ಪ್ರಗತಿವಾಹಿನಿ ಸುದ್ದಿ: ಈ ಹಿಂದೆ ನಡೆದ ಪ್ಯಾರಾಲಿಂಪಿಕ್ಸ್‌ನ ಟೋಕಿಯೊ ಆವೃತ್ತಿಯಲ್ಲಿ ಭಾರತ ಐದು ಚಿನ್ನ ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 19 ಪದಕಗಳೊಂದಿಗೆ ತನ್ನ ಅತ್ಯುತ್ತಮ ಪದಕ ಸಾಧನೆಯನ್ನು ದಾಖಲಿಸಿತ್ತು. ಈ ಆವೃತ್ತಿಯಲ್ಲಿ ಭಾರತ ತಂಡ ಈಗಾಗಲೇ ಮೂರು ಚಿನ್ನ ಏಳು ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಸೇರಿದಂತೆ ಒಟ್ಟು 20 ಪದಕ ಗೆಲ್ಲುವ ಮೂಲಕ ಅತಿ ಹೆಚ್ಚು ಪದಕ ಗೆದ್ದ ಸಾಧನೆ ಮಾಡಿದೆ.
ನಿನ್ನೆಯಷ್ಟೇ ಭಾರತೀಯ ಅಥ್ಲಿಟ್‌ಗಳು ಬರೋಬ್ಬರಿ 8 ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದ್ದರು. ನಿನ್ನೆ ತಡರಾತ್ರಿ ನಡೆದ ಸೆಣಸಾಟದಲ್ಲಿ 2 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಒಟ್ಟು 20 ಪದಕವನ್ನು ಪಡೆದು ದಾಖಲೆ ಬರೆದಿದ್ದಾರೆ.
ಇನ್ನು ನಿನ್ನೆಯ ಪಂದ್ಯದಲ್ಲಿ ಜಾವೆಲಿನ್ ಎಸೆತಗಾರರು ಎಫ್ 46 ವಿಭಾಗದಲ್ಲಿ ಅಜೀತ್ ಸಿಂಗ್ ಮತ್ತು ವಿಶ್ವದಾಖಲೆಯ ಸುಂದರ್ ಸಿಂಗ್ ಗುರ್ಜರ್ ಕ್ರಮವಾಗಿ 65.62 ಮೀ ಮತ್ತು 64.96 ಮೀಟರ್ ಎಸೆದು ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಇನ್ನು ಎತ್ತರ ಜಿಗಿತ ಪಟುಗಳಾದ ಶರದ್ ಕುಮಾರ್ ಮತ್ತು ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಅವರು (ಟಿ63) ಫೈನಲ್‌ನಲ್ಲಿ ಕ್ರಮವಾಗಿ 1.88ಮೀ ಮತ್ತು 1.85ಮೀ ಜಿಗಿತಗಳೊಂದಿಗೆ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ವಿಶ್ವ ಚಾಂಪಿಯನ್ ಸ್ಪಿಂಟರ್ ದೀಪ್ತಿ ಜೀವನಜಿ ಮಹಿಳೆಯರ 400 ಮೀ (ಟಿ 20) ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ಖಚಿತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ