ಅಮಿತ್ ಶಾಗೆ ಮತ್ತಷ್ಟು ಹತ್ತಿರವಾದರೇ ಲಕ್ಷ್ಮಣ ಸವದಿ?
ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಲಕ್ಷ್ಮಣಾಸ್ತ್ರ ಬಳಸುತ್ತಿದೆಯೇ ಬಿಜೆಪಿ ಹೈಕಮಾಂಡ್?
ಎಂ.ಕೆ.ಹೆಗಡೆ, ಬೆಳಗಾವಿ – ಬಿಜೆಪಿಯಲ್ಲಿ ಏನು ನಡೆಯುತ್ತಿದೆ? ಸ್ವತಃ ಪಕ್ಷದ ನಾಯಕರಿಗೇ ಉತ್ತರ ಸಿಗದ ಪ್ರಶ್ನೆ ಇದು. ರಾಜ್ಯದಲ್ಲಿ ನಮ್ಮ ಸರಕಾರವಿದೆ ಎಂದು ಹೇಳಿಕೊಳ್ಳುವುದಕ್ಕಷ್ಟೇ ಸೀಮಿತವಾಗಿದೆ ಬಿಜೆಪಿ ಮುಖಂಡರು, ಕಾರ್ಯಕರ್ತರ ಪರಿಸ್ಥಿತಿ. ಎಲ್ಲವೂ ಹೈಕಮಾಂಡ್ ಹಿಡಿತದಲ್ಲಿದೆ, ಹೈಕಮಾಂಡ್ ಆಡಿಸಿದಂತೆ ಆಡುವುದಷ್ಟೆ ರಾಜ್ಯ ಬಿಜೆಪಿಯ ಕೆಲಸವಾಗಿದೆ.
ಸ್ವತಃ ಮುಖ್ಯಮಂತ್ರಿ ಸ್ಥಾನದಲ್ಲಿರುವ ಯಡಿಯೂರಪ್ಪ ಕೂಡ ಕಂಗೆಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ದೊಡ್ಡಮಟ್ಟದ ಪ್ರವಾಹ ಅಪ್ಪಳಿಸಿ ಒಂದೂವರೆ ತಿಂಗಳಾಗುತ್ತ ಬಂದರೂ ಕೇಂದ್ರ ಸರಕಾರದಿಂದ ಕಿಂಚಿತ್ತೂ ಸ್ಪಂದನೆ ಇಲ್ಲ. ಕೇಂದ್ರ ಹಣಕಾಸು ಸಚಿವರು, ಗೃಹಸಚಿವರೂ ಆಗಿರುವ ರಾಷ್ಟ್ರೀಯ ಅಧ್ಯಕ್ಷರೇ ಸ್ವತಃ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಧಾವಿಸಿ ಬಂದಾಗ ಏನೋ ಆಶಾಕಿರಣ ಮೂಡಿತ್ತು.
ಶೂನ್ಯ ಫಲಿತಾಂಶ
ಆದರೆ ಫಲಿತಾಂಶ ಮಾತ್ರ ಶೂನ್ಯ. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವರು, ಮುಖಂಡರ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗಲೂ ನಿಯೋಗ ಕಳಿಸುವ ಭರವಸೆಯಷ್ಟೇ ಸಿಕ್ಕಿದ್ದು. ನಿಯೋಗವೂ ಬಂದು ಹೋಗಿದೆ. ಆದಾಗ್ಯೂ ಸಿಕ್ಕಿದ್ದು ಮಾತ್ರ ದೊಡ್ಡ ಸೊನ್ನೆ. ವಿಪಕ್ಷಗಳ ಸರಕಾರವಿದ್ದಾಗ ಬೆಂಕಿಯುಂಡೆಯಂತೆ ದಿನನಿತ್ಯ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಯಡಿಯೂರಪ್ಪ ಮತ್ತು ಇತರ ಸಚಿವರು ಈಗ ಅವರೆದುರೇ ತಲೆ ತಗ್ಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಜನರನ್ನು ಎದುರಿಸುವುದಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರವಾಹ ಸಂತ್ರಸ್ತರಿಗೆ ಭರವಸೆಯ ಮೇಲೆ ಭರವಸೆಯೇ ಹೊರತು ಯಾವುದೇ ಪರಿಹಾರ ನೀಡುವ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರವಿಲ್ಲ. ಅಧಿಕಾರಿಗಳೂ ಈಗ ಪ್ರವಾಹ ಸ್ಥಳಗಳಿಗೆ ತೆರಳಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂತ್ರಿಗಳು, ಮುಖ್ಯಮಂತ್ರಿಗಳು ಬಂದು ನೀಡಿಹೋಗಿದ್ದ ಭರವಸೆ ಈಡೇರಿಸಲಾಗದೆ ಅಧಿಕಾರಿಗಳು ಕಂಗೆಟ್ಟು ಹೋಗಿದ್ದಾರೆ.
ಯಡಿಯೂರಪ್ಪ ಸಂಕಟ
- ಸಮ್ಮಿಶ್ರ ಸರಕಾರ ಬಿದ್ದಾಗಿನಿಂದಲೂ ಬಿಜೆಪಿ ಹೈಕಮಾಂಡ್ ವರ್ತನೆ ಇದಕ್ಕಿಂತ ಭಿನ್ನವಾಗಿಲ್ಲ. ಮೊದಲು ಸರಕಾರ ರಚನೆಗೆ ಹಕ್ಕು ಮಂಡಿಸುವುದಕ್ಕೇ ಯಡಿಯೂರಪ್ಪನವರಿಗೆ ಒಪ್ಪಿಗೆ ನೀಡಿರಲಿಲ್ಲ. ಇದಕ್ಕಾಗಿ ಜಗದೀಶ ಶೆಟ್ಟರ್ ಸೇರಿದಂತೆ ವಿವಿಧ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಮನವೊಲಿಸಬೇಕಾಯಿತು.
- ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಚಿವ ಸಂಪುಟ ರಚನೆಗೂ ಹೈಕಮಾಂಡ್ ಇನ್ನಿಲ್ಲದಂತೆ ಕಾಡಿಸಿತು. ತಿಂಗಳವರೆಗೆ ಯಡಿಯೂರಪ್ಪ ಒಬ್ಬರೇ ಸರಕಾರ ನಡೆಸಬೇಕಾಯಿತು. ರಾಜ್ಯ ಅದೇ ಸಂದರ್ಭದಲ್ಲಿ ನೆರೆಯಿಂದ ತತ್ತರಿಸಿಹೋಗಿತ್ತು. ಯಡಿಯೂರಪ್ಪ ಆಗಿಂದಲೇ ತೀರಾ ಮುಜುಗರ ಎದುರಿಸುತ್ತ ಬಂದರು. ಎಷ್ಟು ಬಾರಿ ಸಂಪರ್ಕಿಸಿದರೂ ಹೈಕಮಂಡ್ ಸಂಪು ವಿಸ್ತರಣೆಗೆ ಅನುಮತಿಯನ್ನೇ ನೀಡಲಿಲ್ಲ.
- ಸಂಪುಟ ವಿಸ್ತರಣೆಯಾದ ನಂತರವೂ ಹೈಕಮಾಂಡ್ ಯಡಿಯೂರಪ್ಪನವರಿಗೆ ಸ್ವಾತಂತ್ರ್ಯ ನೀಡಲಿಲ್ಲ. ಖಾತೆಗಳ ಹಂಚಿಕೆಗೆ ಹಲವು ದಿನಗಳವರೆಗೆ ಕಾಡಿಸಿತು. ಕೊನೆಗೂ ಯಡಿಯೂರಪ್ಪ ಬಯಸಿದಂತೆ ಖಾತೆಗಳ ಹಂಚಿಕೆಗೆ ಅವಕಾಶ ನೀಡದೆ ತನ್ನದೇ ತಂತ್ರ ಅನುಸರಿಸಿತು ಹೈಕಮಾಂಡ್. ಮಾಜಿ ಮುಖ್ಯಮಂತ್ರಿ, ಮಾಜಿ ಉಪಮುಖ್ಯಮಂತ್ರಿಗಳನ್ನೆಲ್ಲ ಬದಿಗೆ ಸರಿಸಿ ಶಾಸಕರೂ ಅಲ್ಲದ ಲಕ್ಷ್ಮಣ ಸವದಿ ಮತ್ತು ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿತು. ಗೋವಿಂದ ಕಾರಜೋಳ ಅವರನ್ನು ಜಾತಿ ಸಮೀಕರಣದಲ್ಲಿ ಮುಖ್ಯಮಂತ್ರಿ ಮಾಡಲಾಯಿತು.
- ಶಾಸಕರೂ ಅಲ್ಲದ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದಾಗ ಮುನಿಸಿಕೊಂಡಿದ್ದ ಉಮೇಶ ಕತ್ತಿ ಸೇರಿದಂತೆ ಕೆಲವು ಹಿರಿಯರಿಗೆ ಸಚಿವಸ್ಥಾನ ನೀಡಿ ಸಮಾಧಾನ ಪಡಿಸಬೇಕೆನ್ನುವ ಯಡಿಯೂರಪ್ಪ ಕೋರಿಕೆಗೂ ಹೈಕಮಾಂಡ್ ಸೊಪ್ಪು ಹಾಕಲಿಲ್ಲ. ಭಿನ್ನರಾಗ ಹಾಡುವವರನ್ನು ಕಟ್ಟಿ ಹಾಕಿ, ಇಲ್ಲವಾದಲ್ಲಿ ನೀವೇ ಕೆಳಗಿಳಿಯಿರಿ ಎನ್ನುವ ಖಡಕ್ ಸಂದೇಶ ರವಾನಿಸಿತು. ಇದರಿಂದ ಯಡಿಯೂರಪ್ಪ ತುಟಿ ಬಿಚ್ಚದೆ ಮೌನಕ್ಕೆ ಶರಣಾದರು.
- ರಾಜ್ಯ ತೀವ್ರ ಸಂಕಷ್ಟದಲ್ಲಿದೆ. ಬೊಕ್ಕಸದಲ್ಲಿ ದುಡ್ಡಿಲ್ಲ. ಪ್ರವಾಹ ಪರಿಹಾರಕ್ಕೆ ತುರ್ತಾಗಿ ಹಣ ಬಿಡುಗಡೆ ಮಾಡಿ ಎನ್ನುವ ಸತತ ಬೇಡಿಕೆಗೂ ಹೈಕಮಾಂಡ್ ಸ್ಪಂದಿಸುತ್ತಿಲ್ಲ. ಯಡಿಯೂರಪನ್ನವರನ್ನು ಕಾಡಿಸಲು ಹೋಗಿ ರಾಜ್ಯದ ಜನರನ್ನೇ ಸತಾಯಿಸುತ್ತಿದೆಯೇ ಬಿಜೆಪಿ ಹೈಕಮಾಂಡ್ ಮತ್ತು ಕೇಂದ್ರ ಸರಕಾರ ಎನ್ನುವ ಸಂದೇಹ ಮೂಡುವಂತಾಗಿದೆ. ವಿಪಕ್ಷಗಳಂತೂ ಯಡಿಯೂರಪ್ಪ, ರಾಜ್ಯ ಸರಕಾರ ಮತ್ತು ಬಿಜೆಪಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿವೆ. ಯಡಿಯೂರಪ್ಪ ಈಗ ಕೇಂದ್ರ ಸರಕಾರದ ಕಡೆಗೆ ನೋಡುವುದನ್ನು ಬಿಟ್ಟು ಉದ್ಯಮಿಗಳ ನೇರವನ್ನು ಯಾಚಿಸುತ್ತಿದ್ದಾರೆ.
- ಈ ಮಧ್ಯೆ ಅನರ್ಹ ಶಾಸಕರಿಗೆ ರಾಜಿನಾಮೆ ನೀಡುವ ಮುನ್ನ ಯಡಿಯೂರಪ್ಪ ನೀಡಿದ್ದ ಯಾವ ಆಶ್ವಾಸನೆಗಳನ್ನೂ ಈಡೇರಿಸುವ ಸ್ಥಿತಿಯಲ್ಲಿ ಯಡಿಯೂರಪ್ಪ ಇಲ್ಲ. ಅವರನ್ನು ಅನರ್ಹಗೊಳಿಸಿದ್ದರಿಂದ ಅಷ್ಟರಮಟ್ಟಿಗೆ ಯಡಿಯೂರಪ್ಪ ತಲೆನೋವು ಕಡಿಮೆಯಾಗಿದೆ. ಇಲ್ಲವಾದಲ್ಲಿ ಸಚಿವಸ್ಥಾನ ಹಂಚಿಕೆ ವಿವಾದ ದೊಡ್ಡ ರಾದ್ಧಾಂತಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಈಗ ಅನರ್ಹ ಶಾಸಕರನ್ನು ಮಾತನಾಡಿಸುವುದಕ್ಕೂ ಬಿಜೆಪಿ ಹೈಕಮಾಂಡ್ ಆಸಕ್ತಿ ತೋರಿಸುತ್ತಿಲ್ಲ. ಅವರ ಪರಿಸ್ಥಿತಿ ಸಧ್ಯಕ್ಕೆ ಅತ್ತ ದರೆ, ಇತ್ತ ಪುಲಿ ಎನ್ನುವಂತಾಗಿದೆ.
ಅಮಿತ್ ಶಾ -ಸವದಿ ಚರ್ಚೆ
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ನಿಯಂತ್ರಿಸಲು ಲಕ್ಷ್ಮಣ ಸವದಿ ಅವರನ್ನು ಬಳಸಿಕೊಳ್ಳುತ್ತಿದೆಯೇ ಎನ್ನುವ ಸಂದೇಹ ಎದುರಾಗಿದೆ. ಸವದಿ ಶನಿವಾರ ನವದೆಹಲಿಗೆ ತೆರಳಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರನ್ನು ಭೇಟಿಯಾಗಿದ್ದಾರೆ. ಮಹಾರಾಷ್ಟ್ರ ಚುನಾವಣೆ ಉಸ್ತುವಾರಿಯ ಹೊಣೆ ಹೊತ್ತಿರುವ ಲಕ್ಷ್ಮಣ ಸವದಿ ಅದನ್ನೇ ನೆಪ ಮಾಡಿಕೊಂಡು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಆದರೆ ಮೂಲಗಳ ಪ್ರಕಾರ ಅಮಿತ್ ಶಾ ಅವರೇ ರಾಜ್ಯ ರಾಜಕೀಯ ಕುರಿತು ಚರ್ಚಿಸಲು ಲಕ್ಷ್ಮಣ ಸವದಿ ಅವರನ್ನು ಕರೆಸಿಕೊಂಡಿದ್ದರು. ಈ ವೇಳೆ ನೆರೆ ಪರಿಹಾರವೂ ಸೇರಿದಂತೆ ರಾಜ್ಯದ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಮಾಹಿತಿಯ ಪ್ರಕಾರ ಲಕ್ಷ್ಮಣ ಸವದಿ -ಅಮಿತ ಶಾ ಭೇಟಿಯ ಮಾಹಿತಿ ಸ್ವತಃ ಯಡಿಯೂರಪ್ಪ ಅವರಿಗೂ ಇರಲಿಲ್ಲ.
ಯಡಿಯೂರಪ್ಪ ತಾವಾಗಿಯೇ ಮುಖ್ಯಮಂತ್ರಿ ಖುರ್ಚಿ ಬಿಟ್ಟಿ ಕೆಳಗಿಳಿಯಲಿ ಎಂದು ಹೈಕಮಾಂಡ್ ಈ ರೀತಿಯ ನಿಲುವು ಅನುಸರಿಸುತ್ತಿದೆಯೇ? ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.
ಪಕ್ಷದ ಆಂತರಿಕ ವಿಷಯವನ್ನು ಏನನ್ನಾದರೂ ಮಾಡಿಕೊಳ್ಳಲಿ. ಆದರೆ ರಾಜ್ಯದ ಜನರು ಒದ್ದಾಡುವಂತೆ ಮಾಡುವುದು ಎಷ್ಟು ಸರಿ? ಎನ್ನುವುದು ಜನರ ಪ್ರಶ್ನೆಯಾಗಿದೆ. ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿ ಸರಕಾರವಿದ್ದರೂ, ರಾಜ್ಯದಿಂದ ಮೂವರು ಕೇಂದ್ರದಲ್ಲಿ ಸಚಿವರಿದ್ದರೂ, ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಜಿ ಕಳಿಸಿದರೂ ಜನ ಇಂತಹ ಸಂಕಷ್ಟ ಎದುರಿಸಬೇಕಾದದ್ದು ಮಾತ್ರ ವಿಪರ್ಯಾಸವೇ ಸರಿ.
ಇದನ್ನೂ ಓದಿ –
ಕರ್ನಾಟಕದ ಸರಕಾರ ಬಿಜೆಪಿ ಹೈಕಮಾಂಡ್ ಗೆ ಬೇಡದ ಕೂಸೆ?
ಮೋದಿ ಭೇಟಿಯಾದ ಯಡಿಯೂರಪ್ಪ ನಿಯೋಗಕ್ಕೆ ನಿರಾಸೆ: ಕೇಂದ್ರದಿಂದ ಸಧ್ಯ ಪರಿಹಾರ ಸಾಧ್ಯತೆ ಇಲ್ಲ?
ಪ್ರವಾಹ ಸಂಕಷ್ಟಕ್ಕಿಲ್ಲದ ಸ್ಪಂದನೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಫಾರ್ವರ್ಡ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ