*ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸೋನು ನಿಗಮ್*: *ಕರವೇ ಹೋರಾಟಕ್ಕೆ ತೆರೆ*

ಪ್ರಗತಿವಾಹಿನಿ ಸುದ್ದಿ: ಕನ್ನಡಿಗರ ಭಾವನೆಗಳಿಗೆ ನೋವುಂಟುಮಾಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಖ್ಯಾತ ಗಾಯಕ ಸೋನು ನಿಗಮ್ ಮತ್ತೆ ಕ್ಷಮೆಯಾಚಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸೋನು ನಿಗಮ್, ಹಿಂದೆ ಆಡಿದ್ದ ಮಾತುಗಳಿಂದ ಕನ್ನಡಿಗರಿಗೆ ನೋವಾಗಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ತಿಳಿಸಿ, ಬೇಷರತ್ತಾಗಿ ಕ್ಷಮೆ ಕೇಳಿದ್ದಾರೆ. ಈ ಬೆಳವಣಿಗೆಯನ್ನು ನಾರಾಯಣಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿವಾದಕ್ಕೆ ಅಂತ್ಯ ಹಾಡುವ ನಿರ್ಧಾರ ಪ್ರಕಟಿಸಿದ್ದಾರೆ.
ಸೋನು ನಿಗಮ್ ಅವರ ಹಾಡುಗಳನ್ನು ಕನ್ನಡಿಗರು ಕೂಡ ಇಷ್ಟಪಟ್ಟಿದ್ದಾರೆ. ಗಾಯಕನ ಬಗ್ಗೆ ವೈಯಕ್ತಿಕ ದ್ವೇಷ ಅಥವಾ ಮುನಿಸು ಇರಲಿಲ್ಲ. ಆದರೆ, ಆ ಒಂದು ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು ಸಹಜವಾಗಿತ್ತು ಎಂದು ನಾರಾಯಣಗೌಡ ತಿಳಿಸಿದ್ದಾರೆ. ಈಗ ಸೋನು ನಿಗಮ್ ಕ್ಷಮೆ ಕೇಳಿರುವುದರಿಂದ ವಿವಾದವನ್ನು ಇಲ್ಲಿಗೇ ಮುಗಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡೇತರ ಭಾಷೆಗಳ ಹಲವು ದಿಗ್ಗಜ ಗಾಯಕರನ್ನು ಕನ್ನಡಿಗರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಘಂಟಸಾಲ, ಪಿ.ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್ ಮತ್ತು ಚಿತ್ರಾ ಸೇರಿದಂತೆ ಅನೇಕ ಕಲಾವಿದರು ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ್ದಾರೆ. ಅದೇ ರೀತಿ ಸೋನು ನಿಗಮ್ ಕೂಡ ಕನ್ನಡದಲ್ಲಿ ಹಲವು ಉತ್ತಮ ಹಾಡುಗಳನ್ನು ಹಾಡಿದ್ದಾರೆ. ಹೀಗಾಗಿ ಕಹಿ ಘಟನೆಯನ್ನು ಮರೆತು, ಸಂಗೀತದ ಮೂಲಕ ಪ್ರೀತಿ ಮತ್ತು ಸೌಹಾರ್ದತೆ ಬೆಳೆಯಲಿ ಎಂದು ನಾರಾಯಣಗೌಡ ಆಶಿಸಿದ್ದಾರೆ. ಸೋನು ನಿಗಮ್ ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಲಿ, ಕರ್ನಾಟಕದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಿ ಎಂದೂ ಹಾರೈಸಿದ್ದಾರೆ.
ಈ ವಿವಾದಕ್ಕೆ ಕಾರಣವಾಗಿದ್ದು 2025ರ ಏಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮ. ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದಾಗ, ಸೋನು ನಿಗಮ್ ಕನ್ನಡ ಹಾಡಿನ ಬೇಡಿಕೆಯನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ಮಾತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು. ಬಳಿಕ ಪ್ರಕರಣದಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.
ಇದೀಗ ಅಕ್ಟೋಬರ್ 24ರಂದು ಬೆಂಗಳೂರಿನ ಭಾರತೀಯ ಮಾಲ್ನಲ್ಲಿ ಸೋನು ನಿಗಮ್ ಅವರ ‘ದಿ ರೆವಲ್ಯೂಷನ್ ಇಂಡಿಯಾ ಟೂರ್’ ಸಂಗೀತ ಕಾರ್ಯಕ್ರಮ ನಡೆಯಲು ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಕಾರ್ಯಕ್ರಮ ನಡೆದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೆ, ಸೋನು ನಿಗಮ್ ಕ್ಷಮೆಯಾಚಿಸಿರುವ ಹಿನ್ನೆಲೆಯಲ್ಲಿ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಾಗಿ ನಾರಾಯಣಗೌಡ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




