ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾದರಿಯನ್ನು ಅಧ್ಯಯನ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧ್ಯಯನ ವರದಿಯ ಬಳಿಕ ಸರ್ಕಾರದ ಆರ್ಥಿಕ ಸ್ಥಿತಿ ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತನ್ಮೂಲಕ ಪರಿಹಾರ ಕಾರ್ಯ ವಿಳಂಬಕ್ಕೆ ಸರಕಾರ ಪ್ರಯತ್ನಿಸುತ್ತಿದೆಯೇ ಎನ್ನುವ ಅನುಮಾನ ಮೂಡುವಂತಾಗಿದೆ.
ಅಥಣಿ ತಾಲ್ಲೂಕಿನ ದರೂರ ಗ್ರಾಮದಲ್ಲಿ ಶುಕ್ರವಾರ (ಅ.4) ನಡೆದ ಪರಿಹಾರ ವಿತರಣೆ- ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ಇದೇವೇೆಳೆ, ರಾಜ್ಯಸರಕಾರದ ಬಳಿ ಹಣವಿಲ್ಲ ಎಂದೂ ಅವರು ಬಹಿರಂಗಪಡಿಸಿದರು.
ಪ್ರವಾಹದಿಂದ ಮನೆ, ಬೆಳೆ ಕಳೆದುಕೊಂಡು ಜನರು ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ನೆರವು ನೀಡಿದೆ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲದಿದ್ದರೂ ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವವರಿಗೆ ಐದು ಲಕ್ಷ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ವಿವಿಧ ಹಂತದಲ್ಲಿ ಪರಿಹಾರ ವಿತರಣೆ ಕಾರ್ಯ ಈಗಾಗಲೇ ನಡೆದಿದೆ. ಒಂದೇ ಮನೆಯಲ್ಲಿ ವಾಸಿಸುವ ಎರಡೂ ಕುಟುಂಬಗಳಿಗೂ ಪ್ರತ್ಯೇಕ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರೈತರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಿದೆ. ಕೆಲವು ವರ್ಷಗಳ ಹಿಂದೆ ಸ್ಥಳಾಂತರ ಮಾಡಿದ ಗ್ರಾಮಗಳಿಗೆ ಜನರು ಹೋಗಲಿಲ್ಲ. ಗ್ರಾಮಸ್ಥರು ಒಟ್ಟಾಗಿ ಸಂಪೂರ್ಣ ಗ್ರಾಮ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದರೆ ತಕ್ಷಣ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ
16 ಗ್ರಾಮಗಳಿಗೆ ನೀರು ಪೂರೈಸುವ 89 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಹದಿನೈದು ದಿನಗಳಲ್ಲಿ ಸಚಿವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಸಹಕಾರಿ ಸಂಸ್ಥೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ ಯೋಜನೆಗೆ ಸರ್ಕಾರ ಬದ್ಧವಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪರಿಷ್ಕರಣೆಗೆ ಪ್ರಧಾನಮಂತ್ರಿಗಳ ಗಮನಕ್ಕೆ ತರಲಾಗುವುದು. ಇದಕ್ಕಾಗಿ ಪ್ರಧಾನಿ ಮತ್ತು ಗೃಹಸಚಿವರ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು. ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳ ಪರಿಷ್ಕರಣೆ ಮಾಡಿದರೆ ಮಾತ್ರ ಹೆಚ್ಚಿನ ಪರಿಹಾರ ನೀಡುವುದು ಸಾಧ್ಯವಾಗಲಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪವಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೃಷ್ಣಾ ನದಿತೀರದ ಕೆಲವು ಗ್ರಾಮಗಳು ಪದೆಪದೇ ಮುಳುಗಡೆಯಾಗುತ್ತಿದ್ದು, ಇಂತಹ 22 ಗ್ರಾಮಗಳ ಶಾಶ್ವತ ಸ್ಥಳಾಂತರ ಅಗತ್ಯವಿದೆ ಎಂದು ಹೇಳಿದರು.
ನವಗ್ರಾಮ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಸ್ವಾಧೀನಪಡಿಸಿಕೊಂಡು ಸಂಪೂರ್ಣ ಮುಳುಗಡೆಯಾಗುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಬಾಕಿ ಉಳಿದಿರುವ ನಾಲ್ಕು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ತಕ್ಷಣ ಆಡಳಿತಾತ್ಮಕ ಮಂಜೂರಾತಿ ನೀಡಬೇಕಿದೆ ಎಂದು ಮುಖ್ಯಮಂತ್ರಿಗಳ ಗಮನಸೆಳೆದರು.
ಕಬ್ಬು ಸೇರಿದಂತೆ ಎಲ್ಲ ಬಗೆಯ ಬೆಳೆಹಾನಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ನೀಡುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.
ಸಂಪೂರ್ಣವಾಗಿ ಕುಸಿದ ಮನೆಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತಿರುವುದು ಇತಿಹಾಸದಲ್ಲಿ ಇದೇ ಪ್ರಥಮ ಬಾರಿಯಾಗಿದೆ.
ಕೆಲ ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿದರೆ ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ವಿತರಣೆಯಲ್ಲಿ ಜಿಲ್ಲಾಡಳಿತ ಅತ್ಯುತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಪ್ರತಿ ಸಂತ್ರಸ್ತ ಕುಟುಂಬಗಳಿಗೆ ತಲಾ ಹತ್ತು ಸಾವಿರ ನೀಡುವುದರ ಜತೆಗೆ ಸಂತ್ರಸ್ತರ ಪುನರ್ವಸತಿಗೆ ಎಲ್ಲ ರೀತಿಯ ನೆರವು ನೀಡಲು ಮುಖ್ಯಮಂತ್ರಿಗಳು ಹಗಲಿರುಳು ಶ್ರಮಿಸಿದ್ದಾರೆ ಎಂದು ಹೇಳಿದರು.
ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ:
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃಷ್ಣಾ ನದಿ ಪ್ರವಾಹದಿಂದ ಬಾಧಿತರಾದ ಸಂತ್ರಸ್ತರಿಗೆ ಪರಿಹಾರದ ಚೆಕ್ ಗಳನ್ನು ವಿತರಿಸಿದರು.
ದರೂರ, ಹುಲಗಬಾಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಂತ್ರಸ್ತರಿಗೆ ಸಾಂಕೇತಿಕವಾಗಿ ಚೆಕ್ ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಅಥಣಿ, ರಾಯಬಾಗ ಹಾಗೂ ಕಾಗವಾಡ ತಾಲ್ಲೂಕಿನ ಸಂತ್ರಸ್ತರ ಪರವಾಗಿ ಅವರ ಅಹವಾಲುಗಳನ್ನು ಮುಖಂಡರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಸಂಪೂರ್ಣ ಮುಳುಗಡೆಯಾಗಿರುವ ಗ್ರಾಮಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಬೇಕು; ಈಗಾಗಲೇ ಸರ್ಕಾರದಿಂದ ಸ್ವಾಧೀನಪಡಿಸಿಕೊಂಡಿರುವ ಗ್ರಾಮಗಳ ಸಂತ್ರಸ್ತರಿಗೂ ಪರಿಹಾರ ನೀಡಬೇಕು; ರೇಷನ್ ಕಾರ್ಡ ಪರಿಗಣಿಸಿ ಎಲ್ಲ ಕುಟುಂಬಗಳನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸಿ ಪರಿಹಾರ ಮತ್ತು ನಿವೇಶನ ಒದಗಿಸಬೇಕು; ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಆಗಿರುವುದರಿಂದ ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಲಿಖಿತ ಮನವಿಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಪಿ.ರಾಜೀವ್, ಮಹಾಂತೇಶ ದೊಡ್ಡಗೌಡರ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಪರಿಷತ್ ಸದಸ್ಯ ಹನಮಂತ ನಿರಾಣಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಯೋಗಿ ಕಳಸದ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ