*ರೈಲ್ವೆ ನಿಲ್ದಾಣದಲ್ಲಿ ಮಹಾಪುರುಷರ ಪ್ರತಿಮೆ ಅಳವಡಿಸುವಂತೆ ಬೃಹತ್ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆಗಳು ಅಳವಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಭೀಮವಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಆಗಮಿಸಿದ ನೂರಾರು ಹೋರಾಟಗಾರರು ರೈಲ್ವೆ ನಿಲ್ದಾಣದ ಮುಂದೆ ದಲಿತ ಮುಖಂಡ ಸಿದ್ದರಾಯ ಮೇತ್ರಿ ಹಾಗೂ ರಾಮಕಾಂತ ಕೊಂಡುಸ್ಕರ್ ಅವರ ನೇತೃತ್ವದಲ್ಲಿ ಶಾಂತಯುತವಾಗಿ ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ರಮಾಕಾಂತ ಕೊಂಡುಸ್ಕರ್ ಅವರು, ಕಳೆದ ಮೂರು ವರ್ಷಗಳಿಂದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆಗಳನ್ನು ಅಳವಡಿಸದೆ ಹಾಗೆ ಇಟ್ಟು ಅವಮಾನ ಮಾಡಲಾಗಿದೆ. ಬೆಳಗಾವಿ ರೈಲ್ವೆ ನಿಲ್ದಾದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಯಾಣ ಮಾಡಿದ್ದಾರೆ. ಜೊತೆಗೆ ಮರಾಠ ಸೈನ್ಯ ದಳ ಇರುವುದರಿಂದ ಪ್ರತಿಮೆಗಳನ್ನು ಅಳವಡಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಸಿದ್ದರಾಯ ಮೇತ್ರಿ ಅವರು, ಕಳೆದ ಒಂದೂವರೆ ವರ್ಷದಿಂದ ಪ್ರತಿಮೆಗಳನ್ನು ಅಳವಡಿಕೆ ಮಾಡದೆ ಗೋಡೌನಿನಲ್ಲಿ ಇಡಲಾಗಿದೆ. ಸರ್ಕಾರದ ಅನುದಾನದಲ್ಲಿ ತಯಾರಿಸಿರುವ ಪ್ರತಿಮೆಗಳನ್ನು ಅಳವಡಿಸದೆ ಅವಮಾನ ಮಾಡುವ ಕೆಲಸ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳಿಗೆ ಪ್ರತಿಮೆಗಳು ಅಳವಡಿಸಲು ಆಗದಿದ್ದರೆ ಹೇಳಿ ನಾವೆ ಮೂರ್ತಿ ಅಳವಡಿಕೆ ಮಾಡುತ್ತೇವೆ. ನಮಗೆ ಗುಂಡು ಹೊಡೆದರೂ ಪರವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ