Politics

*ಭಯ ಪಡೋಕೆ ಸಿಎಂ ಏನಾದರೂ ದೆವ್ವನಾ? ಹೆಚ್.ಡಿ.ಕೆ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಯಾರನ್ನು ಕಂಡರೆ ಯಾರಿಗೆ ಭಯ? ನಾನು ಭಯ ಪಡೋಕೆ ಸಿಎಂ ಏನಾದರೂ ದೆವ್ವವೇ? ಅವರೇನು ದೆವ್ವ ಅಲ್ಲವಲ್ಲಾ, ಅವರಂದ್ರೆ ನಾನು ಯಾಕೆ ಭಯಪಡಲಿ. ಇಷ್ಟಕ್ಕೂ ನಾನು ದೆವ್ವಕ್ಕೂ ಹೆದರಲ್ಲ, ಇದು ಸಿದ್ದರಾಮಯ್ಯಗೆ ಗೊತ್ತಿರಲಿ ಎಂದರು ಅವರು.

ಜೆಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ‌ಹೆದರಿಸೋಕೆ ಯಾರಿಂದಲೂ ಆಗಲ್ಲ. ನಾನು ಯಾರಿಗೂ ಹೆದರಲ್ಲ. ಹೆದರೋದು ದೇವರಿಗೆ ಮತ್ತು ನಾಡಿನ ಜನರಿಗಷ್ಟೇ. ಸಿದ್ದರಾಮಯ್ಯನಂಥವರು ಲಕ್ಷ ಜನ ಬರಲಿ, ನಾನು ಹೆದರಲ್ಲ. ಹೆದರೋದು ನನ್ನ‌ ಬೆಳೆಸಿರುವ ನಾಡಿನ‌ ಜನಕ್ಕೆ. ಇಂತಹ ಸಿದ್ದರಾಮಯ್ಯಗೆ ನಾನು ಹೆದರುತ್ತೀನಾ? ಎಂದು ಸಚಿವರು ತಿರುಗೇಟು ನೀಡಿದರು.

ನಾನು ರಾಜಕೀಯದಲ್ಲಿ ಸಿದ್ದರಾಮಯ್ಯ ನೆರಳಲ್ಲಿ ಬಂದಿದ್ದೀನಾ? ಸ್ವತಃ ದುಡಿಮೆ ಮೇಲೆ‌, ಕಾರ್ಯಕರ್ತರು, ಜನರ ಆಶೀರ್ವಾದದಿಂದ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಸ್ವತಃ ದುಡಿಮೆ ಮೇಲೆ ಬಂದಿದ್ದೇನೆ. ಹಾಗೆ ನೋಡಿದರೆ ಸಿಎಂ ಸಿದ್ದರಾಮಯ್ಯನವರು ನನ್ನ ಪಕ್ಷದ ಕಾರ್ಯಕರ್ತರು ಮತ್ತು ದೇವೇಗೌಡರ ನೆರಳಿನಲ್ಲಿ ಬಂದವರು. ನನ್ನ‌ ಹೆದರಿಸುವುದಕ್ಕೆ ಆಗುತ್ತಾ? ಎಂದು ಕಿಡಿಕಾರಿದರು

ಅದು ಯಾವುದೋ ಕೇಸ್ ಹಾಕಿಕೊಂಡು ನನ್ನ ಹೆದರಿಸೋಕೆ ಆಗುತ್ತಾ? ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಗೆ ಬಂಧನದ ಭೀತಿ ಹೇಳುತ್ತಿದ್ದಾರೆ. ನನಗೆ ಅಂತಹ ಯಾವುದೇ ಭೀತಿಯೋ ಇಲ್ಲ” ಎಂದರು ಅವರು.

ನನ್ನ ಹತ್ತಿರ ಇವರದ್ದು ಏನು ನಡೆಯಲ್ಲ:

ಐದು ವರ್ಷಗಳ ಕಾಲ ಸಿಎಂ ಆಗಿ‌ ಸಿದ್ದರಾಮಯ್ಯ ಇರುತ್ತಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಅಲ್ಲಿಗೆ ಯಾವ ತರ ರಾಜಕಾರಣ ಇದೆ ನೋಡಿ. ಯಾರು ಯಾರು ಯಾವ ಹೇಳಿಕೆ ಕೊಡ್ತಾರೆ. ಆ ಹೇಳಿಕೆ ಮೇಲೆ ನೀವು ತೀರ್ಮಾನಕ್ಕೆ ಬನ್ನಿ. ಇಲ್ಲಿ ಕುಮಾರಸ್ವಾಮಿ ಹತ್ತಿರ ಇವರದ್ದು, ಯಾರದ್ದು ಏನು ನಡೆಯಲ್ಲ” ಎಂದರು.

ಕಾಲವೇ ಉತ್ತರ ಕೊಡುತ್ತೆ

FIR ಮಾಡಿ ಬೆದರಿಸುವ ತಂತ್ರನಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಬೆದರಿಕೆ ಅಲ್ಲದೆ ಇನ್ನೇನು? ಎನಿದೆ FIR ನಲ್ಲಿ?. ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನವಶ್ಯಕ. ಕಾಲವೇ ನಿರ್ಧಾರ ಮಾಡುತ್ತದೆ. ಕಾಲ ಕಾಲಕ್ಕೆ ಪ್ರತಿಯೊಂದಕ್ಕೂ ಉತ್ತರ ನೀಡುತ್ತದೆ ಎಂದು ಕಿಡಿಕಾರಿದರು.

ಭಂಡ ಸರ್ಕಾರ ಇದು

ಮುಡಾ‌ ವಿಚಾರ ಡೈವರ್ಟ್ ಮಾಡಲು FIR ಹಾಕಲಾಗಿದೀಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆಸಿದ ಅವರು, ಪ್ರತಿಯೊಂದು ಡೈವರ್ಟ್ ಮಾಡಲಿಕ್ಕೆ ನಡೆಯುತ್ತಿರೋದು. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಭಂಡ ಸರ್ಕಾರ ಇದು. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವುದು ಅರ್ಥ ಇಲ್ಲ. ಅದರಿಂದ ನಾನು ಹೇಳ್ತಾ ಇರೋದು. ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೆ ಕಾಲವೇ‌ ಉತ್ತರ‌ ನೀಡುತ್ತದೆ” ಎಂದು ಸಚಿವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button