ಮುಂದುವರೆದ ಸತತಧಾರೆ: ಸೇತುವೆ ಜಲಾವೃತ: ಜನಜೀವನ ಅಸ್ತವ್ಯಸ್ತ: ಕೃಷಿ ಚಟುವಟಿಕೆಗಳು ಸ್ಥಗಿತ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಳೆಯ ರೌದ್ರನರ್ತನಕ್ಕೆ ತಾಲೂಕಿನಾದ್ಯಂತ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ ಮೇಲೆ ಪ್ರವಾಹೋಪಾದಿಯಲ್ಲಿ ನೀರು ಹರಿಯುತ್ತಿದೆ. ನೀಲಾವಡೆ ಗ್ರಾಮದ ಬಳಿ ಮಲಪ್ರಭಾ ನದಿಯ ಸೇತುವೆ, ಸಿಂಧನೂರು-ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ, ದೇವಾಚಿಹಟ್ಟಿ-ಜಾಂಬೋಟಿ ಮಾರ್ಗಗಳ ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಈ ಮೂರೂ ಸೇತುವೆಗಳು ಸೇರಿದಂತೆ ನೇರಸಾ-ಗವ್ವಾಳಿ, ಹೆಮ್ಮಡಗಾ-ತಳೇವಾಡಿ, ಚಿಕಲೆ-ಅಮಗಾಂವ, ಮೋದೆಕೊಪ್ಪ-ತೀರ್ಥಕುಂಡೆ, ದೇವಾಚಿಹಟ್ಟಿ-ತೋರಾಳಿ, ತಿವೋಲಿ-ಶಿರೋಲಿ, ಅಮಟೆ-ಗೋಲ್ಯಾಳಿ, ಹೆಮ್ಮಡಗಾ-ದೇಗಾಂವ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ, ಯಡೋಗಾ-ಚಾಪಗಾಂವ, ಮಾಚಾಳಿ-ಲೋಂಡಾ ಗ್ರಾಮಗಳ ನಡುವಿನ ಸಂಪರ್ಕ ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ಮುಖ್ಯ ರಸ್ತೆಗಳ ಪ್ರಮುಖ ಸೇತುವೆಗಳ ಮೇಲೆ ನೀರು ಹರಿಯುತ್ತಿರುವ ಕಾರಣ ಈ ಗ್ರಾಮಗಳ ಜನರು ಹೊರಜಗತ್ತಿನೊಂದಿಗೆ ಜೊತೆ ಸಂಪರ್ಕ ಸಾಧಿಸಲು ಸುತ್ತೀ ಬಳಸಿ ಪರ್ಯಾಯ ಮಾರ್ಗಗಳಲ್ಲಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎರಡು ವಾರಗಳಿಂದ ಧಾರಾಕಾರ ಸುರಿಯುತ್ತಿರುವ ಮಳೆ ಗುರುವಾರವೂ ಮುಂದುವರೆದಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆ ಹಲವು ಅನಾಹುತಗಳಿಗೆ ಕಾರಣವಾಗಿದೆ. ಅರಣ್ಯ ಪ್ರದೇಶದಲ್ಲಿ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಕೈಕೊಟ್ಟಿದೆ. ಮೊಬೈಲ್ ನೆಟವರ್ಕ್ ಸಹ ಸಿಗದೇ ಕಾನನವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಭತ್ತದ ಗದ್ದೆಗಳು, ಗೆಣಸಿನ ಹೊಲಗಳು ಜಲಾವೃತಗೊಂಡಿವೆ. ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಕಳೆದ ಹಲವು ದಿನಗಳಿಂದ ನಿರ್ಮಾಣವಾದ ತಂಪಾದ ವಾತಾವರಣದಿಂದ ಜನ-ಜಾನುವಾರುಗಳಲ್ಲಿ ರೋಗ-ರುಜಿನುಗಳ ಭೀತಿ ಆವರಿಸಿದೆ.
ತಾಲೂಕಿನ ಕಣಕುಂಬಿ, ಜಾಂಬೋಟಿ, ಲೋಂಡಾ ಮತ್ತು ಭೀಮಗಡ ಅರಣ್ಯಗಳಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದ್ದ ಕಾರಣ ಈ ಅರಣ್ಯಗಳ ವ್ಯಾಪ್ತಿಯ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸತತಧಾರೆಯಿಂದಾಗಿ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಮತ್ತಿತರ ಹಳ್ಳಗಳಲ್ಲಿ ಪ್ರವಾಹ ಏರ್ಪಟ್ಟಿದೆ. ಹಬ್ಬನಹಟ್ಟಿಯ ಆಂಜನೇಯ ದೇವಸ್ಥಾನ ಮತ್ತು ಇಟಗಿಯ ಮರುಳಶಂಕರ ದೇವಸ್ಥಾನಗಳು ಮಲಪ್ರಭಾ ನದಿಯಲ್ಲಿ ಸಂಪೂರ್ಣ ಮುಳುಗಿದ ಸ್ಥಿತಿಯಲ್ಲಿವೆ. ಭಾರೀ ಮಳೆ-ಗಾಳಿಯಿಂದಾಗಿ ತಾಲ್ಲೂಕಿನ ಅರಣ್ಯ ಭಾಗದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ೮ ಗ್ರಾಮಗಳಲ್ಲಿ ತಲಾ ಒಂದು ಮನೆಗೋಡೆಗಳು ಕುಸಿದು ಧರೆಗುರುಳಿದಿವೆ. ಕೆಲವೆಡೆ ಸಂಪರ್ಕ ರಸ್ತೆಗಳ ಮೇಲೆ ನೀರು ಹರಿದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಕಂದಾಯ ಇಲಾಖೆಯ ಮಾಹಿತಿ ಪ್ರಕಾರ ಗುರುವಾರದವರೆಗೆ ತಾಲೂಕಿನ ಕಣಕುಂಬಿಯಲ್ಲಿ ೧೩೫ ಮಿ.ಮೀ, ಅಸೋಗಾದಲ್ಲಿ ೯೦.೬ ಮಿಮೀ, ಗುಂಜಿಯಲ್ಲಿ ೬೫.೪ ಮಿಮೀ, ಲೋಂಡಾದಲ್ಲಿ ೮೬ ಮಿಮೀ, ನಾಗರಗಾಳಿಯಲ್ಲಿ ೬೩ ಮಿಮೀ, ಜಾಂಬೋಟಿಯಲ್ಲಿ ೯೩.೪ ಮಿಮೀ ಮತ್ತು ಖಾನಾಪುರ ಪಟ್ಟಣದಲ್ಲಿ ೭೪.೩ ಮಿಮೀ, ಬೀಡಿಯಲ್ಲಿ ೩೨.೮ ಮಿಮೀ ಮತ್ತು ಕಕ್ಕೇರಿಯಲ್ಲಿ ೧೪.೮ ಮಿಮೀ ಮಳೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ