Belagavi NewsBelgaum News

*ಹಬ್ಬಗಳ‌ ಆಚರಣೆಗಳಿಂದಲೇ ಭಾರತ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಇಡೀ ವಿಶ್ವವೇ ಭಾರತೀಯ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದೆ

ಪ್ರಗತಿವಾಹಿನಿ ಸುದ್ದಿ: ಭಾರತ ಹಳ್ಳಿಗಳ ದೇಶ, ಹಬ್ಬಗಳ ದೇಶ.‌ ವಿಶೇಷ ಹಬ್ಬಗಳ ಆಚರಣೆಗಳಿಂದ ಇಡೀ ವಿಶ್ವವೇ ಇಂದು ನಮ್ಮನ್ನು ಗುರುತಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೂಡಲಗಿ ತಾಲೂಕಿನ ಕಲ್ಲೋಳಿಯಲ್ಲಿ 41ನೇ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದ ಸಚಿವರು, ಭಾರತದಲ್ಲಿ ಎಲ್ಲಾ ಸಮುದಾಯಗಳು ಸೇರಿ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ನಮ್ಮ ಹಬ್ಬಗಳ ವೈಶಿಷ್ಟ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ರಾಜ್ಯದ ಅತಿದೊಡ್ಡ ಹಬ್ಬ ನವರಾತ್ರಿ. ಇದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ನಮ್ಮದು ಸಾಂಸ್ಕೃತಿಕವಾಗಿ ಶ್ರೀಮಂತ ದೇಶವಾಗಿರುವುದರಿಂದ ಇಡೀ ವಿಶ್ವವೇ ಭಾರತವನ್ನು ಅನುಕರಣೆ ಮಾಡುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಾವುಗಳು ಎಲ್ಲಾ ವಸ್ತುಗಳಲ್ಲಿ, ಸಂಬಂಧಗಳಲ್ಲಿ ದೇವರನ್ನು ಕಾಣುತ್ತೇವೆ. ಹಿರಿಯರಲ್ಲಿ, ಮಕ್ಕಳಲ್ಲಿ, ಮುತ್ತೈದೆಯರಲ್ಲಿ ದೇವರನ್ನು ಕಾಣುತ್ತೇವೆ. ನಮ್ಮ ಸಂಸ್ಕೃತಿ ಉಳಿಸಿ, ಬೆಳೆಸುವುದು ಪ್ರತಿ ಮನೆಯ ಗೃಹಿಣಿ, ನಮ್ಮ ಸಂಸ್ಕೃತಿಯ ರಾಯಭಾರಿಗಳು ಗೃಹಿಣಿಯರು ಎಂದು ಸಚಿವರು ಹೇಳಿದರು. ‌

ಕಲ್ಲೋಳಿಯಲ್ಲಿ ಅತ್ಯಂತ ಪೂಜ್ಯ ಭಾವನೆಯಿಂದ ಘಟ್ಟ ಸ್ಥಾಪನೆ ಮಾಡಲಾಗಿದೆ. ಇದನ್ನು ನೋಡಿ ಮೈಸೂರು ದಸರಾ ನೋಡಿದಷ್ಟೇ ಖುಷಿ‌ ಆಗಿದೆ. ದುಷ್ಟರನ್ನು ಸಂಹಾರ ಮಾಡಿ, ಶಿಷ್ಠರನ್ನು ರಕ್ಷಣೆ ಮಾಡುವುದೇ ನವರಾತ್ರಿ ಹಬ್ಬದ ಸಂಕೇತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಆ ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದು ಖಂಡಿತವಾಗಿಯೂ ಈಡೇರುತ್ತದೆ. ನಮ್ಮಲ್ಲಿರುವ ಕೆಟ್ಟ ಭಾವನೆಗಳನ್ನು ಹೊರ ಹಾಕಬೇಕು. ದೇಶದ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಸಚಿವರು ಕರೆ ನೀಡಿದರು.

ಈ ವರ್ಷ ಉತ್ತಮ ಮಳೆಯಾಗಿದ್ದು, ಉತ್ತಮ ಬೇಳೆಯನ್ನು ನಿರೀಕ್ಷಿಸಲಾಗಿದೆ. ಕುಡಿಯುವ ನೀರಿನ ಕೊರತೆ ಆಗುವುದಿಲ್ಲ. ಎಲ್ಲರಿಗೂ ದೇವರು ಉತ್ತಮ ಆರೋಗ್ಯ ಆಯುಷ್ಯ ವನ್ನು ಕರುಣಿಸಲಿ. ರಾಜ್ಯ ಸಮೃದ್ಧಿ ಯಿಂದ ತುಂಬಿ ತುಳುಕಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾರೈಸಿದರು.

ಗಣ್ಯರಿಂದ ಪುರ್ಷ್ಪಾಚನೆ
ಬಂಡಿಗಣಿಯ ಬಸವಗೋಪಾಲ ನೀಲ ಮಾಣಿಕ್ಯ ಮಠದ ದಾಸೋಹ ರತ್ನ ಅನ್ನದಾನೇಶ್ವರರು, ಬಬಲಾದಿಯ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಅರಿಕೇರಿಯ ಅಮೋಘಸಿದ್ಧ ಪೀಠಿದ ಅವದೂತ ಮಹಾರಾಜರು, ಹುಳ್ಯಾಳದ ಜಯಶ್ರೀ ಅಮ್ಮನ್ನವರು, ಸುಕ್ಷೇತ್ರ ಭೂಕೈಲಾಸ ಮಾಲಿಂಗರಾಯ ಮಹಾರಾಜರು, ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಡಾ. ಮಹಾಂತೇಶ ಕಡಾಡಿ, ನವರಾತ್ರಿ ಉತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರಾವಸಾಹೇಬ್ ಬೆಳಕೂಡ ಹಾಗೂ ಮತ್ತಿತರರು ಸೇರಿದಂತೆ ಆನೆಯ ಅಂಬಾರಿ ಮೇಲೆ ಉತ್ಸವ ಮೂರ್ತಿಗೆ ಮತ್ತು ನವರಾತ್ರಿ ಪ್ರತಿಷ್ಠಾಪನೆ ದುರ್ಗಾದೇವಿ ಮೂರ್ತಿಗೆ ಪುಪ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ನಡೆಸಲಾಯಿತು.

ಗಮನಸೆಳೆದ ಅದ್ದೂರಿ ಮೆರವಣಿಗೆ
ನವರಾತ್ರಿಯ ದುರ್ಗಾದೇವಿ ಮೂರ್ತಿಯ ಮೆರವಣಿಗೆಯಲ್ಲಿ ಜಂಬೂ ಸವಾರಿಯಲ್ಲಿ ಮಹಿಳೆಯರ ಕುಂಭಮೇಳದೊಂದಿಗೆ ಡೊಳ್ಳು, ಸಂಬಾಳ, ಕರಡಿ ಮೇಳ, ಜಾಂಜಪಥಕ ಸೇರಿದಂತೆ ಹಲವಾರು ಸಂಪ್ರದಾಯಿಕ ವಾದ್ಯಗಳು ದುರ್ಗಾದೇವಿ ವೈಭವದ ಉತ್ಸವಕ್ಕೆ ಮೆರಗು ನೀಡಿದವು.

ಈ ಸಂದರ್ಭದಲ್ಲಿ ಮುಖಂಡರಾದ ಲಕ್ಕಣ್ಣ ಸವಸುದ್ದಿ, ಬಸವರಾಜ ಬೆಳಕೂಡ, ಬಸವರಾಜ ಕಡಾಡಿ, ರಾಮಪ್ಪ ಬೆಳಕೂಡ, ಉಮೇಶ ಬಿ.ಪಾಟೀಲ, ಸಿದ್ದಪ್ಪ ಮುಗಳಿ, ಗಿರಿಮಲ್ಲಪ್ಪ ಸವಸುದ್ದಿ, ಭೀಮರಾಯ ಕಡಾಡಿ, ಶಿವಪ್ಪ ಜಗದಾಳ, ಪರಪ್ಪ ಮಟಗಾರ, ಶಂಕರ ಗೋಶಿ, ಭೀಮಶಪ್ಪ ಖಾನಾಪೂರ, ಪಂಚಾಕ್ಷರಿ ಹೆಬ್ಬಾಳ, ಹಣಮಂತ ಸಂಗಟ, ಭಗವಂತ ಪತ್ತಾರ, ಧರೆಪ್ಪ ಖಾನಗೌಡ್ರ, ನವರಾತ್ರಿ ಉತ್ಸವ ಕಮಿಟಿಯ ಸದಸ್ಯರು,ದೇವಸ್ಥಾನದ ಅರ್ಚಕರು ಹಾಗೂ ಕಮಿಟಿಯ ಸದಸ್ಯರು, ಕಲ್ಲೋಳಿ ಪಟ್ಟಣದ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮೇರವಣಿಗೆಯಲ್ಲಿ ಭಾಗವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button