ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮಹಾರಾಷ್ಟ್ರದಲ್ಲಿ ಅಕ್ಟೋಬರ್ 21ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ. ರಾಷ್ಟ್ರ ರಾಜಕಾರಣಿಗಳ ದಂಡು ಮಹಾರಾಷ್ಟ್ರದತ್ತ ಹರಿದುಬರಲಿದೆ.
ಬೆಳಗಾವಿ ರಾಜಕಾರಣಕ್ಕೂ ಮಹಾರಾಷ್ಟ್ರ ರಾಜಕಾರಣಕ್ಕೂ ಮೊದಲಿನಿಂದಲೂ ಬಿಡಲಾರದ ನಂಟಿದೆ. ಭಾಷೆ ಮತ್ತು ಗಡಿ ವಿವಾದ ಏನೇ ಇದ್ದರೂ ಬೆಳಗಾವಿ ಮರಾಠಿ ಭಾಷಿಕರನ್ನು ಮಹಾರಾಷ್ಟಿಗರು ಪ್ರೀತಿಸುತ್ತಾರೆ. ಇವರ ಬಗೆಗೆ ಗೌರವವೂ ಇದೆ. ಹಾಗಾಗಿ ಪ್ರತಿ ಚುನಾವಣೆಯಲ್ಲಿ ಬೆಳಗಾವಿಯ ಮರಾಠಿ ಮಾತನಾಡುವವರು ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಾರೆ.
ಈ ಬಾರಿಯ ಮಹಾರಾಷ್ಟ್ರ ಚುನಾವಣೆ ವೇಳೆಯೇ ಕರ್ನಾಟಕದಲ್ಲಿ ಉಪಚುನಾವಣೆಯೂ ಘೋಷಣೆಯಾಗಿತ್ತು. ಬೆಳಗಾವಿಯ 3 ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿತ್ತು. ಇದರಿಂದಾಗಿ ಮಹಾರಾಷ್ಟ್ರ ಪ್ರಚಾರಕ್ಕೆ ಸ್ವಲ್ಪ ತೊಡಕಾಗಬಹುದು ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಕರ್ನಾಟಕದ ಉಪಚುನಾವಣೆ ರದ್ದಾಗಿರುವುದರಿಂದ ಬೆಳಗಾವಿ ರಾಜಕಾರಣಿಗಳ ದಂಡೇ ಮಹಾರಾಷ್ಟ್ರದಲ್ಲಿ ಹೊರಟಿದೆ.
ಬೆಳಗಾವಿ ಅಲ್ಲದೆ ವಿಜಯಪುರ, ಬಾಗಲಕೋಟೆ, ಗುಲಬರ್ಗಾದಿಂದ ಸಹ ಕಾರ್ಯಕರ್ತರು, ಪ್ರಮುಖರು ಪ್ರಚಾರದಲ್ಲಿ ತೊಡಗಲಿದ್ದಾರೆ. ಬಿಜೆಪಿ ಪ್ರಮುಖವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತವಾಗಿ ಪ್ರಮುಖರು, ಕಾರ್ಯಕರ್ತರನ್ನು ಅಲ್ಲಿಗೆ ನಿಯೋಜಿಸಿದರೆ, ಕಾಂಗ್ರೆಸ್ ನ ಕೆಲವು ಮುಖಂಡರೂ ಪ್ರಚಾರ ಕಾರ್ಯಕ್ಕೆ ತೆರಳಲಿದ್ದಾರೆ.
ಲಕ್ಷ್ಮಣ ಸವದಿ ನೇತೃತ್ವ
ಈ ಬಾರಿ ಮಹಾರಾಷ್ಟ್ರ ಚುನಾವಣೆಯ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನೀಡಿದೆ. ಲಕ್ಷ್ಮಣ ಸವದಿ ಮಹಾರಾಷ್ಟ್ರ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ಅಲ್ಲಿ ಪ್ರಚಾರ ಮತ್ತು ಚುನಾವಣೆಗೆ ಮಾಡಬೇಕಾದ ಪಕ್ಷದ ಇತರ ಕೆಲಸಗಳಲ್ಲಿ ಈಗಾಗಲೆ ಸವದಿ ತೊಡಗಿಕೊಂಡಿದ್ದಾರೆ.
ಕರ್ನಾಟಕದಿಂದ ಪ್ರಚಾರ ಕಾರ್ಯದಲ್ಲಿ ಯಾರನ್ನು ತೊಡಗಿಸಬೇಕು, ಯಾವ ರೀತಿಯ ಕೆಲಸಗಳನ್ನು ಮಾಡಬೇಕು ಎನ್ನುವ ತೀರ್ಮಾನವನ್ನು ಸವದಿ ತಗೆದುಕೊಳ್ಳಲಿದ್ದಾರೆ. ಲಕ್ಷ್ಮಣ ಸವದಿ 2-3 ಬಾರಿ ಮಹಾರಾಷ್ಟಕ್ಕೆ ತೆರಳಿ ಸಭೆಗಳನ್ನು ನಡೆಸಿದ್ದಾರೆ. ಅಗತ್ಯ ಸಿದ್ದತೆಗಳ ಕುರಿತು ಚರ್ಚಿಸಿದ್ದಾರೆ. ಬಾಗಲಕೋಟೆಯ ನಾರಾಯಣಸಾ ಬಾಂಡಗೆ ಅವರು ಕೂಡ ಸವದಿಯ ಜೊತೆಗೆ ಕೆಲಸ ಮಾಡಲಿದ್ದಾರೆ.
ಇವರ ಜೊತೆಗೆ ಬೆಳಗಾವಿ ಶಾಸಕ ಅನಿಲ ಬೆನಕೆ, ಬಿಜೆಪಿ ಮುಖಂಡರಾದ ಕಿರಣ ಜಾಧವ, ಮಾಜಿ ಶಾಸಕ ಸಂಜಯ ಪಾಟೀಲ ಮೊದಲಾದವರು ಸಹ ಈಗಾಗಲೆ ಮಹಾರಾಷ್ಟ್ರ ಚುನಾವಣೆ ತಯಾರಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
3 ಜಿಲ್ಲೆ, 30 ಕ್ಷೇತ್ರ
ಸೊಲ್ಲಾಪುರ, ಸಾಂಗ್ಲಿ ಹಾಗೂ ಕೊಲ್ಲಾಪುರ ಜಿಲ್ಲೆಗಳಲ್ಲಿ ಕರ್ನಾಟಕದ ಗಡಿ ಭಾಗದ ಕಾರ್ಯಕರ್ತರು ಸಕ್ರೀಯರಾಗಿ ತೊಡಗಿಕೊಂಡಿದ್ದಾರೆ. ಕೊಲ್ಲಾಪುರ ಜಿಲ್ಲೆಯಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಮಾಜಿ ಶಾಸಕ ಸಂಜಯ ಪಾಟೀಲ ಕೆಲಸ ಮಾಡುತ್ತಿದ್ದಾರೆ.
ಸೊಲ್ಲಾಪುರ ಜಿಲ್ಲೆಯಲ್ಲಿ ಬೆಳಗಾವಿಯ ಕಿರಣ ಜಾಧವ ಹಾಗೂ ವಿಜಯಪುರದ ಪ್ರಕಾಶ ಅಕ್ಕಲಕೋಟೆ ತೊಡಗಿಸಿಕೊಂಡಿದ್ದಾರೆ. ಸಾಂಗ್ಲಿ ಜವಾಬ್ದಾರಿಯನ್ನು ಕೇಂದ್ರ ಸಚಿವ ರಮೇಶ ಜಿಗಜಿಣಗಿ ವಹಿಸಿಕೊಂಡಿದ್ದಾರೆ. ಇವರ ಜೊತೆಗೆ ತಲಾ 30 ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.
ಈ 3 ಜಿಲ್ಲೆಗಳಲ್ಲಿ 30 ವಿಧಾನಸಭಾ ಕ್ಷೇತ್ರ ಬರಲಿದ್ದು, ಮನೆಮನೆಗೆ ತೆರಳಿ ಪ್ರಚಾರದ ಜೊತೆಗೆ, ಸಮುದಾಯಕೇಂದ್ರಗಳಲ್ಲಿ ಜನರನ್ನು ಕೂಡಿಸಿ ಮಾತನಾಡಲಿದ್ದಾರೆ. ಅಲ್ಲಿನ ಹೊಟೆಲ್ ಗಳಲ್ಲಿ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರೊಂದಿಗೂ ಸಂಪರ್ಕ ಸಾಧಿಸಲಿದ್ದಾರೆ.
ಇವರ ಜೊತೆಗೆ ಸಂಗ ಪರಿವಾರದ ಸಾವಿರಾರು ಕಾರ್ಯಕರ್ತರು ಸಹ ಮಹಾರಾಷ್ಟ್ರ ಚುನಾವಣೆಯ ಪ್ರಚಾರ ಕಾರ್ಚಯದಲ್ಲಿ ತೊಡಗಿದ್ದಾರೆ.
ಸಚಿವರು, ಶಾಸಕರು
ಕರ್ನಾಟಕದಿಂದ ಪ್ರಚಾರಕ್ಕೆ ಯಾರನ್ನು ಕರೆಸಬೇಕು ಎನ್ನುವ ಯೋಜನೆ ತಯಾರಿಸಿ, ಪ್ರಚಾರ ಸಭೆಗಳ ವ್ಯವಸ್ಥೆ ಮತ್ತು ಕೋ ಆರ್ಡಿನೇಶನ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ಪ್ರಚಾರ ಸಭೆಗಳಲ್ಲಿ ಕರ್ನಾಟಕದ ಕೇಂದ್ರ ಸಚಿವರು, ರಾಜ್ಯದ ಮಂತ್ರಿಗಳು, ಈ ಭಾಗದ ಪ್ರಮುಖ ಶಾಸಕರು ಪಾಲ್ಗೊಳ್ಳಲಿದ್ದಾರೆ.
ಬೆಳಗಾವಿಯಿಂದ ಕೇಂದ್ರ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಅಭಯ ಪಾಟೀಲ ಮೊದಲಾದವರು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುವರು.
ಕಾಂಗ್ರೆಸ್ ನಿಂದ ಕೂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಪ್ರಕಾಶ ಹುಕ್ಕೇರಿ, ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಮೊದಲಾದವರು ಪ್ರಚಾರಕ್ಕೆ ಹೋಗಲಿದ್ದಾರೆ. ಆದರೆ ಕಾಂಗ್ರೆಸ್ ಬಿಜೆಪಿಯಷ್ಟು ವ್ಯವಸ್ಥಿತವಾಗಿ ಮತ್ತು ಸಂಘಟಿತವಾಗಿ ಪ್ರಚಾರ ನಡೆಸುತ್ತಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ