Latest

*ತೋಟಗಾರಿಕಾ ಇಲಾಖೆ ತಪ್ಪು ಮಾಹಿತಿ: ಇಲಾಖಾ ಅಧಿಕಾರಿಗೆ ಸಿಎಂ ಕ್ಲಾಸ್*

ಪ್ರಗತಿವಾಹಿನಿ ಸುದ್ದಿ: ಸಭೆಗೆ ತಪ್ಪು ಮಾಹಿತಿ ಕೊಟ್ಟ ಕಾರಣಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡರು.

ಮೈಸೂರು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಗೆ ಹಿಂದಿನ ದಿನ ಸರಿಯಾದ ಹೋಂವರ್ಕ್ ಏಕೆ ಮಾಡಲಿಲ್ಲ? ಈ ರೀತಿ ತಪ್ಪು ಮಾಹಿತಿ ಮುದ್ರಿಸಿ ಸಭೆಗೆ ನೀಡಿದರೆ ನೀವೇ ಹೊಣೆ ಆಗಬೇಕಲ್ವಾ ಎಂದು ಸಿಎಂ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದರು. ಆ ಅಧಿಕಾರಿ ಕ್ಷಮೆ ಕೋರಿ ಮುಂದೆ ಯಡವಟ್ಟುಗಳು ಆಗದಂತೆ ಎಚ್ಚರಿಕೆ ವಹಿಸುವುದಾಗಿ ತಪ್ಪೊಪ್ಪಿಕೊಂಡು, ತಿದ್ದಿಕೊಳ್ಳುವುದಾಗಿ ಸಭೆಗೆ ತಿಳಿಸಿದರು.

ಕೃಷಿ ಇಲಾಖೆ

ಕೃಷಿ ಇಲಾಖೆ ಮೂಲಕ ಪ್ರಗತಿನ ಪರಿಶೀಲನಾ ಸಭೆಗೆ ಸಿಎಂ ಚಾಲನೆ ನೀಡಿದರು.
• ಮುಂಗಾರು, ಪೂರ್ವ ಮುಂಗಾರು ಕೃಷಿ ಚಟುವಟಿಕೆ ಪ್ರಮಾಣದ ಬಗ್ಗೆ ಸಿಎಂ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿಗಳು ತಾಲ್ಲೂಕು ವಾರು ಬಿತ್ತನೆ ಮಾಹಿತಿ ನೀಡಿ ವಾಡಿಕೆಗಿಂತ ಕೃಷಿ ಚಟುವಟಿಕೆ ಕಡಿಮೆ ಆಗಿಲ್ಲ ಎಂದರು. ಬಳಿಕ ಮುಖ್ಯಮಂತ್ರಿಗಳು, “ಜಿಲ್ಲೆಯಲ್ಲಿ ಕೃಷಿಗೆ ಯಾವುದಾದರೂ ರೋಗ ತಗುಲಿದೆಯೇ? ಔಷಧ, ಗೊಬ್ಬರ ರೆಡಿ ಇದೆಯೇ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಕೃಷಿ ಬೆಳೆಗೆ ರೋಗ ತಗುಲಿಲ್ಲ. ಔಷಧ, ಗೊಬ್ಬರ ಅಗತ್ಯವಿದ್ದಷ್ಟು ಸಂಗ್ರಹ ಇದೆ ಎಂದರು.
• ಮೂರು ತೊಂಬತ್ತು ಸಾವಿರ ಹೆಕ್ಟೇರ್ ನಲ್ಲಿ ಮೂರು ಲಕ್ಷ ಎಂಬತ್ತು ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಬರುವ ದಿನಗಳಲ್ಲಿ ನಿರೀಕ್ಷಿತ ಮಳೆ ಆಗದಿದ್ದರೆ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಆದರೆ ಅದಕ್ಕೆ ಅವಕಾಶ ಇಲ್ಲದಂತೆ ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಭತ್ತ ಬೆಳೆಗೆ ಯಾವುದೇ ತೊಂದರೆ ಇಲ್ಲ. ನೆನ್ನೆಗೆ ಉತ್ತರ ಮಳೆ ಮುಗಿದಿದೆ. ಕೃತ್ತಿಕಾ ಮತ್ತು ರೋಹಿಣಿ ಮಳೆಯಿಂದ ಮೇ ತಿಂಗಳಲ್ಲಿ ೨೫೫ ಹೆಕ್ಟೇರ್ ನಷ್ಟು ಬೆಳೆ ನಷ್ಟ ಆಗಿದೆ ಎಂದು ತಾಲ್ಲೂಕಾವಾರು ಹಾನಿ ಕುರಿತು ಕೃಷಿ ಅಧಿಕಾರಿಗಳು ವಿವರಿಸಿದರು. ತಂಬಾಕು ಸೇರಿ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗಿದೆ ಎಂದರು.
• ಈ ವೇಳೆ ಮುಖ್ಯಮಂತ್ರಿಗಳು, “ಮಳೆ ಹಾನಿಯಿಂದ ಆದ ಜೀವ ಹಾನಿ ಮತ್ತು ಮನೆ ಹಾನಿಗಳಿಗೆ ಪರಿಹಾರ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿಗಳು, “ಒಂದು ಜೀವ ಹಾನಿ ಆಗಿತ್ತು. ಇದನ್ನೂ ಸೇರಿಸಿ ಹಾನಿ ಮನೆಗಳಿಗೆ ಪರಿಹಾರ ಸಂಪೂರ್ಣ ನೀಡಲಾಗಿದೆ” ಎಂದರು.
• ಕಳೆದ ವರ್ಷ ಎಷ್ಟು ಬೆಳೆ ಹಾನಿ ಆಗಿತ್ತು, ಎಷ್ಟು ಪರಿಹಾರ ನೀಡಿದ್ದೀರಿ ಎಂದು ಸಿಎಂ ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು 95000 ಹೆಕ್ಟೇರ್ ಬೆಳೆ ಹಾನಿಗೆ 63 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ ಎಂದರು.
• ಮಾಧ್ಯಮಗಳಲ್ಲಿ ವರದಿ ಆಗಿರುವ ರೈತರ ಸಾವು ಮತ್ತು ಬೆಳೆ ಹಾನಿ ವರದಿಗಳನು ನಿರ್ಲಕ್ಷಿಸಬೇಡಿ. ವರದಿಗಳ ಸತ್ಯಾಸತ್ಯತೆ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
• ಸಾಲದಿಂದ ೩೧ ರೈತರು ಆತ್ಮಹತ್ಯೆ ಆಗಿದೆ. ಸಮಿತಿ ಮುಂದೆ ಮಂಡಿಸಿದ ಪ್ರಕರಣ ೨೯, ತಿರಸ್ಕೃತ ೮, ಎಫ್ಎಸ್ಎಲ್ ಬಾಕಿ-೨, ಉಳಿದ ಎಲ್ಲಕ್ಕೂ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
• ತಿರಸ್ಕೃತಗೊಂಡ ಪ್ರಕರಣಗಳ ಕುರಿತು ಸಿಎಂ ಹೆಚ್ಚಿನ ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು-ಕೆಲವರಿಗೆ ಜಮೀನು ಇರಲಿಲ್ಲ. ಒಬ್ಬರು ತಾಯಿ ಹೆಸರಲ್ಲಿ ಸಾಲ ಪಡೆದು ನಾಲ್ಕು ದಿನದಲ್ಲಿ ಪಿರಿಯಾಪಟ್ಟಣದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಸಾಲ ವಸೂಲಾತಿ ಬಗ್ಗೆ ಒತ್ತಡವೂ ಇರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕರಣವನ್ನು ವಿವರಿಸಿದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪಿರಿಯಾಪಟ್ಟಣ ವೆಂಕಟೇಶ್ ಅವರು ಈ ಪ್ರಕರಣವನ್ನೂ ಪರಿಗಣಿಸಿ ಪರಿಹಾರ ಕೊಡಿ ಎಂದರು.
• ಕೆಳ ಹಂತದ ಅಧಿಕಾರಿಗಳು ಡೈರಿ ಬರೆಯುವುದನ್ನು, ಜಮೀನುಗಳಿಗೆ ಭೇಟಿ ನೀಡುವುದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಖಚಿತಪಡಿಸಿಕೊಳ್ಳಿ. ಕೆಳ ಹಂತದ ಅಧಿಕಾರಿಗಳು ನೀಡುವ ವರದಿ ಆಧರಿಸಿ ಅಗತ್ಯ ಕಂಡ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಸಿಎಂ ಸಲಹೆ ನೀಡಿದರು.
• ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ ಅಧಿಕಾರಿಗಳು ಜನಸಂಪರ್ಕ ನಡೆಸುತ್ತಲೇ ಇರಬೇಕು. ನೀವು ಜನರ ಮಧ್ಯೆ ಇದ್ದು ಕೆಲಸ ಮಾಡಲೇಬೇಕು. ಆಗ ಮಾತ್ರ ಪರಿಣಾಮಕಾರಿ ಕೆಲಸ ಸಾಧ್ಯವಾಗುತ್ತದೆ. ನೀವು ಜನಸಂಪರ್ಕ ಸಭೆ ನಡೆಸದೆ ಕೇವಲ ಸಭೆಗಳಲ್ಲಿ ಬಂದು ನೀವು ಹೇಳಿದ್ದನ್ನು ಕೇಳಿಕೊಂಡು ನಾವು ಹೋಗುವುದಿಲ್ಲ.

ಅಧಿಕಾರಿಯ ಡೈರಿ-ಫೋಟೋ ಕೇಳಿದ ಸಿಎಂ
ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು. ರೈತರ ಸಭೆಗಳನ್ನು ನಡೆಸಬೇಕು. ಇದನ್ನೆಲ್ಲಾ ನೀವು ಮಾಡಿದ್ದೀರಾ ಎಂದು ಸಿಎಂ ಪ್ರಶ್ನಿಸಿದರು. ಈ ವೇಳೆ ಕೃಷಿ ಅಧಿಕಾರಿ ತಾವು ಗ್ರಾಮ ಭೇಟಿ ನೀಡಿದ್ದ ಡೈರಿಯನ್ನು ಸಿಎಂಗೆ ನೀಡಿದರು. ಸಿಎಂ ಡೈರಿ ಪರಿಶೀಲಿಸಿದರು. ಸಮಾಧಾನ ಆಗಲಿಲ್ಲ. ನೀವು ಭೇಟಿ ನೀಡಿದ ಫೋಟೋಗಳನ್ನು ತೋರಿಸಿ ಎಂದರು. ಅಧಿಕಾರಿಗಳು ತಾವು ಭೇಟಿ ನೀಡಿದ್ದ ಫೋಟೋಗಳನ್ನು ಪ್ರದರ್ಶಿಸಿದರು.
ಆದರೂ ಸಮಾಧಾನ ಆಗದ ಮುಖ್ಯಮಂತ್ರಿಗಳು, ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ರೈತರಿಗೆ ಹೆಚ್ಚು ತಿಳಿವಳಿಕೆ ಇದೆಯಾ? ನಿಮಗೆ ಹೆಚ್ಚು ತಿಳಿವಳಿಕೆ ಇದೆಯಾ ಗೊತ್ತಾಯ್ತಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಪ್ರಾಕ್ಟಿಕಲ್ ಆಗಿ ರೈತರು ಬುದ್ದಿವಂತರಿರುತ್ತಾರೆ. ನಾವು ಅವರಿಂದ ಕಲಿಯುತ್ತೀವಿ ಎಂದರು.

ರೇಷ್ಮೆ ಇಲಾಖೆ
• ಒಂದು ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಹೆಚ್ಚು ಬೆಳೆಯುತ್ತಿದ್ದರು. ಬಹಳಷ್ಟು ರೈತರು ಇದರ ಮೇಲೆ ಅವಲಂಭಿತರಾಗಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲ ಏಕೆ ? ರೇಷ್ಮೆ ಬೆಳೆಗಾರರು ಏಕೆ ಕಡಿಮೆ ಆಗಿದ್ದಾರೆ ಎಂದು ಸಿಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಹೌದು ಸಾರ್, ಸಿದ್ದರಾಮನಹುಂಡಿಯಲ್ಲಿ ಕೇವಲ ಇಬ್ಬರು ಮಾತ್ರ ರೇಷ್ಮೆ ಬೆಳೆಯುತ್ತಿದ್ದಾರೆ ಎಂದು ಉತ್ತರಿಸಿದರು. ಈಗ ರೇಷ್ಮೆ ಬೆಳೆ ಪ್ರದೇಶ ವಿಸ್ತರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಪ್ರಶ್ನಿಸಿದರು.
• ಉತ್ತರಿಸಿದ ಅಧಿಕಾರಿ, ನಾವು ಇರುವ ಸಿಬ್ಬಂದಿಯಲ್ಲೇ ೧೦ ಹಳ್ಳಿ ಆಯ್ಕೆ ಮಾಡಿಕೊಂಡು ವಿಸ್ತರಣೆಗೆ ಕೆಲಸ ಮಾಡುತ್ತಿದ್ದೇವೆ. ನಾವೇ ಗೂಡುಗಳನ್ನು ನಿರ್ಮಿಸಿ ಕೊಟ್ಟು, ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ವಿವರಿಸಿದರು. ಈ ವೇಳೆ ಪಶು ಸಂಗೋಪನಾ ಸಚಿವರು, ಸಿಬ್ಬಂದಿ ಕೊರತೆ ಇದೆ ಎನ್ನುವ ಮಾಹಿತಿ ನೀಡಿದರು. ಈ ಮಾತನ್ನು ಒಪ್ಪದ ಸಿಎಂ, ರೇಷ್ಮೆ ಕೃಷಿ ಕುಸಿಯಲು ಇದೊಂದೇ ಕಾರಣ ಅಲ್ಲ. ಬೇರೆ ಬೇರೆ ಕಾರಣಗಳಿವೆ. ಅಧಿಕಾರಿಗಳು ಅವನ್ನೆಲ್ಲಾ ಗುರುತು ಮಾಡಿ ಪರಿಹಾರ ರೂಪಿಸಬೇಕು ಎಂದರು.


ಪಶು ಸಂಗೋಪನಾ ಇಲಾಖೆ

• ಹಳ್ಳಿ ಹಾಲು ಪಟ್ನಕ್ಕೆ ಪಟ್ನದ್ ಸರಾಯಿ ಹಳ್ಳಿಗೆ

ಪಶು ಸಂಗೋಪನಾ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಪಾರ್ಲಿಮೆಂಟಿನಲ್ಲಿ ನಡೆದಿದ್ದ ಚರ್ಚೆಯನ್ನು ಪ್ರಸ್ತಾಪಿಸಿ, ಹಳ್ಳಿ ಜನರು ಉತ್ಪಾದನೆ ಮಾಡುವ ಹಾಲು ಪಟ್ಟಣಗಳಿಗೆ ಹೋಗಿದೆ. ಪಟ್ಟಣದಲ್ಲಿ ತಯಾರಾಗುವ ಸರಾಯಿ ಹಳ್ಳಿಗಳಿಗೆ ಬಂದಿದೆ ಎಂದು ತಿಳಿಸಿದರು.
ಆದ್ದರಿಂದ ಹಸು ಸಾಕಾಣೆಕಾರರು ಮೊದಲು ಹಾಲನ್ನು ತಾವು ಕುಡಿದು, ತಮ್ಮ ಮಕ್ಕಳಿಗೂ ಕುಡಿಸಿ ಹೆಚ್ಚುವರಿ ಹಾಲನ್ನು ಮಾರಾಟ ಮಾಡಬೇಕು. ಆಗ ಮಾತ್ರ ಅವರಿಗೂ ಆರೋಗ್ಯಕರ ಹಾಲು ಸಿಗುತ್ತದೆ ಎಂದರು. ಆದ್ದರಿಂದ ಈ ಬಗ್ಗೆ ರೈತರಲ್ಲಿ, ರೈತರ ಮಕ್ಕಳಲ್ಲಿ ಹಾಲು ಕುಡಿಯಲು ಜಾಗೃತಿ ಮೂಡಿಸಿ ಎಂದರು.

• ಹಾಲಿನ ಉಪ ಉತ್ಪನ್ನಗಳನ್ನು ಹೆಚ್ಚೆಚ್ಚು ಉತ್ಪಾದಿಸಬೇಕು. ಹಾಲು ಒಕ್ಕೂಟಗಳಲ್ಲಿ ಅನಗತ್ಯ ಹೆಚ್ಚುವರಿ ಸಿಬ್ಬಂದಿಯನ್ನು ತೆಗೆದು ಹಾಕಬೇಕು. ಹಾಲು ಮತ್ತು ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಹೆಚ್ಚೆಚ್ಚು ವಿಸ್ತರಿಸುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಪ್ರೋಟೀನ್ ಪೌಡರ್ ಗೆ ಮಾರುಕಟ್ಟೆಗೆ ಬೇಡಿಕೆ ಇದೆ. ಇದರ ಉತ್ಪಾದನೆ ಮತ್ತು ಮಾರಾಟದ ಕಡೆ ಗಮನ ಕೊಡಿ ಎಂದರು.
• ಕುರಿ ಮತ್ತು ಕೋಳಿ ಸಾಕಾಣಿಕೆಗೆ ಸಬ್ಸಿಡಿ ಸವಲತ್ತನ್ನು ಹೆಚ್ಚೆಚ್ಚು ಮಂದಿಗೆ ವಿಸ್ತರಿಸಲು ಸೂಚಿಸಿದರು.

ಮೀನುಗಾರಿಕಾ ಇಲಾಖೆ:
• ರಾಜ್ಯದಲ್ಲಿ ಎಷ್ಟು ಮಂದಿ ಮತ್ತು ಎಷ್ಟು ಕುಟುಂಬಗಳು ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿವೆ ಎನ್ನುವ ಮಾಹಿತಿ ನಿಮ್ಮಲ್ಲಿ ಇದೆಯೇ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳು ಪ್ರಶ್ನಿಸಿ, ಅವರೆಲ್ಲರಿಗೂ ಸರ್ಕಾರದ ಕಾರ್ಯಕ್ರಮಗಳು ಗೊತ್ತಿದೆಯಾ? ಎಲ್ಲರಿಗೂ ಸರ್ಕಾರದ ಸವಲತ್ತುಗಳು ತಲುಪುತ್ತಿದೆಯಾ ಎಂದು ಸಿ.ಎಂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು 25988 ಮಂದಿ , 11314 ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಭಿಸಿ ಬದುಕಿದ್ದಾರೆ. ಎಲ್ಲರಿಗೂ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ತಲುಪಿಸಲಾಗುತ್ತಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
• ಅನ್ನಭಾಗ್ಯ ಯೋಜನೆ ಎಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುತ್ತಿದೆ, ಬಿಪಿಎಲ್ ಪಡಿತರ ಚೀಟಿಗಳು, ನಕಲಿ ಪಡಿತರ ಚೀಟಿಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ನೀವು ಜನರ ಬಳಿಗೆ ಹೋದಾಗ ಜನ ಅಕ್ಕಿ ಬೇಕು ಅಂತಿದ್ದಾರೋ, ಹಣ ಬೇಕು ಅಂತಿದ್ದಾರೋ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗೆ ಹಣ ಹೋಗುವುದನ್ನು ಹೆಚ್ಚಿನ ಜನರು ಬಯಸುತ್ತಿದ್ದಾರೆ. ಹೀಗಾಗಿ ಡಿಬಿಟಿ ಮೂಲಕ ಮುಂದುವರೆಸುವುದು ಉತ್ತಮ. ಹಾಗೆಯೇ ಡಿಬಿಟಿ ಯೋಜನೆಯಿಂದಾಗಿ ಕಾಳ ಸಂತೆಯನ್ನು ಅಕ್ಕಿ ಮಾರಿಕೊಳ್ಳುವ ಪ್ರಸಂಗಗಳಿಗೂ ಬ್ರೇಕ್ ಬೀಳುತ್ತದೆ. ಹಣ ಕೈಗೆ ಸಿಕ್ಕರೆ ಇತರೆ ಪದಾರ್ಥ, ಔಷಧಿಗೆ ಆ ಹಣವನ್ನು ಬಳಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಹೆಚ್ಚಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

• ಬಡವರಿಗೆ, ನಿಜವಾದ ಅರ್ಹರಿಗೆ ಅನುಕೂಲ ಆಗುವ ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳು, ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹರು ಯೋಜನೆಯ ದುರುಪಯೋಗ ಪಡೆಯದಂತೆ, ಅರ್ಹರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಖಡಕ್ಕಾಗಿ ಸೂಚನೆ ನೀಡಿದರು.
• ಅಂಗನವಾಡಿಗಳಿಗೆ ಸೂಕ್ತ ಗುಣಮಟ್ಟದ ಆಹಾರಗಳು ತಲುಪುತ್ತಿದೆಯೇ , ಆಹಾರದ ಗುಣಮಟ್ಟದ ಬಗ್ಗೆ ನಿಯಮಿತವಾಗಿ ಪರೀಕ್ಷೆ ಮಾಡಲಾಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
• ಸರ್ಕಾರ ಅಂಗನವಾಡಿ ಮಕ್ಕಳಿಗಾಗಿ ಮೊಟ್ಟೆ, ಹಾಲು, ಹಣ್ಣು, ಚಿಕ್ಕಿ, ಊಟ ಎಲ್ಲಾ ಕೊಡುತ್ತಿದ್ದೇವೆ. ಹಾಸ್ಟೆಲ್ ಮಕ್ಕಳಿಗೂ ಪೌಷ್ಠಿಕ ಆಹಾರವನ್ನು ಪೂರೈಸಲಾಗುತ್ತಿದೆ. ಹೀಗಿದ್ದೂ ರಾಜ್ಯದಲ್ಲಿ ಅಪೌಷ್ಠಿಕತೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಕಡಿಮೆ ಆಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ನಿಗಾ ವಹಿಸಬೇಕು, ನಾವು ಪೌಷ್ಠಿಕ ಆಹಾರ ವಿತರಣೆ ಮಾಡಿದಷ್ಟೂ ರಾಜ್ಯದ ಅಪೌಷ್ಠಿಕತೆ ಪ್ರಮಾಣ ಕಡಿಮೆ ಆಗುವಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
• ಅಂಗನವಾಡಿ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು. ತಪಾಸಣೆ ವೇಳೆ ಕಂಡು ಬಂದ ಮಾಹಿತಿಯಂತೆ ಅಪೌಷ್ಠಿಕತೆ ಕಡಿಮೆ ಮಾಡಲು ಅಗತ್ಯವಾದ ಪ್ರೋಟೀನ್ ಮತ್ತು ವಿಟಮಿನ್ ಗಳನ್ನು ಸರಬರಾಜು ಮಾಡಬೇಕು ಎನ್ನುವ ಸೂಚನೆ ನೀಡಿದರು.
• ಜಿಲ್ಲೆಯಲ್ಲಿರುವ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅಂಗನವಾಡಿಗಳಿಗೆ ವಿದ್ಯುತ್ ಫ್ರೀ ಬಗ್ಗೆ ಪರಿಶೀಲನೆ
ರಾಜ್ಯ ಸರ್ಕಾರ ಶಾಲೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಅದೇ ರೀತಿ ಅಂಗನವಾಡಿಗಳಿಗೂ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರ್ನಾಥ್ ಅವರು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು.
ಈ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಇಡೀ ರಾಜ್ಯದಲ್ಲಿ ಎಷ್ಟು ಅಂಗನವಾಡಿಗಳಿವೆ, ಎಷ್ಟು ವೆಚ್ಚ ತಗುಲುತ್ತಿದೆ ಎನ್ನುವ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ವರದಿ ಬಳಿಕ ಪರಿಶೀಲಿಸುವುದಾಗಿ ಭರವಸೆ ನೀಡಿದರು.


ಈರುಳ್ಳಿ ಬಜ್ಜಿ ಇಲ್ವಾ, ಇದ್ರೆ ಕೊಡು
ಸುದೀರ್ಘ ಸಭೆ ಸಂಜೆ ೫:೩೦ ಆದರೂ ಮುಂದುವರೆದಿತ್ತು. ಈ ವೇಳೆ ಮೆಣಸಿನ ಕಾಯಿ ಬಜ್ಜಿಯನ್ನು ಸಂಜೆಯ ತಿಂಡಿಗಾಗಿ ವಿತರಿಸಲಾಯಿತು. ತಮಗೆ ಮೆಣಸಿನಕಾಯಿ ಬಜ್ಜಿ ನೀಡಲು ಬಂದವರಿಗೆ ಮುಖ್ಯಮಂತ್ರಿಗಳು, “ಏಯ್ ಈರುಳ್ಳಿ ಬಜ್ಜಿ ಇಲ್ವಾ ಎಂದು ಕೇಳಿ, ಇದ್ದರೆ ಕೊಡು ಎಂದರು. ಆಮೇಲೆ ಮೆಣಸಿನಕಾಯಿ ಬಜ್ಜಿಯನ್ನೂ ಬಾಯಿಗೆ ಹಾಕಿ ಸವಿದರು.

ಸಾರಿಗೆ ಇಲಾಖೆ
• ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್ ಗಳ ವ್ಯವಸ್ಥೆಯನ್ನು ಸೂಕ್ತವಾಗಿ ಕಲ್ಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
• ಶಾಲೆಗಳಿಗೆ ಹೋಗುವ ಗ್ರಾಮೀಣ ಭಾಗದ ಮಕ್ಕಳಿಗೆ ಮತ್ತು ಶಿಕ್ಷಕಿಯರಿಗೆ ತೊಂದರೆ ಆಗದಂತೆ ಬಸ್ ಗಳ ಸವಲತ್ತುಗಳನ್ನು ಕಲ್ಪಿಸಲು ಸಿಎಂ ಸೂಚಿಸಿದರು.

ಇಂಧನ ಇಲಾಖೆ
• ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಅಗತ್ಯ ಇರುವಷ್ಟು ೬೬/೧೧ ಕೆವಿ ಪವರ್ ಸ್ಟೇಷನ್ ಗಳನ್ನು ಆರಂಭಿಸಲು ಸಿಎಂ ಸೂಚಿಸಿದರು.
ಯುವ ನಿಧಿ
• ಯುವ ನಿಧಿ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳಲ್ಲಿ ತೊಡಗಿಸಬೇಕು. ಅವರ ಕೌಶಲ್ಯ ಅಭಿವೃದ್ಧಿಯಾಗಿ ಉದ್ಯೋಗ ಸಿಗುವಂತಾಗಬೇಕು. ಈ ಬಗ್ಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಿಗಾ ವಹಿಸಬೇಕು ಎಂದು ಸಿಎಂ ಸೂಚಿಸಿದರು.

• ಮೈಸೂರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ, ಅರೆ ಬರೆ ಕೆಲಸಗಳಾಗಿರುವ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಹಾಗೂ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಆಧ್ಯತೆಗಳ ಮೇಲೆ ಮುಗಿಸಬೇಕು. ಕ್ಯಾಬಿನೆಟ್ನಲ್ಲಿ ಒಪ್ಪಿಗೆ ದೊರೆತಿರುವ ಯೋಜನೆಗಳ ಟೆಂಡರ್ ಅವಧಿ ಮುಗಿಯುತ್ತಿದ್ದಂತೆ ಕ್ಷಿಪ್ರವಾಗಿ ಪ್ರಕ್ರಿಯೆ ತೀವ್ರಗೊಳಿಸುವಂತೆ ಸೂಚಿಸಿದರು.
• ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿರುವ ರಸ್ತೆ ಗುಂಡಿಗಳನ್ನು ಮೊದಲು ಸಮರ್ಪಕವಾಗಿ ಮುಚ್ಚಬೇಕು. ಮಳೆ ನಿಲ್ಲುತ್ತಿದ್ದಂತೆ ಹೊಸ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು. ವರುಣ, ನಂಜನಗೂಡು ವಿಧಾನಸಭಾ ಕ್ಷೇತ್ರಗಳನ್ನು ಹಾದು ಹೋಗುವ ಹೆದ್ದಾರಿಯ ಕಾಮಗಾರಿಯ ಸ್ಥಿತಿ ಗತಿಯ ಮಾಹಿತಿ ಪಡೆದರು.
• ಮುಖ್ಯಮಂತ್ರಿಗಳ ಜನಸ್ಪಂದನೆ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಮನವಿಗಳಲ್ಲಿ ಎಲ್ಲಾ ಅರ್ಹ ಮನವಿಗಳ ಕೆಲಸಗಳನ್ನು ಪೂರೈಸಿ, ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
• ಬಾಕಿ ಇದ್ದ ೩೫ ಸಾವಿರದಷ್ಟು ಪ್ರಕರಣಗಳನ್ನು ಅಭಿಯಾನ ಸ್ವರೂಪದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಸದ್ಯ ೮೦೦ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.
• ಮೈಸೂರು ಹಳೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮೈಸೂರಿನ ಚರಿತ್ರೆ ಮತ್ತು ಇತಿಹಾಸ ಸಾರುವ ಮ್ಯೂಸಿಯಂ ಆಗಿ ಮಾರ್ಪಡಿಸಿ, ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
• ಮೈಸೂರು ರಿಂಗ್ ರಸ್ತೆಯಲ್ಲಿನ ಬೀದಿ ದೀಪಗಳ ಸಮಸ್ಯೆಗಳನ್ನು ತುರ್ತಾಗಿ ತಕ್ಷಣವೇ ಸರಿಯಾಗಿ ದುರಸ್ತಿಪಡಿಸಿ ಎಂದು ಖಡಕ್ ಸೂಚನೆ ನೀಡಿದ ಮುಖ್ಯಮಂತ್ರಿಗಳು, ರಿಂಗ್ ರಸ್ತೆಯ ಸುತ್ತ ಸರ್ವೀಸ್ ರಸ್ತೆಯನ್ನು ನಿರ್ಮಿಸದಿರುವುದಕ್ಕೆ ಸಿಎಂ ವಿಪರೀತ ಗರಂ ಆದರು. ಇದುವರೆಗೂ ಸರ್ವೀಸ್ ರಸ್ತೆ ಏಕೆ ಮಾಡಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
• ಸರ್ವೀಸ್ ರಸ್ತೆಯನ್ನು ನಿರ್ಮಿಸಲು ಲಿಟಿಗೇಷನ್ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಕ್ಸಿಕ್ಯುಟೀವ್ ಎಂಜಿನಿಯರ್ ತಿಳಿಸಿದರು. ಇದಕ್ಕೆ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರು, ಯಾವ ಲಿಟಿಗೇಷನ್ ಕೂಡ ಇಲ್ಲ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗಲೇ ಎಲ್ಲವನ್ನೂ ಬಗೆ ಹರಿಸಲಾಗಿದೆ. ಮೊದಲು ಕೆಲಸ ಪ್ರಾರಂಭಿಸಿ ಎಂದು ತಾಕೀತು ಮಾಡಿದರು.
• ಮುಂದಿನ ನಾಲ್ಕೈದು ದಿನಗಳ ಒಳಗೆ ಮೈಸೂರು ನಗರದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಬೇಕು. ಹಗಲು ರಾತ್ರಿ ಶ್ರಮ ಹಾಕಿ ಗುಂಡಿಗಳನ್ನು ಮುಚ್ಚಿ ಎಂದು ಸೂಚಿಸಿದರು.
• ೨೧೨ ಮಂದಿ ಯುಜಿಡಿ ಪೌರ ಕಾರ್ಮಿಕರ ಸಮಾನ ಕೆಲಸ-ಸಮಾನ ವೇತನ ಜಾರಿಗೊಳಿಸುವಂತೆ ಮೂರು ವರ್ಷಗಳಿಂದ ಬೇಡಿಕೆ ಇದೆ. ಇತರೆ ಪೌರ ಕಾರ್ಮಿಕರಿಗೆ ನೀಡಿರುವ ಸವಲತ್ತುಗಳನ್ನೇ ತಮಗೂ ನೀಡಬೇಕು ಎನ್ನುವ ಬೇಡಿಕೆ ಅವರದ್ದಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇವರ ಸಮಸ್ಯೆ ಬಗೆಹರಿಸಿ, ಬೇಡಿಕೆ ಈಡೇರಿಸುವ ದಿಕ್ಕಿನಲ್ಲಿ ಕ್ರಮ ವಹಿಸೋಣ ಎಂದು ಸಿಎಂ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
• ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನೂರಾರು ಕೋಟಿ ಅನುದಾನ ಬಂದಿದೆ. ಕೆಲಸಗಳು ಯಾವ ಹಂತದಲ್ಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
• ಗ್ರೇಸ್ ಮಾರ್ಕ್ಸ್ ಇಲ್ಲದೆ ಎಸ್ಎಸ್ಎಲ್ಸಿ ಯಲ್ಲಿ ಉತ್ತಮ ಫಲಿತಾಂಶ ತರುವ ದಿಕ್ಕಿನಲ್ಲಿ ಎಲ್ಲಾ ಬಿಇಒ ಗಳ ಜೊತೆ ಸಭೆ ನಡೆಸಬೇಕು. ಸ್ಪೆಷಲ್ ಕೋಚಿಂಗ್ ಕೊಟ್ಟು ಹಿಂದುಳಿದಿರುವ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಸರಣಿ ಪರೀಕ್ಷೆಗಳು ಸೇರಿದಂತೆ ಹಲವು ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಗ್ರೇಸ್ ಮಾರ್ಕ್ಸ್ ಇಲ್ಲದೆ ಫಲಿತಾಂಶದ ಪ್ರಮಾಣ ಹೆಚ್ಚುವಂತೆ ಕೆಲಸ ಮಾಡಿ ಡಿಡಿಪಿಐ ಗೆ ಸಿಎಂ ಸೂಚಿಸಿದರು.


ನಗೆಪಾಟಲಿಗೆ ಈಡಾದ ಡಿಡಿಪಿಐ
ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡದೆ ಡಿಡಿಪಿಐ ವಿಪರೀತ ನಗೆಪಾಟಲಿಗೆ ಈಡಾದರು. ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆಯೇ ಎಂದು ಸಿಎಂ ಕೇಳಿದ ಪ್ರಶ್ನೆಗೆ ಹೂಂ ಸಾರ್-ಇಲ್ಲ ಸಾರ್ ಎಂದು ಉತ್ತರಿಸಿದರು. ನಿಮ್ಮ ಮಾತನ್ನು ಖಾಸಗಿ ಶಾಲೆಗಳವರು ಕೇಳುತ್ತಾರೆಯೇ ಎಂದು ಕೇಳಿದ ಪ್ರಶ್ನೆಗೆ ಇಲ್ಲ ಸಾರ್ ಎಂದು ಡಿಡಿಪಿಐ ಉತ್ತರಿಸಿದ್ದಕ್ಕೆ ಇಡೀ ಸಭೆ ನಗೆಗಡಲಲ್ಲಿ ತೇಲಿತು. ಯಾವುದಾದರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೀರಾ ಎಂದು ಸಿಎಂ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಡಿಡಿಪಿಐ ತಡಬಡಾಯಿಸಿದರು. ಆಗ ಮುಖ್ಯಮಂತ್ರಿಗಳೇ ಯಾವುದೇ ಒಂದು ಸ್ಕೂಲ್ ಹೆಸರು ಹೇಳಪ್ಪಾ ಹೋಗ್ಲಿ ಎಂದರು. ಆಗಲೂ ಸಭೆ ನಗೆಗಡಲಲ್ಲಿ ತೇಲಿತು. ಬೇಸತ್ತ ಮುಖ್ಯಮಂತ್ರಿಗಳು ನೀವು ಕಷ್ಟಪಟ್ಟು ಓದಿದ್ದೀರಾ ಎಂದು ಕೇಳಿದರೆ, ಇಲ್ಲ ಸಾರ್ ಎನ್ನುವ ಉತ್ತರ ಡಿಡಿಪಿಐ ಅವರಿಂದ ಬಂತು. ಆಗಲೂ ಸಭೆ ನಗೆ ಗಡಲಲ್ಲಿ ತೇಲಿತು.
ಕೊನೆಗೆ ಓಂದು ವಾರದಲ್ಲಿ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಖಡಕ್ ಆಗಿ ಡಿಸಿಪಿಐಗೆ ಸಿಎಂ ಸೂಚನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button