Karnataka NewsPolitics

*ಚನ್ನಪಟ್ಟಣದಲ್ಲಿ ಮೊದಲ ಬಾರಿ ಧ್ವಜಾರೋಹಣ ನೆರವೇರಿಸಿದ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.

ಇದೇ ಮೊದಲಬಾರಿ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪೊಲೀಸ್ ಧ್ವಜ ವಂದನೆ ಸ್ವೀಕರಿಸಿ, ಮಾತನಾಡಿದರು. ಎಂಎಲ್ಸಿ ಸಿ ಪಿ ಯೋಗೇಶ್ವರ, ಕಾಂಗ್ರೆಸ್ ಮುಖಂಡರಾದ ದುಂತುರು ವಿಶ್ವನಾಥ್, ಜಿಲ್ಲಾಧಿಕಾರಿ ಯಶವಂತ್ ಗುರಿಕಾರ್, ಸಿಇಓ ದಿಗ್ವಿಜಯ್ ಬೋಡಕೆ, ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು:

ನಾವೆಲ್ಲರೂ 78ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದು, ನನ್ನ ರಾಜಕೀಯ ಬದುಕಿನಲ್ಲಿ ಇದು ವಿಶೇಷವಾದ ದಿನವಾಗಿದೆ. ಈ ದಿನ ನಾನು ಸ್ವಾತಂತ್ರ್ಯ ದಿನದ ಶುಭಾಶಯಗಳು.

ಮಹಾತ್ಮಾ ಗಾಂಧಿಜಿ ಅವರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಲು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಈಗ ನೂರು ವರ್ಷ ಪೂರ್ಣಗೊಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ದಾದಾಬಾಯಿ ನವರೋಜಿ, ಬಾಲಗಂಗಾಧರ ತಿಲಕ್, ಮಹಾತ್ಮಾ ಗಾಂಧೀಜಿ, ನೆಹರೂ, ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸರೋಜಿನಿ ನಾಯ್ಡು, ಲಾಲಲಜಪತ ರಾಯ್, ಗೋಪಾಲ ಕೃಷ್ಣ ಗೋಖಲೆ, ಬಿಪಿನ್ ಚಂದ್ರಪಾಲ್ ಸೇರಿದಂತೆ ಅನೇಕರ ಹೋರಾಟವಿದೆ.

ಸ್ವಾತಂತ್ರ ಹೋರಾಟದಲ್ಲಿ ಸುಮಾರು 6.5 ಲಕ್ಷ ಜನ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಸಾವಿರಾರು ಜನ ತಮ್ಮ ಮನೆ, ಮಠ, ಜೀವನವನ್ನೇ ತ್ಯಾಗ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕ ರಾಜ್ಯದಿಂದ ಅನೇಕ ವೀರ ಹೋರಾಟಗಾರರ ತ್ಯಾಗವಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ ಸೇರಿದಂತೆ ಅನೇಕರು ಬ್ರಿಟೀಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ್ದಾರೆ.ಅದೇ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಈ ಜಿಲ್ಲೆಯವರ ಕೊಡುಗೆಯೂ ಅಪಾರವಾಗಿದೆ. ಹಾಲಹಳ್ಳಿ ಗ್ರಾಮದ ಪುಟ್ಟಸ್ವಾಮಿ, ಕನಕಪುರದ ಲಿಂಗಯ್ಯ, ಕರಿಯಪ್ಪ, ಗಾಂಧಿ ಕೃಷ್ಣಯ್ಯ, ಹುಣಸೇಹಳ್ಳಿದೊಡ್ಡಿ ಬಾಳಪ್ಪ ಸೇರಿದಂತೆ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಮಹಾತ್ಮಾ ಗಾಂಧಿ ಅವರು ಎರಡು ಬಾರಿ ಚನ್ನಪಟ್ಟಣಕ್ಕೆ ಭೇಟಿ ನೀಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಜನರ ಭಾಗವಹಿಸುವಿಕೆಗೆ ಸ್ಫೂರ್ತಿ ತುಂಬಿದ್ದರು. ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ.

ಸ್ವಾತಂತ್ರ್ಯಕ್ಕಾಗಿ ಸಾವಿರಾರು ದೇಶಭಕ್ತರು ಬ್ರಿಟೀಷರ ಗುಂಡೇಟಿಗೆ ಎದೆಕೊಟ್ಟು, ನೇಣುಗಂಬಕ್ಕೆ ಜೀವ ಕೊಟ್ಟಿದ್ದಾರೆ. ಕೆಲವರು ಜೈಲಿನಲ್ಲೇ ತಮ್ಮ ಜೀವನ ಕಳೆದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಈ ಮಹಾನ್ ಹೋರಾಟಗಾರರು ಆಶಯ ಹಾಗೂ ಕನಸುಗಳನ್ನು ನನಸು ಮಾಡಲು ಸ್ವತಂತ್ರ ಭಾರತದ ಪ್ರಜೆಗಳಾದ ನಾವು ಸಂಕಲ್ಪ ಮಾಡಿ ಮುನ್ನಡೆಯಬೇಕಿದೆ.

ಸರ್ಕಾರದ ಪರವಾಗಿ ಇಲ್ಲಿ ಧ್ವಜಾರೋಹಣ ಮಾಡುವ ಅವಕಾಶ ಸಿಕ್ಕಿರುವುದು ಬಹಳ ಹೆಮ್ಮೆಯ ವಿಚಾರ. ಹಿಂದೆ ರಾಮನಗರದ ಕನಕಪುರ ಹಾಗೂ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಇಂದು ಚನ್ನಪಟ್ಟಣದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಭಾಗ್ಯ. ಚನ್ನಪಟ್ಟಣದಲ್ಲಿ ಧ್ವಜ ಹಾರಿಸಲು ಜನಪ್ರತಿನಿಧಿ ಇಲ್ಲದ ಕಾರಣ, ನಿಮ್ಮ ಮನೆ ಮಗನಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆ ಇಲ್ಲ.

ಸ್ವಾತಂತ್ರ್ಯ ಎಂದರೆ ಗುಲಾಮಗಿರಿಯಿಂದ ಹೊರ ಬಂದ ದಿನ. ಇಂದು ಕೇವಲ ಧ್ವಜಾರೋಹಣ ಮಾಡುವ ದಿನ ಮಾತ್ರವಲ್ಲ. ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಯ ಆರೋಹಣ.

ಧ್ವಜವನ್ನು ಅರ್ಧಕ್ಕೆ ಹಾರಿಸುವುದು ಹೇಗೆ ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನವೋ ಅಧೇ ರೀತಿ ಜನರಿಂದ ಆಯ್ಕೆಯಾದ ವ್ಯಕ್ತಿ ಅರ್ಧಕ್ಕೆ ಬಿಟ್ಟು ಹೋಗುವುದು ಜನರಿಗೆ ಮಾಡುವ ಅಪಮಾನವಾಗಿದೆ.

ಈ ಸ್ವಾತಂತ್ರ್ಯೋತ್ಸವ ದಿನದ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕಿನ ಅಭಿವೃದ್ಧಿ ನಂತರ ಉಜ್ವಲವಾಗಿದೆ. ಇಲ್ಲಿ ರಾಜಕೀಯ ಮಾಡುವುದಕ್ಕಿಂತ ಹೇಗೆ ಅಭಿವೃದ್ಧಿ ಮಾಡಬಹುದು ಎಂದು ತೋರಿಸಲು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಸಹಕಾರ ಅಗತ್ಯವಾಗಿದೆ.

ಈ ಜಿಲ್ಲೆಯವರು ಬೆಂಗಳೂರಿಗೆ ಸೇರಿದ್ದು, ಈ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಸ್ವಾಭಿಮಾನ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದ್ದೇವೆ.

ನಮ್ಮ ಸರ್ಕಾರ ಜನರ ಮನೆ ಬಾಗಿಲಿಗೆ ಬಂದು, ಜನರ ಸಮಸ್ಯೆ ಆಲಿಸಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಹೆಚ್ಚಿನ ಜನರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು, ಸುಮಾರು 22 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅವರ ಸಮಸ್ಯೆಗಳನ್ನು ಆಲಿಸಲು ಪ್ರಯತ್ನಿಸುತ್ತಿದ್ದೇನೆ.

ಜನರ ಬದುಕಿನಲ್ಲಿ ಬದಲಾವಣೆ ತರಲು ನಮ್ಮ ಸರ್ಕಾರ ಸಂಕಲ್ಪ:

ಸಾಮಾಜಿಕ ಕ್ರಾಂತಿ ಹರಿಕಾರ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಇಟ್ಟುಕೊಂಡು ನಮ್ಮ ಸರ್ಕಾರ ಕಳೆದ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿ ನುಡಿದಂತೆ ನಡೆಯಲಾಗಿದೆ. ದೇಶದ ಯಾವುದೇ ಸರ್ಕಾರ ಜಾರಿ ಮಾಡದ ನೇರ ನಗದು ವರ್ಗಾವಣೆ ಯೋಜನೆಯನ್ನು ನಮ್ಮ ಸರ್ಕಾರ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಶ್ರೇಯ ನಮ್ಮ ಸರ್ಕಾರದ್ದಾಗಿದೆ. ನಾಡಿನ ಜನರ ಆಶೋತ್ತರಗಳನ್ನು ಆಧರಿಸಿ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳು ವಿಶ್ವಮಟ್ಟದಲ್ಲಿ ಪ್ರಶಂಸೆ ಪಡೆದಿದೆ.

ನಾವು ಈ ಜನರ ಬದಲಾವಣೆಗೆ ಪ್ರಯತ್ನಿಸುತ್ತಿದ್ದು, ಪಕ್ಷಾತೀತವಾಗಿ ನಿಮ್ಮ ಸಹಕಾರ ಬಯಸುತ್ತಿದ್ದೇನೆ. ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿಗೆ ನಿನ್ನೆ ವಿಶೇಷ ಆದೇಶ ಹೊರಡಿಸಿದ್ದು, ಪಂಚಾಯ್ತಿ ಮಟ್ಟಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ₹ 150 ಕೋಟಿ ಅನುದಾನ ಮಂಜೂರಾತಿ ಹೊರಡಿಸಿದೆ. ತಾಲೂಕಿನಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳು ಮುಂದುವರಿದಿವೆ. ಚನ್ನಪಟ್ಟಣದಲ್ಲಿ ಚೆಕ್ ಡ್ಯಾಂಮ್ ಸೇರಿದಂತೆ 105 ಜಾಗಗಳಲ್ಲಿ ₹ 115 ಕೋಟಿ ವೆಚ್ಚದ ಕಾಮಗಾರಿ ಮುಂದುವರಿಸಲಾಗಿದೆ. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಕುಡಿಯುವ ನೀರು ಪೂರೈಸಲು ಸತ್ತೆಗಾಲದಿಂದ ನೀರು ತರಲು ಯೋಜನೆ ಮಾಡಲಾಗಿದೆ.

ವನ್ಯಜೀವಿಗಳ ದಾಳಿಯಿಂದ ಆಗುತ್ತಿರುವ ನಷ್ಟ ತಡೆಯಲು ₹ 65 ಕೋಟಿ ಹಣ ಬಿಡುಗಡೆ ಮಾಡಿ ಜನರ ರಕ್ಷಣೆ ಮಾಡಲಾಗುತ್ತಿದೆ. ವಸತಿ ಸಚಿವಾಲಯದಿಂದ ಚನ್ನಪಟ್ಟಣ ತಾಲೂಕಿಗೆ ವಿಶೇಷವಾಗಿ ₹ 5 ಸಾವಿರ ಮನೆಗಳನ್ನು ಮಂಜೂರಾತಿ ಮಾಡಲಾಗಿದೆ. ಆಶ್ರಯ ಯೋಜನೆಯಲ್ಲಿ 7 ಸಾವಿರ ಅರ್ಜಿಗಳು ಬಂದಿದ್ದು, 5 ಸಾವಿರ ನಿವೇಶನ ಹಂಚಲು ನಮ್ಮ ಸರ್ಕಾರ ಮುಂದಾಗಿದೆ. ಸುಮಾರು 117 ಎಕರೆ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ. ಖಾಸಗಿ ಜಮೀನನ್ನು ಮಾರುಕಟ್ಟೆ ದರದಲ್ಲಿ ಖರೀದಿ ಮಾಡಲು ಸರ್ಕಾರ ಸಿದ್ಧವಾಗಿದೆ.

ವಿವಿಧ ಸಮುದಾಯಗಳ ಸಮುದಾಯ ಭವನಗಳ ನಿರ್ಮಾಣ ಹಾಗೂ ಸಾಲ ಸೌಲಭ್ಯ ಒದಗಿಸಲು ನಮ್ಮ ಸರ್ಕಾರ ಮುಂದಾಗಿದೆ. ನಾನು ಇಂಧನ ಮಂತ್ರಿಯಾಗಿದ್ದಾಗ ಈ ಜಿಲ್ಲೆಯಲ್ಲಿ ರೈತರಿಗೆ ಟ್ರಾನ್ಸ್ ಫಾರ್ಮರ್ ಅಳವಡಿಸಿಕೊಡಲಾಗಿತ್ತು. ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಅಧಿಕಾರದಲ್ಲಿದೆ. ನಿಮ್ಮ ಸೇವೆ ಮಾಡಿ ನಿಮ್ಮ ಹೃದಯ ಗೆಲ್ಲಲು ನಾವು ಪ್ರಯತ್ನಿಸುತ್ತೇವೆ. ಈ ತಾಲೂಕಿನಲ್ಲಿ ಈ ಹಿಂದೆ ಇದ್ದ ಶಾಸಕರು ಈ ಪವಿತ್ರವಾದ ಕಾರ್ಯಕ್ರಮಕ್ಕೆ ಎಷ್ಟು ಬಾರಿ ಬಂದಿದ್ದರು ಎಂಬುದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನಮ್ಮ ಹಿರಿಯರು ನಮಗೆ ಸ್ವಾತಂತ್ರ ತಂದುಕೊಟ್ಟ ಪರಿಣಾಮ ನಮಗೆ ಸಂವಿಧಾನ ಹಾಗೂ ಈ ಅಧಿಕಾರ ಸಿಕ್ಕಿದೆ. ಅವರನ್ನು ಸ್ಮರಿಸಿ, ಗೌರವಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button