ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆಗೆ ಸುಸ್ತಾಗಿರುವ ರಾಜ್ಯ ರಾಜಧಾನಿ ಜನ, ರಸ್ತೆ ಮೇಲೆ ತುಂಬಿದ ನೀರಿನಲ್ಲಿ ಮೀನು ಹಿಡಿಯಲು ಮುಂದಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ವಿಡಿಯೊ ಫುಲ್ ವೈರಲ್ ಆಗಿದೆ.
ರಾಜ ರಾಜೇಶ್ವರಿ ನಗರದಲ್ಲಿ ನದಿಯಂತೆ ನೀರು ಹರಿಯುತ್ತಿದ್ದು ಜನರು ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ. ಮಳೆ ವ್ಯಾಪಕವಾಗಿ ಬಿದ್ದ ಕಾರಣ ರಸ್ತೆಯಲ್ಲಿ ದೊಡ್ಡಮಟ್ಟದ ನೀರು ಸಂಗ್ರಹಣೆ ಆಗಿದೆ. ಮೀನುಗಳು ತೇಲಿಬಂದಿದ್ದು, ಜನರು ಮೀನುಗಳನ್ನ ಹಿಡಿದು ಖುಷಿ ಪಟ್ಟಿದ್ದಾರೆ.
ಮತ್ತೊಂದೆಡೆ ಭಾರಿ ಮಳೆಯಿಂದಾಗಿ ಜಯನಗರದ 32 ಇ ಕ್ರಾಸ್ ನಲ್ಲಿ ಮರಬಿದ್ದಿದ್ದು, ಅರವಿಂದ ಜಂಕ್ಷನ್ ಕನೆಕ್ಟಿಂಗ್ ರಸ್ತೆ ಕಂಪ್ಲೇಟ್ ಕ್ಲೋಸ್ ಆಗಿದೆ. ವಸಂತ್ ನಗರ, ಮಿಲ್ಲರ್ ರಸ್ತೆ, ಮಡಿವಾಳ, ಗಂಗಾನಗರ, ರಾಮಕೃಷ್ಣನಗರ ಸೇರಿದಂತೆ ಬೆಂಗಳೂರಿನ ವಿವಿಧೆಡೆ ರಸ್ತೆಗಳು ಜಲಾವೃತವಾಗಿದೆ. ಟ್ರಾಫಿಕ್ ನಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಇನ್ನು ಕೆಂಗೇರಿ ಬಳಿ ಕಾಲುವೆ ಉಕ್ಕಿ ಹರಿದಿದೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಚಾಲನೆ ದೊಡ್ಡ ಸವಾಲಾಗಿದೆ. ಕೆಂಗೇರಿ ರೈಲು ನಿಲ್ದಾಣ ಸಂಪೂರ್ಣ ಜಲಮಯವಾಗಿದ್ದು, ಮಂಡಿಯುದ್ದ ನೀರು ನಿಂತಿದೆ.
ಬೆಂಗಳೂರು ಮಾತ್ರವಲ್ಲದೆ, ಪ್ರಸಿದ್ದ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭರ್ಜರಿ ಮಳೆಯಾಗಿದ್ದು, ಆದಿ ಸುಬ್ರಹ್ಮಣ್ಯ ದೇಗುಲದ ಸುತ್ತ ನೀರು ಆವರಿಸಿದೆ. ಭಕ್ತಾದಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲ ಕಂಟಕ ಎದುರಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ