ವಾರದೊಳಗೆ ಸಮೀಕ್ಷೆ ಪೂರ್ಣಗೊಳಿಸಿ -ಬಾಲಚಂದ್ರ ಜಾರಕಿಹೊಳಿ ಗಡುವು
ಪ್ರಗತಿವಾಹಿನಿ ಸುದ್ದಿ, ಗೋಕಾಕ : ನಿಜವಾದ ಸಂತ್ರಸ್ಥರನ್ನು ಗುರುತಿಸಿ ಸರ್ಕಾರದ ಪರಿಹಾರ ವಿತರಿಸಬೇಕು. ವಾರದೊಳಗೆ ಮತ್ತೊಮ್ಮೆ ಸಮೀಕ್ಷೆ ಕಾರ್ಯ ಕೈಗೊಂಡು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ವಿತರಿಸಬೇಕೆಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಮಧ್ಯಾಹ್ನ ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ನೆರೆ ಸಂತ್ರಸ್ಥರ ಸಂಬಂಧ ಜರುಗಿದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯಲ್ಲಿ ದೂರವಾಣಿ ಮೂಲಕ ಮಾತನಾಡಿದ ಅವರು, ಸಮೀಕ್ಷೆ ಕಾರ್ಯ ಸುಸೂತ್ರವಾಗಿ ನಡೆಯಲು ಎಲ್ಲ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.
ಬುಧವಾರ ನೆರೆಪೀಡಿತ ಎಲ್ಲ ೩೦ ಗ್ರಾಮಗಳಲ್ಲಿ ಹಾನಿಗೀಡಾದ ವಸ್ತುಸ್ಥಿತಿಯನ್ನು ಅರಿಯಲು ಟೀಂ ಎನ್ಎಸ್ಎಫ್ದಿಂದ ತಂಡಗಳನ್ನು ಕಳುಹಿಸಿಕೊಡಲಾಗಿತ್ತು. ತಂಡ ನೀಡಿದ ವರದಿ ಅನ್ವಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈಗಾಗಲೇ ಸಮೀಕ್ಷೆ ನಡೆಸಿದಂತೆ ಬಾಕಿ ಉಳಿದಿರುವ ತಾತ್ಕಾಲಿಕ ಪರಿಹಾರ ಧನದ ಚೆಕ್ಗಳನ್ನು ವಿತರಿಸಬೇಕು. ಗುಡಿಸಲು ಮತ್ತು ತಗಡಿನ ಶೆಡ್ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೂ ಪರಿಹಾರವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ಕಾರ್ಯಗಳಲ್ಲಿ ಭಾಗಿಯಾಗಿರುವ ಸ್ಥಳೀಯ ಮಟ್ಟದ ಅಧಿಕಾರಿಗಳು ಹೊಂದಾಣಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅವರು ಸೂಚನೆ ನೀಡಿದರು.
ಯಾರ ಒತ್ತಡಕ್ಕೂ ಮಣಿಯಬೇಡಿ
ಸರ್ವೇ ನಡೆಸುವ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಓ ಹಾಗೂ ಅಭಿಯಂತರರು ಖುದ್ದಾಗಿ ಪ್ರವಾಹಕ್ಕೆ ಕುಸಿದಿರುವ ಮನೆಗಳಿಗೆ ಭೇಟಿ ನೀಡಬೇಕು. ಇದಕ್ಕೆ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಬೇಕು. ಹಾನಿಗೀಡಾದ ವಸ್ತುಸ್ಥಿತಿಯನ್ನು ಅರಿತು ಯಾರ ಒತ್ತಡಕ್ಕೂ ಮಣಿಯದೇ ಅರ್ಹ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಕರ್ತವ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಪರಿಹಾರ ಕಾರ್ಯ ಚುರುಕಾಗಿ ನಡೆಯಲು ಎಲ್ಲ ಅಧಿಕಾರಿಗಳು ಸ್ಥಳೀಯ ಮಟ್ಟದ ಮುಖಂಡರ ಸಹಕಾರದೊಂದಿಗೆ ಕೆಲಸ ನಿರ್ವಹಿಸಬೇಕು. ತಮ್ಮ ದೈನಂದಿನ ಕೆಲಸಕ್ಕಿಂತ ನೆರೆ ಸಂತ್ರಸ್ಥರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ರಾತ್ರಿಯಾದರೂ ಸರಿ ಸಂತ್ರಸ್ಥರ ಸಂಕಷ್ಟಗಳಿಗೆ ಸ್ಪಂದಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ನೆರೆ ಸಂತ್ರಸ್ಥರ ವಿಷಯದಲ್ಲಿ ಯಾರಾದರೂ ನಿರ್ಲಕ್ಷ್ಯವಹಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ಜಿಲ್ಲಾ ಪಂಚಾಯತ ಸದಸ್ಯ ಗೋವಿಂದ ಕೊಪ್ಪದ, ಮುಖಂಡ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ನೆರೆ ಸಂತ್ರಸ್ಥರ ವಿಷಯದಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಸರ್ವೇ ನಡೆಸುವ ಸಂದರ್ಭದಲ್ಲಿ ಯಾವೊಬ್ಬ ಮುಖಂಡರ ಸಲಹೆಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳು ನಡೆಸಿರುವ ಸಮೀಕ್ಷೆಯಲ್ಲಿ ಹಲವು ಲೋಪದೋಷಗಳಿದ್ದು, ಕೂಡಲೇ ಇವುಗಳನ್ನು ಸರಿಪಡಿಸಿ ನೆರೆ ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ನಡೆಯಬೇಕಿದೆ ಎಂದು ತಹಶೀಲ್ದಾರ ಅವರಲ್ಲಿ ಕೋರಿಕೊಂಡರು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಮುರಳೀಧರ ತಳ್ಳಿಕೇರಿ, ತಾಪಂ ಇಓ ಬಸವರಾಜ ಹೆಗ್ಗನಾಯಿಕ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಈ ಸಭೆಯನ್ನು ಆಯೋಜಿಸಲಾಗಿದೆ. ನೆರೆ ಸಂತ್ರಸ್ಥರ ವಿಷಯದಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಯಾರ ಮುಖ ನೋಡಿ ಮಳ ಹಾಕಬೇಡಿ. ಈಗ ನಡೆದಿರುವ ಸಮೀಕ್ಷೆಯಲ್ಲಿ ಹಲವು ಲೋಪದೋಷಗಳು ಕಂಡುಬಂದಿವೆ. ಬಿದ್ದ ಮನೆಗಳ ಸಮೀಕ್ಷೆಯಲ್ಲಿ ಅಪಸ್ವರ ಬಂದಿದೆ. ಚೆಕ್ ವಿಷಯದಲ್ಲಂತೂ ಹಲವು ದೂರುಗಳು ಕೇಳಿಬಂದಿವೆ. ಒಂದೇ ಮನೆಯಲ್ಲಿ ನಾಲ್ಕ್ನಾಲ್ಕು ಚೆಕ್ಗಳು ವಿತರಣೆಯಾದ ವರದಿಗಳು ಸಹ ಕೇಳಿಬರುತ್ತಿವೆ. ಇವುಗಳನ್ನು ಆದಷ್ಟು ಬೇಗ ಸರಿಪಡಿಸಲಾಗುವುದು. ಸಂತ್ರಸ್ಥರ ವಿಷಯದಲ್ಲಿ ಯಾರಿಗಾದರೂ ಅನ್ಯಾಯವಾದರೆ ಅದಕ್ಕೆ ನೋಡಲ್ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಜಂಟಿಯಾಗಿ ಎಚ್ಚರಿಕೆ ನೀಡಿದರು.
ಮೂಡಲಗಿ ಗ್ರೇಡ್-೨ ತಹಶೀಲ್ದಾರ ಲಕ್ಷ್ಮಣ ಭೋವಿ, ಮುಖಂಡರಾದ ಹನಮಂತ ತೇರದಾಳ, ಅಜ್ಜಪ್ಪ ಗಿರಡ್ಡಿ, ಸುಭಾಸ ಕುರಬೇಟ, ಬಸಗೌಡ ಪಾಟೀಲ, ಪರಸಪ್ಪ ಬಬಲಿ, ಲಕ್ಷ್ಮಣ ಮಸಗುಪ್ಪಿ, ರವಿ ಪರುಶೆಟ್ಟಿ, ತಾಲೂಕಾ ಮಟ್ಟದ ಅಧಿಕಾರಿಗಳು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಇಂಜನೀಯರಗಳು ಹಾಗೂ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ