ಪ್ರಗತಿವಾಹಿನಿ ಸುದ್ದಿ: ಪತಿಯ ಕುಡಿತದ ಚಟ ಬಿಡಿಸಲು ಪತ್ನಿ ಪರದಾಡುವುದನ್ನು ನೋಡಿದ್ದೇವೆ. ರಿಹ್ಯಾಬ್ ಸೆಂಟರ್ ಗೆ ಸೇರಿಸುವುದು, ಚಿಕಿತ್ಸೆ ಕೊಡಿಸುವುದು ಹೀಗೆ ನಾನಾ ಸವಾಲುಗಳನ್ನು ಎದುರಿಸುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಪತ್ನಿಯ ಕುಡಿತದ ಅಭ್ಯಾಸ ಬಿಡಿಸಲು ಪತಿ ಆಕೆಯನ್ನು ರಿಹ್ಯಾಬ್ ಸೆಂಟರ್ ಗೆ ಸೇರಿಸಿ ಫಜೀತಿಗೆ ಒಳಗಾಗಿದ್ದಾನೆ.
ಹೆಂಡತಿಯ ಕುಡಿತದ ಚಟ ಬಿಡಿಸಲೆಂದು ರಿಹ್ಯಾಬ್ ಸೆಂಟರ್ ಗೆ ಸೇರಿಸಿದ್ದು, ಆಕೆ ಅಲ್ಲಿನ ಸಿಬ್ಬಂದಿಯೊಂದಿಗೆ ಪರಾರಿಯಾಗಿದ್ದಾಳೆ ಎಂದು ಪತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.
ಗಂಗರಾಜು ಎಂಬ ವ್ಯಕ್ತಿ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಗಂಗರಾಜು ದಂಪತಿ 13 ವರ್ಷಗಳ ಹಿಂದೆ ವಿವಾಹವಾಗಿದ್ದು, 11 ವರ್ಷದ ಮಗನಿದ್ದಾನೆ. ಆದರೆ ಪತ್ನಿ ಕುಡಿತದ ಚಟಕ್ಕೆ ಒಳಗಾಗಿದ್ದಳು ಎನ್ನಲಾಗಿದೆ. ಗಂಗರಾಜು ಬಿಎಂಟಿಸಿ ಕಂಡಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಂಗರಾಜು ಹೇಳುವ ಪ್ರಕಾರ ಅವರ ಪತ್ನಿಗೆ ವಿಪರೀತ ಕುಡಿತದ ಚಟವಂತೆ. ಪತ್ನಿಯ ಕುಡಿತ ಬಿಡಿಸಲು ಆಕೆಯನ್ನು ಮೇ 4ರಂದು ಶ್ರೀ ಸಾಯಿ ಫೌಂಡೇಶನ್ ಹೆಸರಿನ ರಿಹ್ಯಾಬ್ ಸೆಂಟರ್ ಗೆ ಸೇರಿದ್ದನಂತೆ. ಆ. 10ರಂದು ಆಕೆಯನ್ನು ಮನೆಗೆ ಕರೆದುಕೊಂಡುಬಂದಿದ್ದನಂತೆ. 22ನೇ ತಾರಿಖು ಮಗನ ಪಿಜಿಗೆ ಹೋಗಿ ಬರುವುದಾಗಿ ಹೋದವಳು ನಾಪತ್ತೆಯಾಗಿದ್ದಳಂತೆ. ರಿಹ್ಯಾಬ್ ಸೆಂಟರ್ ನ ಸಿಬ್ಬಂದಿ ಸುನೀಲ್ ಎಂಬಾತನ ಜೊತೆ ತನ್ನ ಪತ್ನಿ ಪರಾರಿಯಾಗಿದ್ದಾಳೆ ಎಂದು ಗಂಗರಾಜು ಆರೋಪಿಸುತ್ತಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನ್ನ ಪತ್ನಿಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ