ವಿಮಾನ ರದ್ದಾಗದಂತೆ ತಡೆಯಿರಿ: ಬೆಳಗಾವಿ ನಿಯೋಗ ಮನವಿ
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಇದೇ 27ರಿಂದ ಬೆಳಗಾವಿ -ಬೆಂಗಳೂರು ವಿಮಾನ ರದ್ಧುಪಡಿಸುವುದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗಾವಿ ನಿಯೋಗವೊಂದು ಕೇಂದ್ರ ವಿಮಾನ ಯಾನ ಸಚಿವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಮನವಿ ಮಾಡಿತು.
ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವರಾದ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಇಂದು ಬೆಳಗಾವಿಯ ನಿಯೋಗ ಹೊಸದಿಲ್ಲಿಯಲ್ಲಿ ಕ್ಯಾಬಿನೆಟ್ ಸಚಿವ ಪ್ರಲ್ಹಾದ್ ಜೋಶಿ ಅವರ ನಿವಾಸದಲ್ಲಿ ಭೇಟಿಯಾಯಿತು.
ಬೆಳಗಾವಿ -ಬೆಂಗಳೂರು ವಿಮಾನ ರದ್ದು ಮಾಡದಂತೆ ಮನವಿ ಮಾಡಿದ್ದೇವೆ ಮತ್ತು ಸಂಚಾರ ದಟ್ಟಣೆಯಿದ್ದು, ಸೇವೆಗಳನ್ನು ಕೈಬಿಡದಂತೆ ಒತ್ತಾಯಿಸಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ವಿಮಾನಯಾನ ಸಂಸ್ಥೆಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ರಾಜ್ಯ ಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕ ಅರವಿಂದ ಬೆಲ್ಲದ್, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ವಿ.ಐ.ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ