Latest

ಕೆಜಿಎಫ್‌ನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಚಿಂತನೆ: ಕೆ.ಜೆ.ಜಾರ್ಜ್

 

 

ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಕೋಲಾರ್ ಗೋಲ್ಡ್ ಫೀಲ್ಡ್ಸ್ (ಕೆ ಜಿ ಎಫ್) ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿ ಜಿ ಎಂ ಎಲ್) ಸ್ಥಗಿತಗೊಂಡಿವುದರಿಂದ ಅಲ್ಲಿನ ನಿರುದ್ಯೋಗಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ತುಮಕೂರು ಮಾದರಿಯಲ್ಲಿಯೇ ಕೆ ಜಿ ಎಫ್ ನಲ್ಲೂ ಕೈಗಾರಿಕಾ ಅವಕಾಶಗಳನ್ನು ಸೃಜಿಸಲು ಉದ್ದೇಶಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಕ್ಕರೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಕಲಾಪ ವೇಳೆ ಶಾಸಕಿ ಎಂ. ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೆಜಿಎಫ್‌ನ ಸ್ಥಗಿತಗೊಂಡಿರುವ ಬಿಜಿಎಂಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ಶ್ರೇಯೋಭಿವೃದ್ಧಿ ಕೇಂದ್ರ ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಈ ಪ್ರದೇಶದಲ್ಲಿ ಉಪಯೋಗಿಸದೆಯೇ ಉಳಿದಿರುವ ಜಮೀನಿನಲ್ಲಿ ತುಮಕೂರು ನಗರದ ಸಮೀಪದಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಚೆನೈ-ಬೆಂಗಳೂರು ಕೈಗಾರಿಕಾ ಪಡೆಸಾಲೆಯ ಮಾದರಿಯಲ್ಲಿ ಕೆಜಿಎಫ್‌ನಲ್ಲೂ ಕೈಗಾರಿಕಾ ಪಡೆಸಾಲೆ ಸ್ಥಾಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಸಂಬಂಧಿಸಿದಂತೆ ೨೦೧೮ ರ ನವೆಂಬರ್ ೧೩ ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ಕೋಲಾರ ಜಿಲ್ಲಾಧಿಕಾರಿಯವರಿಗೆ ನಾಲ್ಕು ತಿಂಗಳೊಳಗಾಗಿ ಕೈಗಾರಿಕಾ ಪ್ರದೇಶ ಸ್ಥಾಪಿಸುವ ಜಮೀನು ಗುರುತಿಸಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button