ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಜಿಲ್ಲೆಯಿಂದ ಅಕ್ಟೋಬರ-೨೦೧೯ ಮಾಹೆಯಲ್ಲಿ ಮಹಾರಾಷ್ಟ್ರದ ನಾಗಪೂರದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರು ಬೌದ್ಧದರ್ಮದ ದೀಕ್ಷಾ ಪಡೆದ ಭೂಮಿಗೆ ತೆರಳಲು ಇಚ್ಚಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಡಾ.ಬಾಬಾಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಸಲ್ಲಿಸಬಹುದಾಗಿದೆ.
ಮಹಾರಾಷ್ಟ್ರದ ನಾಗಪುರದಲ್ಲಿ ಡಾ ಬಾಬಾ ಸಾಹೇಬ್ ಅಂಬೇಡ್ಕರ ರವರು ಬೌದ್ಧದರ್ಮದ ದೀಕ್ಷಾ ಪಡೆದ ಭೂಮಿಯನ್ನು ದೀಕ್ಷಾ ಭೂಮಿ ಎಂದು ಪರಿಗಣಿಸಿದೆ, ಇದು ಭಾರತದ ಬೌದ್ಧ ಧರ್ಮದ ಯಾತ್ರಾ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ಪ್ರತಿ ವರ್ಷವು ನಾಗಪುರದಲ್ಲಿರುವ ಈ ದೀಕ್ಷಾ ಭೂಮಿಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ ರವರ ಅನುಯಾಯಿಗಳು ದೇಶದ, ರಾಜ್ಯಗಳಿಂದ ಅಕ್ಟೋಬರ್ ೨ನೇ ವಾರದಲ್ಲಿ ಭೇಟಿ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯದಿಂದಲೂ ಸಹ ಬಹಳಷ್ಟು ಜನ ಅಕ್ಟೋಬರ್ ತಿಂಗಳಲ್ಲಿ ನಡೆಯುವ ದಮ್ಮ ಪ್ರವರ್ತನಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಯಾಯಿಗಳು ಮೇಲ್ಕಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಾಗಪೂರಕ್ಕೆ ಭೇಟಿ ಮಾಡಲು ಅನುಕೂಲವಾಗುವಂತೆ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೈಲು, ಬಸ್‌ಗಳ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಅರ್ಹತೆಗಳು:
ಯಾತ್ರಾರ್ಥಿಗಳು ಬಿ.ಪಿ.ಎಲ್ ಕಾರ್ಡ ಹೊಂದಿರಬೇಕು, ಯಾತ್ರಾರ್ಥಿಗಳು ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು, ಇತರೆ ಸಮುದಾಯದ ಜನರು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳು ಸಹ –
ಯಾತ್ರೆ ಕೈಗೊಳ್ಳಬಹುದಾಗಿದೆ, ಯಾತ್ರಾರ್ಥಿಗೆ ಕನಿಷ್ಠ ವಯಸ್ಸು ೧೮ ವರ್ಷ ಮೇಲ್ಪಟ್ಟಿರಬೇಕು, ಡಾ.ಬಿ.ಆರ್.ಅಂಬೇಡ್ಕರ ರವರ ಚಿಂತನೆಗಳ ಬಗ್ಗೆ ಅರಿವು ಹೊಂದಿದ್ದು, ಸಮಾಜ ಸೇವೆ ಮಾಡಿದ ಅನುಭವ ಹೊಂದಿರಬೇಕು.
ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರು ಈ ಸೌಲಭ್ಯಕ್ಕೆ ಅರ್ಹರಲ್ಲ, ಸರ್ಕಾರಿ ಮತ್ತು ಅದರ ಅಂಗಸಂಸ್ಥೆಯಲ್ಲಿ ಸೇವೆಯಲ್ಲಿರುವವರು ಅರ್ಹರಲ್ಲ, ಜಿಲ್ಲೆಯಿಂದ ನಾಗಪುರಕ್ಕೆ ಹೋಗಿ ಬರಲು ತಗಲುವ ಪ್ರಯಾಣದ ವೆಚ್ಚವನ್ನು ಮಾತ್ರ ಸರ್ಕಾರದಿಂದ ಭರಿಸಲಾಗುವದು ವಸತಿ ಮತ್ತು ಬೋಜನಾ ವೆಚ್ಚವನ್ನು ಯಾತ್ರಾರ್ಥಿಗಳು ಭರಿಸಬೇಕು.
ಆನ್‌ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲೆಗೆ ನಿಗಧಿಪಡಿಸಿದ ಗುರಿಯಂತೆ ಅನುಯಾಯಿಗಳನ್ನು ನಾಗಪೂರ ಯಾತ್ರಿಗೆ ಕಳುಹಿಸುವ ಏರ್ಪಾಡನ್ನು ಮಾಡಲಾಗುವದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕರುಗಳನ್ನು ಕಛೇರಿ ನಡೆಯುವ ಸಮಯದಲ್ಲಿ ಸಂರ್ಪಕಿಸಬಹುದಾಗಿದೆ ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ