Latest

ರಾಷ್ಟ್ರೀಯ ಪಕ್ಷವೊಂದರ ದಯನೀಯ ಸ್ಥಿತಿಗೆ ಮತ್ತೊಂದು ಉದಾಹರಣೆ ಬೇಕೆ?

 

*
ಸಂಪುಟ ಸಭೆ, ಶಾಸಕಾಂಗ ಸಭೆಯಷ್ಟೆ ಅಲ್ಲ, ಸಾರ್ವಜನಿಕ ಕಾರ್ಯಕ್ರಮದಿಂದಲೂ ರಮೇಶ್ ದೂರ
ಕರ್ನಾಟಕದ ಮಟ್ಟಿಗೆ ವ್ಯವಸ್ಥೆ ಸಧ್ಯಕ್ಕಂತೂ ಸುಧಾರಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ

ಪ್ರಗತಿವಾಹಿನಿ ವಿಶೇಷ, ಬೆಳಗಾವಿ

ದೇವರಲ್ಲಿ ಏನನ್ನೋ ಬೇಡಿಕೊಂಡಿದ್ದೇನೆ. ಅದು ಈಡೇರುವವರೆಗೂ ಸಚಿವ ಸಂಪುಟ ಸಭೆಗೆ ಹೋಗುವುದಿಲ್ಲ ಎಂದು ಹೇಳಿ ಕಳೆದ 12ಕ್ಕೂ ಹೆಚ್ಚು ಸಂಪುಟ ಸಭೆಯಿಂದ ದೂರ ಉಳಿದಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ, ಸ್ವಂತ ಜಿಲ್ಲೆ ಬೆಳಗಾವಿಯಲ್ಲೇ ನಡೆದ ಶಾಸಕಾಂಗ ಪಕ್ಷದ ಸಭೆಗೂ ಹಾಜರಾಗಲಿಲ್ಲ.

ಇಷ್ಟೇ ಅಲ್ಲ ಬೆಳಗಾವಿ ಜಿಲ್ಲೆಯಲ್ಲಿ ವಿಧಾನಮಂಡಳದ ಅಧಿವೇಶನದ ಸಂದರ್ಭದಲ್ಲಿ ನಡೆಯುತ್ತಿರುವ ಎಡೆಬಿಡದ ಸಾರ್ವಜನಿಕ ಕಾರ್ಯಕ್ರಮಗಳಿಂದಲೂ ರಮೇಶ ಜಾರಕಿಹೊಳಿ ದೂರವೇ ಉಳಿದಿದ್ದಾರೆ. ಸ್ವತಃ ಮುಖ್ಯಮಂತ್ರಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಉಪಮುಖ್ಯಮಂತ್ರಿಗಳು, ವಿವಿಧ ಸಚಿವರು ಪಾಲ್ಗೊಳ್ಳುವ  ಕಾರ್ಯಕ್ರಮಗಳಲ್ಲೂ ರಮೇಶ್ ಪಾಲ್ಗೊಳ್ಳುತ್ತಿಲ್ಲ. ಅಧಿವೇಶನದಲ್ಲಿ ಮಾತ್ರ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ತನ್ಮೂಲಕ ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡುತ್ತಿದ್ದಾರೆ.

ಒಂದೆಡೆ ಸಚಿವರಾಗಲು ಹಲವು ಶಾಸಕರಿಂದ ತೀವ್ರ ಒತ್ತಡ ಎದುರಿಸುತ್ತಿರುವ ಕಾಂಗ್ರೆಸ್, ಮತ್ತೊಂದೆಡೆ ಇಂತಹ ಸಚಿವರ ಅಶಿಸ್ತನ್ನೂ ಸಹಿಸಿಕೊಂಡು ಇರಬೇಕಾದ ಅನಿವಾರ್ಯತೆಯಲ್ಲಿ ಒದ್ದಾಡುತ್ತಿದೆ. ರಾಷ್ಟ್ರೀಯ ಪಕ್ಷವೊಂದರ ದಯನೀಯ ಸ್ಥಿತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಪಕ್ಷದೊಳಗಿನ ಭಿನ್ನಮತದಿಂದಾಗಿ ಇಂತದ್ದನ್ನೆಲ್ಲ ಸಹಿಸಿಕೊಂಡಿರಬೇಕಾದ ಪ್ರಾರಬ್ಧ ಕಾಂಗ್ರೆಸ್ ನದ್ದು. ಪ್ರಾದೇಶಿಕ ಪಕ್ಷವೊಂದರ ಮನೆಬಾಗಿಲಿಗೆ ಹೋಗಿ ಸರಕಾರ ರಚಿಸಲು ಕಾಲಿಗೆ ಬಿದ್ದಾಗಲೇ ಕಾಂಗ್ರೆಸ್ ಎಂತಹ ಸ್ಥಿತಿಗೆ ತಲುಪಿತು ಎನ್ನುವುದು ನಾಡಿನ ಜನತೆಗೆ ಅರ್ಥವಾಗಿ ಹೋಗಿದೆ. ಹಾಗೆಯೇ ಚುನಾವಣೆಯ ಪೂರ್ವದಲ್ಲಿ ಆಡಿದ್ದ ಮಾತುಗಳನ್ನೆಲ್ಲ ಮರೆತ ಜೆಡಿಎಸ್ ಎಷ್ಟು ಅವಕಾಶವಾದಿ ಎನ್ನುವುದೂ. 

ದುರ್ಬಲ ಬಿಜೆಪಿ

ಆದರೆ ‘ಕರ್ನಾಟಕ ಬಿಜೆಪಿ’ಯಂತಹ ದುರ್ಭಲ ಪಕ್ಷದಿಂದಾಗಿ ವ್ಯವಸ್ಥೆಯ ಪಾತಾಳಮಟ್ಟವನ್ನು ಜನ ಮೂಕಪ್ರೇಕ್ಷಕರಾಗಿ ನೋಡಬೇಕಾದ ಸ್ಥಿತಿ ಬಂದಿದೆ. ರಾಜಕೀಯದಲ್ಲಿ ಕೆಲವೊಮ್ಮೆ ತರಾತುರಿ ಮುಳುವಾದರೆ ಕೆಲವೊಮ್ಮೆ ತಾಳ್ಮೆಯೇ ಮುಳುವಾಗುತ್ತದೆ. ಬಿಜೆಪಿಗೆ ಆರಂಭದಿಂದಲೂ ಅವಸರವೇ ಮುಳವಾಗುತ್ತ ಬಂದಿದೆ.  ಇದಕ್ಕೆ ರಾಜಕೀಯ ಅಪ್ರಭುದ್ಧತೆ ಎನ್ನಬಹುದೇನೋ. ಸುಮ್ಮನಿದ್ದಿದ್ದರೆ ಸಮ್ಮಿಶ್ರ ಸರಕಾರ ಆರಂಭವಾಗಿ ಕೆಲವೇ ದಿನದಲ್ಲಿ ಚಾಪೆ ಮಡಚಿಕೊಂಡು ಹೋಗುತ್ತಿತ್ತು. ಸರಕಾರ ರಚಿಸಲು ಬಿಜೆಪಿ ಆ್ಯಕ್ಟಿವ್ ಆದಷ್ಟು ಸಮ್ಮಿಶ್ರ ಬಲವಾಗುತ್ತ ಹೋಗುತ್ತಿದೆ.

ಬೆಳಗಾವಿ ಅಧಿವೇಶನ ಕೊನೆಯ ಪಕ್ಷ ಉತ್ತರ ಕರ್ನಾಟಕ ವಿಷಯವನ್ನಿಟ್ಟುಕೊಂಡಾದರೂ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳಬಹುದೇನೋ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸರಕಾರವೇ ಅಸ್ತ್ರದ ಮೇಲೆ  ಅಸ್ತ್ರ ಕೊಟ್ಟರೂ ಪ್ರಯೋಗಿಸಲು ಬಿಜೆಪಿ ವಿಫಲವಾಗುತ್ತಿದೆ. ನಾಯಕತ್ವದ ಕೊರತೆಯೋ… ಒಗ್ಗಟ್ಟಿನ ಕೊರತೆಯೋ… ದೂರದೃಷ್ಟಿಯ ಕೊರತೆಯೋ… ಸಧ್ಯಕ್ಕಂತೂ ಸುಧಾರಣೆಯ ನಿರೀಕ್ಷೆ ಕಾಣುತ್ತಿಲ್ಲ. 2019ರ ಚುನಾವಣೆಗೂ ಬಿಜೆಪಿ ಕೇವಲ ಪ್ರಧಾನಿ ನರೇಂದ್ ಮೋದಿ ಅಲೆಯನ್ನೆ ನೆಚ್ಚಿಕೊಂಡಂತಿದೆ. ಅದನ್ನು ಬಿಟ್ಟರೆ ಜನರ ಮುಂದೆ ಹೋಗುವುದಕ್ಕೆ ಯಾವ ದಾರಿಯೂ ಕಾಣುತ್ತಿಲ್ಲ. ಸ್ಮಾರ್ಟ್ ಸಿಟಿ ಸೇರಿದಂತೆ ಕೇಂದ್ರ ಸರಕಾರ ನೀಡಿದ ಹತ್ತಾರು ಆದರ್ಶ ಯೋಜನೆಗಳನ್ನೂ ಸಕಾರಾತ್ಮಕವಾಗಿ ಬಳಸಿಕೊಳ್ಳಲು ಬಿಜೆಪಿಯಿಂದ ಆಗಲಿಲ್ಲ. ಮೊನ್ನೆ ಮೊನ್ನೆಯ ಪಂಚರಾಜ್ಯ ಚುನಾವಣೆ ಗಮನಿಸಿದರೆ ಬಿಜೆಪಿಯ ಈ ಅಸಹಾಯಕತೆ ಕರ್ನಾಟಕದಲ್ಲಿ ಮಾತ್ರವಲ್ಲ ಎಂದೆನಿಸುತ್ತದೆ. 

 ಸರಕಾರ ಹಾಗೂ ರಾಜಕಾರಣಿಗಳು ನಡೆಯುತ್ತಿರುವ ರೀತಿ ನೋಡಿದರೆ ಭವಿಷ್ಯ ಅತ್ಯಂತ ಕರಾಳವಾಗಿ ಕಾಣುತ್ತಿದೆ. ಹತ್ತಾರು ಭಾಗ್ಯ, ಸಾಲಮನ್ನಾ ಸೇರಿದಂತೆ ಯಾವ ಯೋಜನೆಗಳೂ ದೂರದೃಷ್ಟಿಯಿಂದ ಕೂಡಿರುವಂತದ್ದಿಲ್ಲ. ಕೇವಲ ಓಟ್ ಬ್ಯಾಂಕ್ ಸೃಷ್ಟಿಯೇ ಪರಮೋದ್ಧೇಶದಂತೆ ಕಾಣುತ್ತಿದೆ. ಕರ್ನಾಟಕದ ಮಟ್ಟಿಗೆ ವ್ಯವಸ್ಥೆ ಸಧ್ಯಕ್ಕಂತೂ ಸುಧಾರಿಸುವ ಯಾವ ಲಕ್ಷಣವೂ ಕಾಣುತ್ತಿಲ್ಲ.

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button