*7 ಜಿಲ್ಲೆಗಳ ಜನತೆಗೆ ಗುಡ್ ನ್ಯೂಸ್: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿ ಉದ್ಘಾಟನೆಗೆ ಕ್ಷಣಗಣನೆ*
ಪ್ರಗತಿವಾಹಿನಿ ಸುದ್ದಿ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-೧ರ ಕಾಮಗಾರಿಗಳ ಉದ್ಘಾಟನೆಗೆ ಕ್ಷಣಗಣೆ ಆರಂಭವಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ, ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ (139 ದಿನಗಳು) 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು
07 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ (Projected population for 2023-24) ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿ.ಎಂ.ಸಿ ಕುಡಿಯುವ ನೀರನ್ನು ಒದಗಿಸುವುದು. ಜೊತೆಗೆ 05 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ವ್ಯಾಪ್ತಿಯಲ್ಲಿ ಬರುವ 527 ಕೆರೆಗಳಿಗೆ 9.953 ಟಿ.ಎಂ.ಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ. 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವ ರೂ.23,251.66 ಕೋಟಿಗಳ ಮೊತ್ತದ ಉದ್ದೇಶಿತ ರಾಜ್ಯದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ:06-09-2024 ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ.
2014ರಲ್ಲಿ ಆರಂಭಗೊಂಡ ಯೋಜನೆಯ ಮೊದಲನೇ ಹಂತದ ಏತ (Lift) ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ ವಿಯರ್-1,2,4,5,6,7&8 ರಿಂದ ಒಟ್ಟಾರೆ 79.50 ಕ್ಯುಮೆಕ್ಸ್ (2800.00 ಕ್ಯೂಸೆಕ್ಸ್) ನೀರನ್ನೆತ್ತಿ ವಿತರಣಾ ತೊಟ್ಟಿ-3 ರವರೆಗೆ (Delivery Chamber-3) ಪೂರೈಸಿ ತದನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ-4 ರ ಮುಖಾಂತರ ಗುರುತ್ವ ಕಾಲುವೆಗೆ 79.50 ಕ್ಯುಮೆಕ್ಸ್ (2800.೦೦ ಕ್ಯೂಸೆಕ್ಸ್) ನೀರನ್ನು ಹರಿಸಲು ಯೋಜಿಸಲಾಗಿದೆ. ಗುರುತ್ವ ಕಾಲುವೆಯು ಒಟ್ಟು 252.61 ಕಿ.ಮೀ ಉದ್ದವಿದ್ದು, ಈ ಪೈಕಿ 164.47 ಕಿ.ಮೀ ಪೂರ್ಣಗೊಂಡಿದ್ದು, 25.87 ಕಿ.ಮೀ ಪ್ರಗತಿಯಲ್ಲಿರುತ್ತದೆ. ಗುರುತ್ವ ಕಾಲುವೆಯ ಸ:೦.೦೦ ಕಿ.ಮೀ ಯಿಂದ ಸ:42.೦೦ ಕಿ.ಮೀ ವರಗಿನ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿದ್ದು, ನಂತರದ ಕಾಮಗಾರಿಗಳು ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವ ಕಾಲುವೆಯ ಸ:32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮುಖಾಂತರ ತಾತ್ಕಾಲಿಕವಾಗಿ 1500 ಕ್ಯೂಸೆಕ್ಸ್ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಇದರನ್ವಯ ನವೆಂಬರ್-2023 ರಿಂದಲೇ ಪೂರ್ವ ಪರಿಕ್ಷಾರ್ಥ ಚಾಲನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ವಿಯರ್-4-5 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ -3 ರವರೆಗೆ ನೀರನ್ನು ಪೂರೈಸಲಾಗಿತ್ತು. ಪ್ರಸ್ತುತ ಇವುಗಳ ಜೊತೆ ವಿಯರ್-1, 2&8 ರಿಂದಲೂ ಸಹ ನೀರನ್ನೆತ್ತಿ ವಿತರಣಾ ತೊಟ್ಟಿ – 4ರವರೆಗೆ ಪೂರೈಸಿ, ಅಲ್ಲಿಂದ ಗುರುತ್ವ ಕಾಲುವೆಗೆ ದಿನಾಂಕ:26-08-2024 ರಂದು ಯಶಸ್ವಿಯಾಗಿ ನೀರು ಹರಿಸಲಾಗಿದ್ದು, ಗುರುತ್ವ ಕಾಲುವೆಯಲ್ಲಿನ ನೀರು ಸ:32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ವೇದಾ ವ್ಯಾಲಿಯನ್ನು ಪ್ರವೇಶಿಸಿ ಈಗಾಗಲೇ ಹಳೇಬೀಡು ಕೆರೆಯು ತುಂಬಿ ಕೋಡಿ ಬಿದ್ದು ತದನಂತರ ಬೆಳವಾಡಿ ಕೆರೆಯನ್ನು ಪ್ರವೇಶಿಸಿದ್ದು ಇಲ್ಲಿಂದ ವಾಣಿ ವಿಲಾಸ ಸಾಗರದತ್ತ ನೀರು ಹರಿಯಲಿದೆ.
ಪ್ರಸಕ್ತ ವಿಯರ್-3 ಅನ್ನು ಹೊರತುಪಡಿಸಿ, ಉಳಿದ ಎಲ್ಲಾ ವಿಯರ್‌ಗಳಿಂದ
ಸೆಪ್ಟಂಬರ್-6 ರಂದು ನೀರನ್ನೆತ್ತಿ ಗುರುತ್ವ ಕಾಲುವೆಗೆ ಪೂರೈಸಲು ಯೋಜಿಸಲಾಗಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಜುಲೈ-2024ರ ಅಂತ್ಯದವರೆಗೆ ಒಟ್ಟಾರೆ ಸಂಚಿತ ರೂ.16,152.05 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದ್ದು, ಯೋಜನೆಯನ್ನು 2026-27ನೇ ಸಾಲಿನಲ್ಲಿ 31-03-2023 ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಎತ್ತಿನಹೊಳೆ ಯೋಜನೆಯ ಜಲಾನಯನ ಪ್ರದೇಶದಲ್ಲಿ ನಿರ್ಮಿಸಲಾಗಿರುವ 8 ವಿಯರ್‌ಗಳ ಹತ್ತಿರ ನೀರಿನ ಹರಿವನ್ನು ನಿಖರವಾಗಿ ಅಳೆಯುವ ಉದ್ದೇಶದಿಂದ (Real time discharge measurement) ಜರ್ಮನ್ ತಂತ್ರಜ್ಞಾನವನ್ನೊಳಗೊಂಡ Telemetry ವ್ಯವಸ್ಥೆಯನ್ನು 2018 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನ ಮುಂಗಾರಿನ ಹಂಗಾಮಿನಲ್ಲಿ ಜೂನ್-1 ರಿಂದ ಆಗಸ್ಟ್-31 ರವರೆಗೆ 14.13 ಟಿ.ಎಂ.ಸಿ ನೀರು ದಾಖಲಾಗಿರುತ್ತದೆ.
ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಹಮ್ಮಿಕೊಂಡಿರುವ ಗುರಿ:
- 2024-25ನೇ ಸಾಲಿಗೆ: 31.03.2025 ರ ಅಂತ್ಯಕ್ಕೆ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ 85 ಕ್ಯುಮೆಕ್ಸ್ ನೀರನ್ನು ಮೇಲೆತ್ತಿ ಗುರುತ್ವ ಕಾಲುವೆ ಸರಪಳಿ 0.00 ಕಿ.ಮೀ ನಿಂದ 100.00 ಕಿ.ಮೀ ವರೆಗೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿನ ನಾಲೆಗೆ ಹರಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವುದು.
- 2025-26ನೇ ಸಾಲಿಗೆ: ದಿನಾಂಕ:01.11.2025ರ ಅಂತ್ಯಕ್ಕೆ ಗುರುತ್ವ ಕಾಲುವೆ 100.00 ಕಿ.ಮೀ ನಿಂದ ಸ:261.69 ಕಿ.ಮೀ ವರೆಗೆ (ಪಾವಗಡ- ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಮತ್ತು ಟಿ.ಜಿ ಹಳ್ಳಿ-ರಾಮನಗರ ಫೀಡರ್ ಒಳಗೊಂಡಂತೆ) ನಾಲೆಗೆ ನೀರು ಹರಿಸುವುದು ಮತ್ತು ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಶೇ.50 ರಷ್ಟು ಕಾಮಗಾರಿಯನ್ನು ಆರ್ & ಆರ್ ಸಹಿತ 31.03.2026ರ ಅಂತ್ಯಕ್ಕೆ ಪೂರ್ಣಗೊಳಿಸುವುದು.
- 2026-27ನೇ ಸಾಲಿಗೆ: ದಿನಾಂಕ:01.11.2026ರ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ:
261.69 ಕಿ.ಮೀ ನಂತರದ ಎಲ್ಲಾ ಫೀಡರ್ ಕಾಮಗಾರಿಗಳನ್ನು ಪೂರ್ಣಗೊಳಿಸಿ
(ಲಿಫ್ಟ್ ಕಾಮಗಾರಿ ಒಳಗೊಂಡಂತೆ) ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಬಾಕಿ ಶೇ.50 ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸುವುದು.
- ಯೋಜನೆಯನ್ನು 2026-27ನೇ ಸಾಲಿನಲ್ಲಿ 31.03.2027ರ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ