Belagavi NewsBelgaum NewsKannada NewsKarnataka NewsLatest

ಚುನಾವಣೆ ಫಲಿತಾಂಶಕ್ಕೆ ತಲೆ ಕೆಡಿಸಿಕೊಳ್ಳದೆ ಪಂಚ ಗ್ಯಾರಂಟಿ ಮುಂದುವರಿಕೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ರಾಜ್ಯದ ನಮ್ಮ ಕಾಂಗ್ರೆಸ್ ಸರಕಾರ ಜನರಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಚುನಾವಣೆಯ ಫಲಿತಾಂಶಕ್ಕೂ ತಲೆಕೆಡಿಸಿಕೊಳ್ಳದೆ ಜನರಿಗೋಸ್ಕರ ತಂದಿರುವ ಐದೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದೆ ಮುಂದುವರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. 

ಮೂಡಲಗಿಯಲ್ಲಿ ಶ್ರೀ ಮಡ್ಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ರಾಜಗೋಪುರದ ಕಳಸಾರೋಹಣ, ಮಹಾದ್ವಾರದ ಉದ್ಘಾಟನೆ ಹಾಗೂ ರಥೋತ್ಸವದ ನಿಮಿತ್ಯ ನಡೆದ ಸತ್ಸಂಗ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಲೋಕಸಭೆ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲಲಿವೆ ಎನ್ನುವ ವಿರೋಧಿಗಳ ಅಪಪ್ರಚಾರದ ಹಿನ್ನೆಲೆಯಲ್ಲಿ, ಸಚಿವರು ಈ ವಿಷಯ ಸ್ಪಷ್ಟಪಡಿಸಿದರು. ಪಂಚ ಗ್ಯಾರಂಟಿ ಯೋಜನೆಗಳು ಜನರಿಗಾಗಿ ತಂದಿರುವ ಯೋಜನೆಗಳು. ಅವುಗಳನ್ನು ಜನರಿಗೋಸ್ಕರು ಮುಂದುವರಿಸಲಾಗಿದೆ. ಚುನಾವಣೆ ಫಲಿತಾಂಶಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ಸರಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಿದರು.  

ಗುಡಿ, ಗಂಡಾರಗಳ ವೈಭವ ನೋಡುವುದಾದರೆ ಅರಬಾವಿ ಕ್ಷೇತ್ರದಲ್ಲಿ ನೋಡಬೇಕು. ಅಷ್ಟು ಚೆನ್ನಾಗಿ ಇಲ್ಲಿನ ದೇವಸ್ಥಾನಗಳು, ಮಹಾಧ್ವಾರಗಳು ನಿರ್ಮಾಣವಾಗಿವೆ ಎಂದ ಸಚಿವರು, ಇಲ್ಲಿನ ಜನರು ಯಾವ ಶಾಸಕರು, ಸಂಸದರು ದುಡ್ಡು ಕೊಡುತ್ತಾರೆ ಎಂದು ಕಾಯುವುದಿಲ್ಲ. ತಾವೇ ಕಿಸೆಯಿಂದ ದುಡ್ಡು ಹಾಕಿ ಗುಡಿ ಗುಂಡಾರ ಕಟ್ಟುತ್ತಾರೆ. ಅಷ್ಟು ದಡ್ಡ ಮನಸ್ಸಿರುವ ಜನರು ಇಲ್ಲಿನವರು ಎಂದು ಪ್ರಶಂಸಿಸಿದರು.

 ಭಾರತ 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಅತ್ಯಂತ ಶ್ರೀಮಂತ ಇತಿಹಾಸ ನಮ್ಮದು.  ದೇಶದ ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ  ಇರುವ ನಮ್ಮ ಸಂಸ್ಕೃತಿ ಇದಕ್ಕೆ ಕಾರಣ. ನಮ್ಮ ಮನೆಯಲ್ಲಿ ಬಂಗಾರವಿಲ್ಲದಿದ್ದರೂ ದೇವರ ಕಳಶಕ್ಕೆ ಬಂಗಾರ ಹಾಕುತ್ತೇವೆ. ಅಂತಹ ಭಕ್ತಿ ನಮ್ಮದು ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಈ ವರ್ಷ ದೇವರ ಆಶಿರ್ವಾದದಿಂದ ಮಳೆ, ಬೆಳೆ ಚೆನ್ನಾಗಿ ಆಗಿದೆ. ದೇವರ ಆಶಿರ್ವಾದ ನಿಮ್ಮ ಮೇಲಿರಲಿ. ಸಂತೃಪ್ತಿಯ ಜೀವನ ಎಲ್ಲರದ್ದಾಗಲಿ ಎಂದು ಆಶಿಸಿದ ಸಚಿವರು, ಸೆ.3ರಂದು ವೀರಭದ್ರೇಶ್ವರ ಜಯಂತಿ. ಅಂದು ಎಲ್ಲರೂ ಜಯಂತಿಯನ್ನು ಆಚರಣೆ ಮಾಡಬೇಕು ಎಂದರು. 

ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಮಾತನಾಡಿದರು. ಸಮಾರಂಭದಲ್ಲಿ ಹುಕ್ಕೇರಿ ಹಿರೇಮಠದ ಪ.ಪೂ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮುಧೋಳದ ಪ.ಪೂ ಸಿದ್ದರಾಮ ಶಿವಯೋಗಿ ಮಹಾಸ್ವಾಮಿಗಳು, ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಮಹಾಂತೇಶ ಕಡಾಡಿ, ಶ್ರೀ ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಭೀಮಪ್ಪ ಹಂದಿಗುಂದ, ಭೀಮಪ್ಪ ಗಡಾದ, ಬಿ.ಬಿ.ಬೆಳಕೊಡ್, ಲಗಮಣ್ಣ ಕಳಸಣ್ಣವರ, ರಾವಸಾಬ್ ಬೆಳಕೊಡ್, ನಿಂಗಪ್ಪ ಪಿರೋಜಿ, ಎಂ.ಜಿ.ಗಾಣಿಗೇರ್ ಹಾಗೂ ದೇವಸ್ಥಾನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button