Belagavi NewsBelgaum News

*ಪ್ರತಿಭಟಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ನೇಕಾರರು*

ಪ್ರಗತಿವಾಹಿನಿ ಸುದ್ದಿ: ವೃತ್ತಿಪರ ನೇಕಾರರ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಮತ್ತು ವಿದ್ಯುತ್ ಚಾಲಿತ ಮಗ್ಗದ ನೇಕಾರರ ಬಾಕಿ ವಿದ್ಯುತ್ ಬಿಲ್ ಸಂಬಂಧಿತ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಒತ್ತಾಯಿಸಿ ನೇಕಾರರ ಆತ್ಮಹತ್ಯೆಯನ್ನು ನಿರ್ಲಕ್ಷಿಸುತ್ತಿರುವುದನ್ನು ಖಂಡಿಸಿ ನೇಕಾರರು ಪ್ರತಿಭಟಿಸಿದರು.‌

ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೂಡ ವೃತ್ತಿಪರ ನೇಕಾರರನ್ನು ನಿರ್ಲಕ್ಷಿಸುತ್ತಾರೆ. ಈಗಲೂ ಕೂಡ ಜವಳಿ ಸಚಿವರು ನೇಕಾರರ ಪಾಲಿಗೆ ಇದ್ದು ಇಲ್ಲದಂತಾಗಿದ್ದಾರೆ. ನೇಕಾರರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಹಾಗೂ ರಾಜಕೀಯವಾಗಿ ಸಾಕಷ್ಟು ಹಿಂದುಳಿದವರಾಗಿದ್ದಾರೆ. ಇವರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಿಸಿಕೊಂಡು ಮೂಗಿಗೆ ತುಪ್ಪ ಸವರುವ ಕೆಲಸವಾಗುತ್ತಿದೆ. ಆದ್ದರಿಂದ, ಸತತ ಬಿದಿಗೆ ಇಳಿದು ಹೋರಾಟ ಮಾಡುತ್ತಿರುವ ನಮಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಶಾಶ್ವತ ಪರಿಹಾರಕ್ಕಾಗಿ ನಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಬೇಕು. ಇಲ್ಲವಾದರೇ ಬೃಹತ್ ಹೋರಾಟದ ಮೂಲಕ ಬೆಂಗಳೂರು ಚಲೋ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ಕಳೆದ ಏಪ್ರೀಲ್ 1 ರಿಂದ ಹೆಚ್ಚುವರಿಯಾಗಿರುವ ವಿದ್ಯುತ್ ಬಾಕಿ ಬಿಲ್ ಕೆಲವರು ತುಂಬಲು ಆಗದೇ ಇರುವ ಕಾರಣ ಸರ್ಕಾರವೇ ಭರಿಸಿಕೊಳ್ಳಬೇಕು. ಇಲ್ಲವಾದರೆ ಕೇವಲ ಯಾವುದೇ ಚಾರ್ಜ್ ಗಳನ್ನು ವಿಧಿಸದೇ ಪ್ರತಿ ಯೂನಿಟ್‌ಗೆ 1.25 ಪೈಸೆಯಂತೆ ಕಂತುಗಳ ಮೂಲಕ ಬಾಕಿ ಬಿಲ್‌ನ್ನು ಭರಿಸಿಕೊಳ್ಳಬೇಕು. ಸರ್ಕಾರದ ವಿಳಂಬ ನೀತಿಯಿಂದ ಈ ಸಮಸ್ಯೆಗೆ ಸರ್ಕಾರವೇ ಹೊಣೆ ಹೊತ್ತುಕೊಳ್ಳಬೇಕು.

ರಾಜ್ಯದ ಕೆ.ಹೆಚ್.ಡಿ.ಸಿ. ನಿಗಮದಲ್ಲಿ ನೂರಾರು ಕೋಟಿ ರೂಪಾಯಿಗಳ ಅವ್ಯವಹಾರವಾಗಿದ್ದು ಅದನ್ನು ತನಿಖೆ ತೀವ್ರಗೊಳಿಸಿ ತಪ್ಪಿತಸ್ತಿರಿಗೆ ಶಿಕ್ಷೆಗೆ ಗುರಿಪಡಿಸಬೇಕು. ಕಳಪೆ ಬಟ್ಟೆ ಪೂರೈಸಿ ನಡೆದಿರುವ ಈ ಅವ್ಯವಹಾರ ಹಣವನ್ನು ನಿಗಮಕ್ಕೆ ಮರಳಿ ವಸೂಲಾತಿ ಮಾಡಬೇಕು. ಮತ್ತು ನಿಗಮದಲ್ಲಿ ಅನೇಕ ವರ್ಷಗಳಿಂದ ನೇಕಾರಿಕೆ ಮಾಡುತ್ತಿರುವ ನೇಕಾರರಿಗೆ ನಿವೇಶನಗಳು ಇಲ್ಲ, ನಿವೇಶನಗಳು ಇದ್ದವರಿಗೆ ಸಿ.ಟಿ.ಎಸ್.ಉತಾರಗಳಿಲ್ಲ ಇದರಿಂದಾಗಿ ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಪ್ರಾರಂಭದಲ್ಲಿ 48 ಸಾವಿರ ನೇಕಾರರು ಇದ್ದವರು ಈಗ ಕೇವಲ 4 ಸಾವಿರ ಮಾತ್ರ ನೇಕಾರರು ಉಳಿದಿದ್ದಾರೆ. ನಿಗಮವು ಕೂಡ ನೂರಾರು ಕೋಟಿ ರೂಪಾಯಿಗಳ ಸಾಲದಲ್ಲಿ ನಡೆಯುತ್ತಿದೆ. ಇದನ್ನು ಸರಿಪಡಿಸಿ ಸರ್ಕಾರ ನಿಗಮವನ್ನು ಪುನಶ್ವೇತನಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button