Kannada NewsKarnataka News

ರಾಜ್ಯ ಕಾಂಗ್ರೆಸ್ ನಾಯಕರೆಲ್ಲ ಬೆಳಗಾವಿಯತ್ತ ದೌಡು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದಲ್ಲಿ ಪ್ರವಾಹ ಬಂದು ಒಂದೂವರೆ ತಿಂಗಳಾಗುತ್ತ ಬಂದಿದೆ. ಅರ್ಧಕ್ಕರ್ಧ ರಾಜ್ಯವೇ ನಲುಗಿ ಹೋಗಿದೆ. ಆದರೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯ ಮಾತ್ರ ನಡೆದೇ ಇಲ್ಲ. ರಾಜ್ಯ ಸರಕಾರದ ಬಳಿ ಹಣವಿಲ್ಲ, ಕೇಂದ್ರ ಸರಕಾರ ಕೊಡುತ್ತಿಲ್ಲ. ಇಂತಹ ಸಂಕಷ್ಟದಲ್ಲಿ ರಾಜ್ಯದ ಜನ ಕಂಗೆಟ್ಟಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಳೆ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕಾಗಿ ರಾಜ್ಯದ ಕಾಂಗ್ರೆಸ್ ನಾಯಕರೆಲ್ಲ ಬೆಳಗಾವಿಯತ್ತ ದೌಡಾಯಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಹಲವಾರು ಮಾಜಿ ಸಚಿವರು, ಶಾಸಕರು, ಕಾಂಗ್ರೆೆಸ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವಾರು ನಾಯಕರು ಸೋಮವಾರ ರಾತ್ರಿಯೇ ಬೆಳಗಾವಿ ತಲುಪಿದ್ದಾರೆ. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಪ್ರವಾಹ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ಅವರು ಸಮಯವಿಲ್ಲ, ವಿದೇಶ ತಿರುಗಲು ಬೇಕಾದಷ್ಟು ಸಮಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಪ್ರತಿಭಟನೆ ನಡೆಯಲಿದ್ದು, ಆರ್ ಟಿಓ ವೃತ್ತದ ಕಾಂಗ್ರೆಸ್ ಕಚೇರಿಯಿಂದ ಚನ್ನಮ್ಮ ವೃತ್ತದವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಇದರಿಂದಾಗಿ ನಗರದಲ್ಲಿ ಸಂಚಾರದಟ್ಟಣೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಚಾರ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ವಾಹನ ಮಾರ್ಗ ಬದಲಾವಣೆ

ಕೇಂದ್ರ ಬಸ್ ನಿಲ್ದಾಣದಿಂದ ಆರ್.ಟಿ.ಓ. ಸರ್ಕಲ್ ಹಾಗೂ ಅಶೋಕ ಪಿಲ್ಲರದಿಂದ ಆರ್‌ಟಿಓ ಸರ್ಕಲ್ ಕಡೆಗೆ ಸಾಗುವ ಎಲ್ಲ ವಾಹನಗಳು ಅಶೋಕ ಪಿಲ್ಲರ ಮಾರ್ಗವಾಗಿ ಕನಕದಾಸ ಸರ್ಕಲ್ ಮುಖಾಂತರ ಗೋಕಾಕ ರಸ್ತೆ ಮಾರ್ಗವಾಗಿ ಹಾಗೂ ಅಶೋಕ ನಗರ ಕ್ಯಾನ್ಸರ್ ಆಸ್ಪತ್ರೆ ರಸ್ತೆ ಮೂಲಕ ಮುಂದೆ ಸಾಗುವುದು.

ಕೊಲ್ಹಾಪೂರ ಸರ್ಕಲ್ ಕಡೆಯಿಂದ ಚನ್ನಮ್ಮಾ ಸರ್ಕಲ್ ಕಡೆಗೆ ಸಾಗುವ ಎಲ್ಲ ವಾಹನಗಳು ವಾಯ್ ಜಂಕ್ಷನ್ ಮೂಲಕ ಲಕ್ಷ್ಮೀ ಕಾಂಪ್ಲೆಕ್ಸ್, ಸದಾಶಿವನಗರ ಮಾರ್ಗವಾಗಿ ಮುಂದೆ ಸಾಗುವುದು.

ಕೊಲ್ಹಾಪೂರ ಸರ್ಕಲ್ ಕಡೆಯಿಂದ ಆರ್.ಟಿ.ಓ. ಸರ್ಕಲ್ ಕಡೆಗೆ ಸಾಗುವ ಎಲ್ಲ ವಾಹನಗಳು ಪೊಲೀಸ್ ಭವನದ ಹತ್ತಿರ ನ್ಯಾಯ ಮಾರ್ಗದ ಮೂಲಕ ಅಶೋಕ ನಗರ ಮುಖಾಂತರ ಮುಂದೆ ಸಾಗುವುದು.

ಗೋವಾ, ಖಾನಾಪೂರ, ಕಾರವಾರ, ದಾಂಡೇಲಿ ಕಡೆಯಿಂದ ಹುಬ್ಬಳ್ಳಿ-ಧಾರವಾಡ, ಬಾಗಲಕೋಟ, ಗೋಕಾಕ, ಕೊಲ್ಹಾಪೂರ, ಚಿಕ್ಕೋಡಿ ಸಂಕೇಶ್ವರ, ಹುಕ್ಕೇರಿ ಕಡೆಗೆ ಸಾಗುವ ಎಲ್ಲ ವಾಹನಗಳೂ ಮಿಲ್ಟ್ರಿ ಮಹಾದೇವ ಮಂದಿರ ಕ್ರಾಸ್‌ದಿಂದ ಹಾಗೂ ಗ್ಲೋಬ್ ಥಿಯೇಟರ್ ಸರ್ಕಲ್, ಶೌರ್ಯ ಚೌಕ, ಗಾಂಧಿ ಸರ್ಕಲ್, ಹಿಂಡಲಗಾ ಹಿಂಡಲಗಾ ಗಣೇಶ ಮಂದಿರ, ಪಾರೆಸ್ಟ್ ನಾಕಾ ಮೂಲಕ ಬಾಕ್ಸೈಟ್ ರಸ್ತೆ ಮಾರ್ಗವಾಗಿ ಮುಂದೆ ಸಾಗುವುದು.

ಬೆಳಗಾವಿಯಲ್ಲಿ ಸೆ. 24ರಂದು ರಾಜ್ಯ ಕಾಂಗ್ರೆಸ್ ಪ್ರತಿಭಟನೆ, ಯಾವ ಕಾರಣಕ್ಕೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button