Belagavi NewsBelgaum NewsKannada NewsKarnataka NewsNationalPolitics

*ಅಗ್ನಿ ದುರಂತ: ಮೃತ‌ ಕಾರ್ಮಿಕನ‌ದೇಹದ ಅವಶೇಷ ಮಣ್ಣಿನ ಮಡಕೆಯಲ್ಲಿ ಕುಟುಂಬಕ್ಕೆ ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ಸಂಭವಿಸಿದ ಅಗ್ನಿ‌ ದುರಂತದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ದೇಹವು ಸಂಪೂರ್ಣ ಸುಟ್ಟು‌ ಬೂದಿಯಾಗಿತ್ತು. ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ತಂಡವು ಹಿರಿಯ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಮೃತ ಕಾರ್ಮಿಕ ಯಲ್ಲಪ್ಪನ ದೇಹದ ಅವಶೇಷಗಳನ್ನು ಮುಂದಿನ ಕ್ರಿಯಾಕರ್ಮಗಳಿಗೆ ಅನುಕೂಲವಾಗುವಂತೆ ಸಂಪ್ರದಾಯದಂತೆ ಮಣ್ಣಿನ‌ ಮಡಿಕೆಯಲ್ಲಿ ಹಾಕಿ ತಂದೆಯವರಿಗೆ ಹಸ್ತಾಂತರಿಸಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.

ಮಣ್ಣಿನ ಮಡಕೆಯಲ್ಲಿ ನೀಡಲಾಗಿದ್ದರೂ ಮಳೆ ಬರಬಹುದು ಎಂಬ ಕಾರಣಕ್ಕೆ ಮಡಕೆಯನ್ನು ಪ್ಲ್ಯಾಸ್ಟಿಕ್ ಚೀಲದಲ್ಲಿಟ್ಟುಕೊಂಡು ತರಲಾಯಿತು ಎಂದು ಮೃತ ಕಾರ್ಮಿಕ ಯಲ್ಲಪ್ಪನವರ ತಂದೆ ಸ್ವತಃ ತಿಳಿಸಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ 6 ಗಂಟೆಗೆ ಕುಟುಂಬದ ಸದಸ್ಯರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ದುರಂತ ಘಟನೆಯ ನಡೆಯುವ ವೇಳೆ ಕಾರ್ಮಿಕ‌ ಲಿಫ್ಟ್ ಬಳಿ ಇದ್ದ ಬಗ್ಗೆ ಸಹೋದ್ಯೋಗಿಗಳು ತಿಳಿಸಿದ್ದರು. ಆ ಪ್ರಕಾರ ಕಾರ್ಯಾಚರಣೆ ನಡೆಸಿದ ತಂಡವು ಬೆಳಿಗ್ಗೆ 10 ಗಂಟೆಯ ವೇಳೆಗೆ ಸುಟ್ಟು ಬೂದಿಯಾಗಿದ್ದ ಕಾರ್ಮಿಕನ ದೇಹದ ಅವಶೇಷಗಳನ್ನು ಪತ್ತೆ ಮಾಡಿತು.

ಇದಾದ ಬಳಿಕ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ಕೈಗೊಂಡು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30 ಗಂಟೆಗೆ ಡಿಸಿಪಿ ಅವರು ಸೇರಿದಂತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಯೇ ದೇಹದ ಅವಶೇಷಗಳನ್ನು ಮಣ್ಣಿನ ಮಡಕೆಯಲ್ಲಿ ನೀಡಲಾಗಿದೆ ಎಂದು ಮೃತ ಕಾರ್ಮಿಕನ ತಂದೆ ತಿಳಿಸಿದ್ದಾರೆ ಎಂದು ಹೇಳಿದೆ.

ಮೃತದೇಹವನ್ನು ತಂದೆಗೆ ಕೈ ಚೀಲದಲ್ಲಿ ನೀಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button