Kannada NewsKarnataka NewsLatest

ಆರ್‌ಸಿಯು ಅಭಿವೃದ್ಧಿಗಾಗಿ ಹೋರಾಟದ ಅಗತ್ಯವಿದೆ: ಎಂ.ಕೆ. ಹೆಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಗೋಕಾಕ ತಾಲೂಕಿನ ಜಾನಪದ ಕಲಾವಿದರು ತಮ್ಮ ವಿಶಿಷ್ಟ ಕೌಶಲಗಳಿಂದ ವಿದ್ಯಾರ್ಥಿಗಳನ್ನು ರಂಜಿಸಿದರು. ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಕಾರಣರಾದರು. ವಿಭಿನ್ನ ಶೈಲಿಯ ಜಾನಪದ ಹಾಡುಗಳು, ದಟ್ಟಿ ಕುಣಿತ, ಸಿದ್ಧಿ ಸೋಗು, ಪುರವಂತಿಕೆಗಳು ಮನಸೂರೆಗೊಂಡವು.


ರಾಣಿ ಚನ್ನಮ್ಮ ವಿಶ್ವವಿದ್ಯಾಲದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ೨೦೧೯-೨೦ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳಿವು.

ವಿಶ್ವವಿದ್ಯಾಲಯ ಇಂಥ ವಿಶಿಷ್ಟ ಹಾಗೂ ವಿಭಿನ್ನ ಸ್ವಾಗತ ಸಮಾರಂಭಕ್ಕೆ ಸಾಕ್ಷಿಯಾಯಿತು. ಇಡೀ ಕ್ಯಾಂಪಸ್ ಜಾನಪದ ಸೊಗಡಿನಿಂದ ಕೂಡಿದ್ದು ವಿಶೇಷವಾಗಿತ್ತು. ಆವರಣದ ಪ್ರವೇಶ ದ್ವಾರದಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು, ಜಾನಪದ ಕಲೆಗಳ ಚಿತ್ರಗಳನ್ನು ಅಳವಡಿಸಲಾಗಿತ್ತು. ವಿದ್ಯಾರ್ಥಿಗಳನ್ನು ಮೆರವಣಿಗೆ ಮೂಲಕ ವಿಶ್ವವಿದ್ಯಾಲಯಕ್ಕೆ ಕರೆತರಲಾಯಿತು.
ಗೋಕಾಕ ತಾಲೂಕಿನ ಧರ್ಮಟ್ಟಿ ಗ್ರಾಮದ ದೀಪ ರತ್ನ ಕುಣಿತ(ದಟ್ಟಿ)ದಲ್ಲಿ ಬಾಳಪ್ಪ ಲೋಕುರಿಕಲ್ಲಪ್ಪ ಲೋಕುರಿ, ರಾಮಚಂದ್ರ ಪೂಜೇರಿ, ಲಕ್ಷ್ಮಣ ಪೂಜೇರಿ, ಮಹಾದೇವ ಹಳ್ಳೂರ, ವಿಠ್ಠಲ ಕೊರಕಪೂಜೇರಿ, ಕಲ್ಲಪ್ಪ ಗೌಡರ, ಪ್ರಕಾಶ ಲೋಕುರಿ ಭಾಗವಹಿಸಿದ್ದರು. ಖಾನಟ್ಟಿಯ ಪುರವಂತಿಕೆ ಒಡಪುಗಳನ್ನು ಶಿವಪ್ಪ ನಿಂಗನೂರ ಹೇಳಿದರು. ಮೂಡಲಗಿಯ ಸಿದ್ಧಿ ಸೋಗು ಕಲೆಯನ್ನು ಚುಟುಗುಸಾಬ ಜಾತಗಾರ, ಹುಸೇನಸಾಬ ಮನಗುಳಿ ಹಾಗೂ ಮೂಡಲಗಿಯ ಗೊಂದಲಿಗ ಕಲೆಯನ್ನು ನಾಗೇಂದ್ರ ಮಾನೆ, ಬಾಬು ಮಾನೆ, ಉಮೇಶ ಮಾನೆ ಪ್ರದರ್ಶಿಸಿದರು.

ಸ್ಥಾಪನೆ ವೇಳೆಯ ಮಾದರಿಯಲ್ಲೇ ಹೋರಾಟ


ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಸಂಪಾದಕ ಎಂ.ಕೆ. ಹೆಗಡೆ ಉದ್ಘಾಟಿಸಿ ಮಾತನಾಡಿ, ವಿಶ್ವವಿದ್ಯಾಲಯ ನಿರೀಕ್ಷಿಸಿದಷ್ಟು ಇನ್ನೂ ಬೆಳವಣಿಗೆ ಆಗಿಲ್ಲ. ಮೂಲ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿರುವ ವಿವಿಗೆ ಕಾಯಕಲ್ಪ ಬೇಕಿದೆ. ವಿವಿ ಸ್ಥಾಪನೆ ವೇಳೆ ಹೇಗೆ ಹೋರಾಟ ಮಾಡಲಾಯಿತೋ ಅದೇ ರೀತಿಯಲ್ಲಿ ಈಗ ವಿವಿ ಅಭಿವೃದ್ಧಿಗಾಗಿ ಬೀದಿಗಿಳಿದು ಹೋರಾಟ ಆಗುವ ಅಗತ್ಯ ಇದೆ ಎಂದರು.
ವಿದ್ಯಾರ್ಥಿಗಳ ಗುರಿಯನ್ನು ನಿರ್ಧರಿಸುವಷ್ಟು ಪಾಲಕರಿಗೆ ಜ್ಞಾನ ಇರುವುದಿಲ್ಲ. ಜನ ಬಹಳಷ್ಟು ಸಲಹೆ ನೀಡುತ್ತಾರೆ. ಸಾಧ್ಯವಾದಷ್ಟು ಸಲಹೆ ಕೇಳಿ ಅಂತಿಮವಾಗಿ ಸ್ವಂತ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಜೀವನದಲ್ಲಿ ಜ್ಞಾನದ ಜೊತೆಗೆ ಹಣವೂ ಮುಖ್ಯ ಇದೆ. ಅದನ್ನು ನ್ಯಾಯ ಮಾರ್ಗದಿಂದ ಗಳಿಸಬೇಕು. ಪತ್ರಿಕೋದ್ಯಮ ಸೇರಿದಂತೆ ಇಂದು ಎಲ್ಲ ಕ್ಷೇತ್ರಗಳೂ ಸಂಕಷ್ಟದಲ್ಲಿವೆ.   ಉದ್ಯೋಗ ಪಡೆಯಲು ಎಷ್ಟು ಕಷ್ಟ ಪಡಬೇಕೋ ಅಷ್ಟೇ ಉದ್ಯೋಗ ಉಳಿಸಿಕೊಳ್ಳಲೂ ಹೋರಾಡಬೇಕಾದ ಸ್ಥಿತಿ ಇದೆ. ಹಾಗಾಗಿ ಬಹುವಿಧದ ಕೌಶಲ್ಯ ಬೆಳೆಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಬೇಕು ಎಂದರು.

ಜ್ಞಾನ ವೃದ್ಧಿಸಿಕೊಳ್ಳಿ


ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಂ. ಗಂಗಾಧರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮಕ್ಕೂ ಎಂಎ ವಿದ್ಯಾರ್ಥಿಗಳಿಗೂ ಬಿಡಲಾರದ ನಂಟು. ಸಾಹಿತ್ಯದ ಬಗ್ಗೆ ಜ್ಞಾನ ಇದ್ದವರು ಪತ್ರಿಕೋದ್ಯಮದಲ್ಲೂ ಸ್ಥಾನ ಪಡೆಯಬಹುದು. ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳ ಜ್ಞಾನ ಪಡೆದು ಸಾಧನೆ ಮಾಡಬೇಕು ಎಂದರು.

ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಮತ್ತು ನಿರಂತರವಾಗಿ ತರಗತಿಗಳಿಗೆ ಹಾಜರಾಗಬೇಕು. ಸತತ ಜ್ಞಾನ ವೃದ್ಧಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.
ಸಹಾಯಕ ಪ್ರಾಧ್ಯಾಪಕ ಡಾ. ಗಜಾನನ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶ್ರೀ ಚೌಗಲಾ ಸ್ವಾಗತಿಸಿದರು. ಮಹಾನಂದ ಮಗದುಮ, ರೂಪಾ ಖೋತ, ಮಂಜುನಾಥ ಮುನವಳ್ಳಿ ಅನುಭವ ಹಂಚಿಕೊಂಡರು. ಬೇಬಿಕುತಿಜಾ ನದಾಫ ಪರಿಚಯಿಸಿದರು. ಸಾವಿತ್ರಿ ಸಣಕಿ ನಿರೂಪಿಸಿದರು. ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ್, ಡಾ.ಅಶೋಕ ಮುಧೋಳ, ಡಾ. ಮಹೇಶ ಗಾಜಪ್ಪನವರ್, ಡಾ. ಪಿ.ನಾಗರಾಜ ವೇದಿಕೆಯಲ್ಲಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button