Kannada NewsKarnataka NewsLatest

*ರಾಜಧಾನಿಯ ಗುಂಡಿಗಳ ಅವಾಂತರಕ್ಕೆ ಮೊತ್ತೊಂದು ಬಲಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಯಮಸ್ವರೂಪಿ ಗುಂಡಿಗಳ ಅವಾಂತರಕ್ಕೆ ಭವಿಷ್ಯ ನಿಧಿಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಅನಂತನಗರದಲ್ಲಿ ನಡೆದಿದೆ.

ಕೇರಳ ಮೂಲದ ಮೇಧಾ (32) ಮೃತಪಟ್ಟ ಮಹಿಳೆಯಾಗಿದ್ದು, ಇವರು ಎಲೆಕ್ಟ್ರಾನಿಕ್ ಸಿಟಿಯ ಭವಿಷ್ಯ ನಿಧಿ (EPFO) ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಮೇಧಾ ಅವರು ತಮ್ಮ ಸ್ನೇಹಿತ ಅಜಯ್ ಗುರು ಅವರೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಮುಂದೆ ಹೋಗುತ್ತಿದ್ದ ಕಾರು ಏಕಾಏಕಿ ಬ್ರೇಕ್ ಹಾಕಿದೆ. 

ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಮೇಧಾ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಹಿಂಬದಿಯಿಂದ ಬಂದ ಗೂಡ್ಸ್ ವಾಹನವೊಂದು ಮೇಧಾ ಅವರ ಕತ್ತಿನ ಭಾಗದ ಮೇಲೆ ಹರಿದ ಪರಿಣಾಮ, ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅನಂತನಗರದ ಈ ರಸ್ತೆಯು ಸಂಪೂರ್ಣವಾಗಿ ಹಳ್ಳಗುಂಡಿಗಳಿಂದ ಕೂಡಿದ್ದು, ಪ್ರತಿನಿತ್ಯ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಈ ಭೀಕರ ನಿರ್ಲಕ್ಷ್ಯಕ್ಕೆ ಅಮಾಯಕಿ ಬಲಿಯಾಗಿರುವುದಕ್ಕೆ ಆಕ್ರೋಶಗೊಂಡ ಹೆಬ್ಬಗೋಡಿ ಮತ್ತು ಅನಂತನಗರದ ನಿವಾಸಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಮೃತ ಮೇಧಾ ಅವರ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಮಾರ್ಚ್ ನಡೆಸಿದ ಸ್ಥಳೀಯರು, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ರಸ್ತೆಗಳನ್ನು ತಕ್ಷಣವೇ ಸರಿಪಡಿಸಿ ಜೀವಗಳನ್ನು ರಕ್ಷಿಸಬೇಕೆಂದು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.

Related Articles

Back to top button