*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಕೇಂದ್ರ ಕಾರಾಗೃಹ ನೂತನ ದಂತ ಚಿಕಿತ್ಸಾಲಯ ಆರಂಭಿಸಲಾಗಿದ್ದು, ರಾಜ್ಯಸಭಾ ಸದಸ್ಯ, ಕೆ.ಎಲ್.ಇ ಸಂಸ್ಥೆಯ ಚೇರ್‌ಮನ್ ಡಾ. ಪ್ರಭಾಕರ ಕೋರೆ ಉದ್ಘಾಟಿಸಿದರು.
ಕೆಎಲ್ಇ ವಿಕೆ ದಂತ ಮಹಾವಿದ್ಯಾಲಯದ ವತಿಯಿಂದ ಈ ದಂತ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಕೆಎಲ್ಇ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ|| ವಿವೇಕ ಸಾವಜಿ, ಕುಲಸಚಿವ ಡಾ|| ವ್ಹಿ. ಡಿ. ಪಾಟೀಲ, ಜಗದೀಶ ಕವಟಗಿಮಠ ಹಾಗೂ ಮಾಜಿ ಮಹಾಪೌರ ವಿಜಯ ಮೋರೆ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಸಹಾಯಕ ಅಧೀಕ್ಷಕ ಬಿ. ವ್ಹಿ. ಮೂಲಿಮನಿ ವಹಿಸಿದ್ದರು. ಕಾರಾಗೃಹದ ಮುಖ್ಯ ಅಧೀಕ್ಷಕ ಶ್ರೀ. ಟಿ.ಪಿ. ಶೇಷ ಮಾರ್ಗದರ್ಶನ ಮಾಡಿದ್ದರು.
ದೀಪ ಬೆಳಗಿಸಿ ಡಾ.ಕೋರೆ ಮಾತನಾಡಿ, ಕಾರಾಗೃಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಇದ್ದು ತಾವೆಲ್ಲ ಜೀವನದ ಯಾವುದೋ ಆಕಸ್ಮಿಕ ಘಟನೆಯಲ್ಲಿ ತಪ್ಪು ಮಾಡಿರಬಹುದು. ಆದರೆ ಇನ್ನು ಮುಂದೆ ಎಂದಿಗೂ ಮತ್ತೆ ತಪ್ಪುಗಳನ್ನು ಮಾಡಬೇಡಿ. ಒಬ್ಬ ವ್ಯಕ್ತಿಯ ಜೀವನದಲ್ಲಿ ಆರೋಗ್ಯ ಅತ್ಯಂತ ಮಹತ್ವ. ನಿವಾಸಿಗಳು ಸದೃಢರಾಗಿರಬೇಕು, ಆರೋಗ್ಯವಂತರಾಗಿರಬೇಕು ಎನ್ನುವ ಉದ್ದೇಶಕ್ಕೆ ಈ ಕಾರಾಗೃಹದಲ್ಲಿ ದಂತ ಚಿಕಿತ್ಸಾಲಯವನ್ನು ಆರಂಭಿಸಿದ್ದೇವೆ. ಜೈಲು ನಿವಾಸಿಗಳ ಒಳಿತಿಗಾಗಿ ಕೆಲಸ ಮಾಡಲು ಕೆಎಲ್ಇ ಸಂಸ್ಥೆ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸೇವೆ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಕೆಎಲ್ಇ ಸಂಸ್ಥೆಯಿಂದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ತಾವು ಕಾರಾಗೃಹದ ಸಮಯವನ್ನು ಸದುಪಯೋಗ ಪಡಿಸಿಕೊಂಡು ಪರಿಪೂರ್ಣ ವ್ಯಕ್ತಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಮರಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿ. ವ್ಹಿ. ಮೂಲಿಮನಿ ಮಾತನಾಡಿ ನಿವಾಸಿಗಳ ಆರೋಗ್ಯದ ದೃಷ್ಟಿಯಿಂದ ಕೆಎಲ್ಇ ಸಂಸ್ಥೆ ದಂತ ಚಿಕಿತ್ಸಾಲಯವನ್ನು ಕೊಡುಗೆಯಾಗಿ ನೀಡಿದೆ. ಇದಕ್ಕೆ ಕಾರಾಗೃಹದ ಇಲಾಖೆ ಹಾಗೂ ಸಂಸ್ಥೆ ಸದಾಕಾಲ ಚಿರಋಣಿಯಾಗಿರುತ್ತದೆ. ನಿವಾಸಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಆರೋಗ್ಯವಂತರಾಗಿ ಬಾಳಿ ಎಂದು ಹೇಳಿದರು.
ಮಾಜಿ ಮಹಾಪೌರ ವಿಜಯ ಮೋರೆ ಮಾತನಾಡಿ ಕೆಎಲ್ಇ ಸಂಸ್ಥೆಯ ನಿಸ್ವಾರ್ಥ ಹಾಗೂ ಸಮಾಜದ ಮುಖಿ ಕಾರ್ಯಕ್ಕೆ ಈ ಕಾರ್ಯಕ್ರಮ ಒಂದು ನಿದರ್ಶನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರಾಗೃಹದ ವೈದ್ಯಾಧೀಕಾರಿ ಡಾ. ವ್ಹಿ.ಎಮ್. ಯಮಕನಮರಡಿ, ಡೆಂಟಲ್ ಕಾಲೇಜ ಪ್ರಾಂಶುಪಾಲರಾದ ಡಾ. ಅಲ್ಕಾ ಕಾಳೆ ಹಾಗೂ ದಂತ ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಮುಖ್ಯಸ್ಥರುಗಳು, ಜೈಲರ್‌ಗಳಾದ ಸಿದ್ದು ಪಾಟೀಲ, ಆಯ್.ಎಸ್. ಹಿರೇಮಠ, ಕೆ.ಆರ್. ಮೊರಬದ ಉಪಸ್ಥಿತರಿದ್ದರು.
ಡಾ. ಅನಿಲ ಅಂಕೋಲಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ನಿವಾಸಿಗಳಾದ ಈರವ್ವಾ ತಿಗಡಿ ಹಾಗೂ ಮಂಗಲಾ ಹೊಂಗಲ ಪ್ರಾರ್ಥಿಸಿದರು. ಶಿಕ್ಷಕಿ ಎಸ್.ಎಮ್. ಕೋಲಕಾರ ವಂದಿಸಿದರು. ಶಶಿಕಾಂತ ಯಾದಗುಡೆ ಕಾರ್ಯಕ್ರಮ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ