ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಎಷ್ಟೋ ಹಳ್ಳಿಗಳು ಇನ್ನೂ ಕತ್ತಲಲ್ಲಿವೆ. ಸರಕಾರದ ಎಷ್ಟೋ ಯೋಜನೆಗಳು ಕಾಗದ ಮತ್ತು ಘೋಷಣೆಯಲ್ಲೇ ಉಳಿದುಕೊಂಡಿವೆ.
ಅಂತವುಗಳ ಸಾಲಿಗೆ ಬೆಳಗಾವಿ ತಾಲೂಕಿನ ಕಲ್ಲೆಹೊಳ ಗ್ರಾಮದ ಭಟ್ ನಗರವೂ ಸೇರಿತ್ತು. ಇಲ್ಲಿರುವ 20-25 ಮನೆಗಳ ಪೈಕಿ 4-5 ಮನೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು. ಅದೂ ನಿರಂತರ ಸರಬರಾಜು ಇರಲಿಲ್ಲ. ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗ್ರಾಮಕ್ಕೆ ಸಂಪೂರ್ಣ ವಿದ್ಯುತ್ ಪೂರೈಸುವ ಭರವಸೆ ನೀಡಿದ್ದರು.
ಅದರಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ, ಇದೀಗ ಸೌಭಾಗ್ಯ ಯೋಜನೆಯ ಅಡಿಯಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಯಶಸ್ವಿಯಾಗಿದ್ದಾರೆ. ಹೆಸ್ಕಾಂ ಸಿಬ್ಬಂದಿ ಹೊಸ ಕಂಬಗಳನ್ನು ಹಾಕಿ, ಲೈನ್ ಎಳೆದು ವಿದ್ಯುತ್ ಕಲ್ಪಿಸಿದ್ದಾರೆ. ಇಡೀ ಗ್ರಾಮ ಈಗ ಕತ್ತಲಿನಿಂದ ಬೆಳಕಿನ ಕಡೆಗೆ ಬಂದು ಸಂಭ್ರಮ ಆಚರಿಸುತ್ತಿದೆ.
ಕಲ್ಲೆಹೋಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಕೂಡ ಆಗಿರಲಿಲ್ಲ. ಇದೀಗ ಗ್ರಾಮದಲ್ಲಿ ಅಭಿವೃದ್ಧಿ ಪರ್ವ ಕೂಡ ಆರಂಭವಾಗಿದೆ. ರಸ್ತೆ ಕಾಮಗಾರಿ, ಗಟಾರ ಕಾಮಗಾರಿಗಳು ಆರಂಭವಾಗಿದ್ದು ಅತ್ಯಂತ ವೇಗದಲ್ಲಿ ನಡೆಯುತ್ತಿವೆ. ಇದರಿಂದಾಗಿ ಜನರ ಬಹುಕಾಲದ ಬೇಡಿಕೆಗಳು ಈಡೇರಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ