Kannada NewsKarnataka News

ವಿಕೋಪಕ್ಕೆ ಹೋದ ಮಾಜಿ ದೋಸ್ತಿಗಳ ಜಗಳ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮಧ್ಯೆ ಆರೋಪ-ಪ್ರತ್ಯಾರೋಪ ವಿಕೋಪಕ್ಕೆ ಹೋಗಿದೆ. ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಮಾತಾಡಿಕೊಳ್ಳುತ್ತಿದ್ದಾರೆ. ದೋಸ್ತಿ ಸರಕಾರ ನಡೆಸಿದ್ದು ಇವರೇನಾ ಎನ್ನುವ ಅನುಮಾನ ಬರೋ ರೀತಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ.
ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿಯಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಅವರೇ ಹೇಳಿಕೊಂಡಿದ್ದಾರೆ ತಮ್ಮದು ಅತ್ಯಂತ ಕೆಟ್ಟ ಸರಕಾರ ಎಂದು. ಅವರು ಬಿಜೆಪಿಗೆ ಮತಕೊಡುವಂತೆ ಹೇಳಿದ್ದರು ಎಂದು ಅವರದೇ ಸರಕಾರದ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ ಎಂದು ಹರಿಹಾಯ್ದರು.
ಇದಕ್ಕೆ ಬೆಂಗಳೂರಿನಲ್ಲಿ ಪ್ರತ್ಯುತ್ತರ ನೀಡಿರುವ ಕುಮಾರಸ್ವಾಮಿ, ನಾನು ಸರಕಾರ ಮಾಡಿದ್ದು ಸಿದ್ದರಾಮಯ್ಯ ಅವರಿಂದಲ್ಲ. ಹೈಕಮಾಂಡ್ ತೀರ್ಮಾನ ಅದು. ಅದನ್ನು ಸಿದ್ದರಾಮಯ್ಯ ಹೇಗೆ ಸಹಿಸಿಕೊಂಡಿದ್ದರು ಎನ್ನುವುದು ನನಗೆ ಗೊತ್ತಿದೆ. ಲೋಕಸಭೆ ಚುನಾವಣೆ ನಂತರ ಒಂದು ಸೆಕೆಂಡ್ ಕೂಡ ಸಮ್ಮಿಶ್ರ ಸರಕಾರ ಇರಲು ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಅವರ ಶಾಸಕರಿಗೆ ಹೇಳಿದ್ದರು ಎಂದು ತಿರುಗೇಟು ನೀಡಿದ್ದಾರೆ.
ನಾನು ಸಿದ್ದರಾಮಯ್ಯ ಸಾಕಿದ ಗಿಣಿ ಅಲ್ಲ ಎಂದೂ ಅವರು ತಿರುಗೇಟು ನೀಡಿದರು.

ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೂಡ ಸಿದ್ದರಾಮಯ್ಯ ಹರಿಹಾಯ್ದುದ್ದಾರೆ. ರಾಜ್ಯಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದಿದ್ದಾರೆ. ಮೋದಿ-ಶಾ ಮುಂದೆ ಮಾತನಾಡುವ ಧೈರ್ಯ ಇಲ್ಲ ಯಡಿಯೂರಪ್ಪಗೆ ಎಂದು ಕಿಡಿಕಾರಿದರು.
ಯಡಿಯೂರಪ್ಪನವರನ್ನು ನೋಡಿದ್ರೆ ಅಯ್ಯೋ ಪಾಪ ಅನಸ್ತಿದೆ. ಯಡಿಯೂರಪ್ಪ ದೆಹಲಿಗೆ ಹೋದ್ರೆ ಮೋದಿ ಭೇಟಿಯಾಗಲ್ಲ, ಶಾ ಭೇಟಿಯಾಗಲ್ಲ. ಮೋದಿಗೆ ವಿದೇಶ ಸುತ್ತಾಡೋಕೆ ಟೈಂ ಇದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನಿಡೋಕೆ ಟೈಂ ಇಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿಗೆ ಕರ್ನಾಟಕದ ಬಗ್ಗೆ ಯಾಕೆ ಈ ನಿರ್ಲಕ್ಷ್ಯ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಮೀತ ಶಾ, ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ಪ್ರವಾಹ ಸಮೀಕ್ಷೆಗೆ ಬಂದು ಹೋದ್ರು. ಒಂದು ಬಿಡಿಗಾಸಿನ ನೆರವು ಕೊಡಲಿಲ್ಲ. ಇದನ್ನೆಲ್ಲ ನೋಡಿ ನಾವು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಕೇಂದ್ರದ ನೆರವಿನ ಅಗತ್ಯವಿಲ್ಲ ಎಂಬ ತೇಜಸ್ವಿಸೂರ್ಯ ನೀಡಿರುವ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ, ತೇಜಸ್ವಿಸೂರ್ಯ ಅಪ್ರಭುದ್ದ ರಾಜಕಾರಣಿ. ಆತ ಸಂವಿಧಾನ ಓದಿಕೊಳ್ಳಲಿ ಎಂದರು.

ಬಿಜೆಪಿ ಸರಕಾರ ಸತ್ತು ಹೋಗಿದೆ

ಇದಕ್ಕೂ ಮೊದಲು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಸತ್ತು ಹೋಗಿದೆ ಎಂದರು.
ರಾಜ್ಯದಲ್ಲಿ ಭೀಕರ ಪ್ರವಾಹಕ್ಕೆ ಸಾಕಷ್ಟು ಸಾವು-ನೋವು ಸಂಭವಿಸಿದೆ. ಸಂತ್ರಸ್ತರ ಬದುಕು ಕೊಚ್ಚಿ ಹೋಗಿದೆ. ರಾಜ್ಯ, ಕೇಂದ್ರ ಸರ್ಕಾರದಿಂದ ಅವರ ಬದುಕು ಕಟ್ಟವ ಕೆಲಸ ಆಗಿಲ್ಲ. ಸಂತ್ರಸ್ತರಿಗೆ ನೆರವಾಗದ ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರ ಬೇಕಾ ನಮಗೆ‌ ಎಂದು ಪ್ರಶ್ನಿಸಿದರು.
ಮಾನವಿಯತೆ ಇಲ್ಲದ ಸರ್ಕಾರ ಸತ್ತು ಹೋಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಕಾಂಗ್ರೆಸ್ ಉಗ್ರ ಹೋರಾಟ ಮಾಡುತ್ತದೆ. ಉಪ ಚುನಾವಣೆಗೂ ಪ್ರತಿಭಟನೆಗೂ ಸಂಬಂಧವಿಲ್ಲ. ಕಾಂಗ್ರೆಸ್ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಹತ್ತಿರ ಆತ್ಮಸ್ಥೈರ್ಯ, ಎದೆಗಾರಿಗೆ ಇಲ್ಲ. ಸಿಎಂಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲು ಆಗುತ್ತಿಲ್ಲ. ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದೆ. ಎಲ್ಲಾ ಅನರ್ಹ ಶಾಸಕರಿಗೆ ಜನ ಪಾಠ್ ಕಲಿಸುತ್ತಾರೆ. ಕಾಂಗ್ರೆಸ್ ಉಪ ಚುನಾವಣೆಯಲ್ಲಿ 15 ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಖಂಡ್ರೆ ಹೇಳಿದರು.

 ಜಮಖಂಡಿ ಯಿಂದ ಪಾದಯಾತ್ರೆ 

 ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಅಲ್ಲಿಂದ ಪಾದಯಾತ್ರೆಯಲ್ಲಿ ಆಗಮಿಸಿದ್ದಾರೆ. 21ನೇ ತಾರೀಖು ಪಾದಯಾತ್ರೆ ಆರಂಭಿಸಲಾಗಿತ್ತು.
ರಾಜ್ಯ ನೆರೆಯಿಂದ ಸಾಕಷ್ಟು ಹಾನಿಯಾಗಿದೆ. ನೆರೆ ಸಂತ್ರಸ್ತರಿಗೆ  ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು  ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು ನ್ಯಾಮಗೌಡ.
 ಖಜಾನೆಯಲ್ಲಿ ಹಣ ಇದ್ರೂ ಕೂಡ ನೀಡುತ್ತಿಲ್ಲ. ಪರಿಹಾರ ನೀಡಲು ಹೃದಯ ಶ್ರೀಮಂತಿಕೆ ಬೇಕು. ನೆರೆ ಸಂತ್ರಸ್ತರಿನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಸರಕಾರಕ್ಕೆ ಹೃದಯ ಶ್ರೀಮಂತಿಕೆ ಇಲ್ಲ. ಬಿಜೆಪಿ  ಸಚಿವರು ಮತ್ತು ಸಂಸದರು ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು  ಶಾಸಕ ಆನಂದ ನ್ಯಾಮಗೌಡ.

ಬಿಎಸವೈ ಸರ್ಕಾರ ಅನರ್ಹ ಶಾಸಕರ ಗುಲಾಮ 

 ಕಾಂಗ್ರೆಸ್ ಮುಖಂಡ ಅಶೋಕ ಪಟ್ಟಣ, ಬಿಜೆಪಿ ಸರಕಾರ ಅನರ್ಹ ಶಾಸಕರ ಗುಲಾಮನಂತೆ ವರ್ತಿಸುತ್ತಿದೆ ಎಂದರು. ಅನರ್ಹ ಶಾಸಕರಿಗೆ ಈ ಚುನಾವಣೆಯಲ್ಲಿ ಬುದ್ದಿ ಕಲಿಸ್ತೇವೆ. ಉಪ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿ ಗಳನ್ನ ನಾವು ಹಾಕ್ತೇವೆ ಎಂದು ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button