ ೧೦೧ ವರ್ಷ ಇತಿಹಾಸ ಅರಿತಾಗ ಹೃದಯ ತುಂಬಿ ಬರುತ್ತದೆ. ನನ್ನ ವೃತ್ತಿ ಅವಧಿ ಮುಗಿದರೂ, ವಿಶೇಷವಾಗಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಅಧಿಕಾರಿಯಾಗಿ ಸೇವೆಯನ್ನು ನೀಡಿದ್ದು ಗುರು ಹಿರಿಯರ ಆರ್ಶೀವಾದ ಮತ್ತು ಪ್ರಾಮಾಣೀಕಸೇವೆ ಎಂದುಕೊಂಡಿದ್ದೇನೆ.

ಅನ್ನ ನಿಡಿದ ತಾಯಿ ಮಾತೃ ಭೂಮಿ, ನನ್ನ ಸೇವೆ ತಹಶೀಲದಾರನಾಗಿ ಅಥಣಿಯಲ್ಲಿ ಪ್ರಾರಂಭವಾಗಿದೆ. ೧೯೮೧ ರಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಸೇವಾವಧಿ ೩೮ ವರ್ಷವಾದರೂ ಈ ಪುಣ್ಯ ಭೂಮಿಯ ನೆಲದ ಪರಿಚಯ ಅರಿವು ಇಂದಿಗೂ ನನ್ನ ಮನದಲ್ಲಿ ಸುಳಿದಾಡುತ್ತಿದೆ. ಇಲ್ಲಿಯ ಸಾಮಾಜಿಕ ಕಳಕಳಿಯ ವಿಮೋಚನಾ ಸಂಸ್ಥೆಯ ಬಗ್ಗೆಯೂ ನನಗೆ ಅರಿವಿದೆ ಎಂದರು .
ಮುಂದುವರೆದು ಮಾತನಾಡುತ್ತಾ ಬಿಳಿಗಿರಿ ರಂಗನ ಮೂರ್ತಿಯ ಪ್ರತಿಷ್ಠಾಪನೆ ಅಲ್ಲಿಯ ಜನರು ನಾನು ಇಸ್ಲಾಂ ಧರ್ಮದವನಾದರೂ ನನ್ನಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದು ಇದೊಂದು ಇತಿಹಾಸವೇ ಸರಿ. ಏಕೆಂದರೆ ಬಹೃತ್ ಪ್ರಮಾಣದ ೮ ಧರ್ಮಗಳ ಸಮ್ಮಿಲನದ ಈ ಭಾರತ ದೇಶ ಇಲ್ಲಿಯ ಸೌಹಾರ್ಧತೆ, ಸಹಕಾರ ಯಾವ ದೇಶಲ್ಲೂ ಸಹ ಇಲ್ಲ. ನನ್ನ ಸೇವಾ ಅವಧಿಯಲ್ಲಿ ಬಡವರ, ಧೀನ ದಲಿತರ ಬಗ್ಗೆ ಹೆಚ್ಚು ಅನುಕಂಪ ತೋರಿದ್ದೇನೆ.

೩೭ ಪೈಸೆಯನ್ನೂ ಮುಟ್ಟಿಲ್ಲ

೩೭ ವರ್ಷ ಸರಕಾರಿ ಕೆಲಸದಲ್ಲಿ ೩೭ ಪೈಸೆಯನ್ನೂ ಸಂಬಳ ಹೊರತು ಮುಟ್ಟಿಲ್ಲ. ಎಲ್ಲಿಯ ಮಾಮರ ಎಲ್ಲಿಯ ಕೊಗಿಲೆ ಎಂಬಂತೆ ಎಲ್ಲಿಯ ಕನಕಪುರ ಎಲ್ಲಿಯ ಅಥಣಿ ನನ್ನನ್ನು ಸೆಳೆಯುವಂತಾಗಿದೆ. ಸೇವೆಗೆ ಅನೇಕ ರೀತಿಯ ಹೆಗ್ಗಳಿಕೆಯ ಪ್ರಶಸ್ತಿ ಬಂದರೂ ಅವೆಲ್ಲ ನನ್ನ ಸೇವೆಗೆ ಸಹಕರಿಸಿದವರಿಗೆ ಹೊರತು, ನನ್ನ ಸ್ವಂತಿಕೆ ಅಲ್ಲ. ವಿದ್ಯಾರ್ಥಿಗಳು ಭೋದಕರು ಡಾ ಮೋಕ್ಷಗೊಂಡಂ ವಿಶ್ವೇಶ್ವರಯ್ಯನವರಂತಹ ಆದರ್ಶಗಳನ್ನಿಟ್ಟುಕೊಂಡು ಗುರುಕುಲವಾದಂತ ಈ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೆ ಏರಿಸಿ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ ಎಲ್ ಪಾಟೀಲ್ ಮಾತನಾಡುತ್ತಾ ಜೀವನದಲ್ಲಿ ಏನಾದರೂ ಸಾಧಿಸಿದ್ದರೆ ಇಂಥ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದು ಸಾರ್ಥಕ ಎಂದರು.

ಸಮಾರಂಭದ ಅಧ್ಯಕ್ಷರಾದ ಜೆ ಇ ಸೊಸಾಟಿಯ ಚೇರಮನ್ ಅರವಿಂದರಾವ್ ದೇಶಪಾಂಡೆ ಮಾತನಾಡುತ್ತಾ  ಸಂಸ್ಥೆಯು ಶತಮಾನೋತ್ಸವ ಗುರಿ ದಾಟಿದೆ ಇನ್ನೂ ಹಲವು ವರ್ಷ ಸಾಗುವ ದಾರಿಯಲ್ಲಿ ತಮ್ಮ ಕರ್ತವ್ಯ ಬಹಳ ಇದೆ ಎಂದರು.
ಅಕ್ಷತಾ ಜಾಧವ ಹಾಗೂ ಸಂಗಡಿಗರಿಂದ ಪ್ರಾರ್ಥನೆ, ಉಪನ್ಯಾಸಕಿ ಎ. ಪಿ. ಹಲಗೇರಿ ಸ್ವಾಗತ ಹಾಗೂ ಪರಿಚಯ ಮಾಡಿದರು. ಇನ್ನೋರ್ವ ಉಪನ್ಯಾಸಕ ಜೆ ಎಸ್ ಕೂಡವಕ್ಕಲಗಿ ಪ್ರಾಸ್ತಾವಿಕ ಮಾತನಾಡಿದರು. ನಿರೂಪಣೆಯನ್ನು ಸೌಂದರ್ಯಾ ಅಲಿಬಾದಿ, ಸವಿತಾ ಹೊಸವಾಡ ನಡೆಸಿಕೊಟ್ಟರು. ಉಪನ್ಯಾಸಕ ಪಿ ಎಸ್ ಚನರೆಡ್ಡಿ ಮತ್ತು ಪ್ರಾ. ಆರ್ ಎಂ ದೇವರೆಡ್ಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಅರ್ಚನಾ ಪಾಟೀಲ, ಝಡ್ ಝಡ್ ಖಾನ್, ಎಮ್ ಡಿ ಹಜಾರೆ ಹಾಗೂ ಸಂಸ್ಥೆಯ ಇತರ ಪದಾಧಿಕಾರಿಗಳು ಸದಸ್ಯರು, ಬೋಧಕರು, ಭೊಧಕೇತರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button