ಪ್ರಗತಿವಾಹಿನಿ ಸುದ್ದಿ: ದೇಶದ ಪ್ರತಿಷ್ಠಿತ ಹಾಗೂ ಅತಿದೊಡ್ಡ ನ್ಯಾನೋ ಸಮ್ಮೇಳನವಾದ ʻಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ನ್ಯಾನೋ ಸಮ್ಮೇಳನʼವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ.
ದೇಶ, ವಿದೇಶಗಳ ಖ್ಯಾತ ವಿಜ್ಞಾನಿಗಳು, ತಂತ್ರಜ್ಞಾನಿಗಳು, ತಾಂತ್ರಿಕ ಚಿಂತಕರು, ಉದ್ಯಮಗಳ ಖ್ಯಾತನಾಮರೊಂದಿಗೆ ಈ ಪ್ರತಿಷ್ಠಿತ ನ್ಯಾನೋ ಟೆಕ್ನಾಲಜಿ ಸಮಾವೇಶದಲ್ಲಿ ಭಾಗವಹಿಸಲು ನನಗೆ ಹೆಮ್ಮೆ ಎನಿಸುತ್ತಿದೆ.
ನಾನು ಮೊದಲನೆಯದಾಗಿ ಪ್ರತಿಷ್ಠಿತ ಪ್ರೊ.ಸಿ.ಎನ್.ಆರ್. ರಾವ್ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ.ಅರಿಂದಮ್ ಘೋಷ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ರಾಜ್ಯದಲ್ಲಿ ನಡೆಯುವ ಇಂತಹ ವಿಜ್ಞಾನ ಮತ್ತು ತಂತ್ರಜ್ಞಾನ ಸಮಾವೇಶದಲ್ಲಿ ಭಾಗವಹಿಸುವುದು ನನಗೆ ಯಾವತ್ತೂ ಸ್ಪೂರ್ತಿದಾಯಕ ಹಾಗೂ ಸಂತಸದ ವಿಚಾರ.
ಕರ್ನಾಟಕ ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳಿಗೆ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಸಂಶೋಧನೆ ಚಟುವಟಿಕೆಗಳಿಗೆ ಭದ್ರ ತಳಹದಿಯನ್ನು ಕಲ್ಪಿಸುವ ಕಾರ್ಯದಲ್ಲಿ ಹೆಸರುವಾಸಿಯಾಗಿದೆ. ತಾಂತ್ರಿಕತೆ ಆಧಾರಿತ ಅನ್ವೇಷಣೆ ಕ್ಷೇತ್ರದಲ್ಲಿ ನಮ್ಮ ರಾಜ್ಯ ಎಂದಿಗೂ ಮುಂಚೂಣಿಯಲ್ಲಿದೆ.
ಐಐಎಸ್ಸಿ, ಜೆಎನ್ಸಿಎಎಸ್ಆರ್, ಎನ್ಸಿಬಿಎಸ್, ಸಿಇಎನ್ಎಸ್ ನಂತಹ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವಿನೊಂದಿಗೆ, ಬೆಂಗಳೂರು ದೇಶದ ನ್ಯಾನೋ ಟೆಕ್ ಹಬ್ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸ ನನಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರು ಈ ಆಧುನಿಕ ತಾಂತ್ರಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ.
ಆಹಾರ ಭದ್ರತೆ, ಇಂಧನ ಸುರಕ್ಷತೆ, ಶುದ್ಧ ಜಲ, ಮೂಲಸೌಕರ್ಯ, ಆರೋಗ್ಯ ಸೇವೆ, ಮೆಡಿಸಿನ್, ತ್ಯಾಜ್ಯವಸ್ತುಗಳ ನಿರ್ವಹಣೆ, ಪರಿಸರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಎದುರಾಗುವ ಸವಾಲುಗಳಿಗೆ ವಿನೂತನ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ. ಹೆಚ್ಚುತ್ತಿರುವ ನಗರೀಕರಣ, ಜನಸಂಖ್ಯೆ ಹೆಚ್ಚಳ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿದ್ದು ಇವುಗಳಿಗೆ ನ್ಯಾನೋ ಟೆಕ್ನಾಲಜಿ ಆಧಾರಿತ ಪರಿಹಾರಗಳನ್ನು ಸಂಶೋಧಿಸಲು ನಾನು ವಿಜ್ಞಾನಿಗಳಿಗೆ ಮತ್ತು ಇಂಜಿನಿಯರ್ಗಳನ್ನು ಕೇಳಿಕೊಳ್ಳುತ್ತೇನೆ.
ಈ ಹೊಸ ತಾಂತ್ರಿಕ ಕ್ಷೇತ್ರದ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸಂಶೋಧನಾ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಮಾಹಿತಿಗಳ ಹಾಗೂ ತಾಂತ್ರಿಕತೆಗಳ ಪರಸ್ಪರ ವಿನಿಮಯ, ಈ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳ ಮತ್ತು ಅವುಗಳ ಪರಿಹಾರ ಸಾಧ್ಯತೆಗಳ ವಿಚಾರ ವಿನಿಮಯ ಮತ್ತು ಅಂತಿಮವಾಗಿ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಪ್ರತಿಭೆಗಳನ್ನು ಬೆಳೆಸುವ ಅಗತ್ಯವಿದೆ.
ಇಂತಹ ಅಂತಾರಾಷ್ಟ್ರೀಯ ಸಮಾವೇಶಗಳು ಪರಸ್ಪರ ಸಂಪರ್ಕ ಸಾಧಿಸಲು, ಜ್ಞಾನವನ್ನು ಹಂಚಿಕೊಳ್ಳಲು, ತಾಂತ್ರಿಕತೆಗಳ ವಿನಿಮಯಕ್ಕೆ, ಕೌಶಲ್ಯ ಅಭಿವೃದ್ಧಿಗೆ ಹಾಗೂ ಉದ್ಯಮ ಸಹಭಾಗಿತ್ವಕ್ಕೆ ಸಾಕಷ್ಟು ಅವಕಾಶವನ್ನು ಕಲ್ಪಿಸಲಿದೆ ಎಂದು ನಾನು ಭಾವಿಸಿದ್ದೇನೆ.
ಯುವ ಉದ್ಯಮಿಗಳು ಈ ಕ್ಷೇತ್ರದ ತಜ್ಞರ ಮತ್ತು ದಿಗ್ಗಜರ ಸಹಕಾರ ಮತ್ತು ಸಹಭಾಗಿತ್ವದ ಸದುಪಯೋಗಪಡೆದುಕೊಂಡು ನಮ್ಮ ರಾಜ್ಯದಲ್ಲಿ ಹೊಸ ಉದ್ಯಮಗಳನ್ನು ಆರಂಭಿಸಲು ನಾನು ಆಹ್ವಾನಿಸುತ್ತೇನೆ.
ಕರ್ನಾಟಕದಲ್ಲಿ ಈ ವಿನೂತನ ಉದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿರುವ ಸಂಪೂರ್ಣ ಸಹಕಾರವನ್ನು ನಮ್ಮ ಸರ್ಕಾರ ಒದಗಿಸಲಿದೆ.
ಈ ಸಮಾವೇಶವನ್ನು 2007ರಿಂದ ನಿರಂತರವಾಗಿ ಆಯೋಜಿಸಿಕೊಂಡು ಬರಲು ಮಾರ್ಗದರ್ಶನ ನೀಡುತ್ತಿರುವ ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರಿಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ.
ಈ ಸುಂದರ ಉದ್ಯಾನನಗರಿಯಲ್ಲಿ ತಾವಿರುವ ಸಮಯವನ್ನು ಸಂತಸದಿಂದ ಕಳೆಯಿರಿ ಎಂದು ನಾನು ಆಶಿಸುತ್ತೇನೆ.
13 ನೇ ಬೆಂಗಳೂರು ಇಂಡಿಯಾ ನ್ಯಾನೋ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ನಾನು ಹಾರೈಸುತ್ತೇನೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ