*ಭ್ರಷ್ಟಾಚಾರ ತಡೆಗೆ ಜಾಗೃತಿ ಮೂಡಿಸಬೇಕು: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*
ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಅರಿವು ಸಪ್ತಾಹ-2024
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಕ್ಷೇತ್ರದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಗಾಗಿ ಕಾನೂನು ಅರಿವು ಮತ್ತು ಜಾಗೃತಿ ಅತ್ಯಗತ್ಯವಾಗಿದೆ. ಭ್ರಷ್ಟಾಚಾರ ವಿರುದ್ಧ ಪ್ರಕರಣ ದಾಖಲಾದರೂ ನ್ಯಾಯ ನೀಡಿಕೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಲ್ಲಿ ವಿಳಂಬವಾಗುತ್ತಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಲೋಕಾಯುಕ್ತ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ (ಅ. 29) ನಡೆದ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಅರಿವು ಸಪ್ತಾಹ-2024ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಲೋಕಪಾಲ, ರಾಜ್ಯದಲ್ಲಿ ಲೋಕಾಯುಕ್ತ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ನಿರ್ಭೀತರಾಗಿ ಲೋಕಾಯುಕ್ತರಿಗೆ ಕಚೇರಿಗೆ ಹೋಗಿ ದೂರು ದಾಖಲಿಸಲು ಹೆದರುತ್ತಾರೆ. ಇಂತಹ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನಿಸಬೇಕು.
ಸರ್ಕಾರದ ಸೌಲಭ್ಯಗಳು ಸಾರ್ವಜನಿಕರಿಗೆ ಅತೀ ಸುಲಭವಾಗಿ ದೊರಕುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಲಂಚ ಪಡೆಯುವುದು ಮತ್ತು ಲಂಚ ನೀಡುವುದು ಎರಡು ಅಪರಾಧವಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಇದರ ಕುರಿತು ತಿಳಿ ಹೇಳಬೇಕು. ಯಾವುದೇ ಇಲಾಖೆಯಲ್ಲಿ ಲಂಚ ನೀಡಬಾರದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಲೋಕಾಯುಕ್ತ ಅಧೀಕ್ಷಕ ಹನುಮಂತರಾಯ ಮಾತನಾಡಿ, ಸರ್ಕಾರದ ಸೇವೆಗಳಲ್ಲಿ, ಯೋಜನೆಗಳಲ್ಲಿ ಅಧಿಕಾರಿಗಳ ಲೋಪದೋಷ ಕಂಡು ಬರುವಂತಹ ಪ್ರಕರಣಗಳು ಲೋಕಾಯುಕ್ತ ವ್ಯಾಪ್ತಿಗೆ ಒಳಪಟ್ಟಿವೆ. ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಮತ್ತು ವರದಿ ಮಾಡಲು, ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984 ರ ಮೂಲಕ ಜಾರಿಗೆ ಬಂದಿತು ಎಂದು ತಿಳಿಸಿದರು.
ಲೋಕಪಾಲ, ಕರ್ನಾಟಕ ಲೋಕಾಯುಕ್ತ ಎರಡು ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಚಾರ ನಿರ್ಮೂಲನೆಗೆ ಕಾರ್ಯ ನಿರ್ವಹಿಸುತ್ತಿವೆ. ಆಡಳಿತ ಯಂತ್ರದಲ್ಲಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಪ್ರಕರಣಗಳೂ ಸೇರಿದಂತಹ ಆಡಳಿತಾತ್ಮಕ ಕ್ರಮಗಳ ವಿರುದ್ಧದ ದೂರುಗಳನ್ನು ಪರಿಶೀಲನೆ ಮಾಡಿ ಸಾರ್ವಜನಿಕ ಆಡಳಿತದ ಮಾನದಂಡಗಳನ್ನು ಸುಧಾರಣೆ ಮಾಡಲು ರಾಜ್ಯ ಮಟ್ಟದಲ್ಲಿ ಲೋಕಾಯುಕ್ತ ಜಾರಿಯಲ್ಲಿದೆ ಎಂದು ಲೋಕಾಯುಕ ಎಸ್. ಪಿ ಹನುಮಂತರಾಯ ಹೇಳಿದರು.
ಪ್ರತಿಯೊಬ್ಬ ಅಧಿಕಾರಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಹಾತ್ಮಾ ಗಾಂಧಿಯವರ ಯೋಚನೆಯಂತೆ ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯವನ್ನು ದೊರಕಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಅಧಿಕಾರ ಶಾಶ್ವತವಲ್ಲ ಕಡು ಬಡವರ ಬದುಕಿನಲ್ಲಿ ಬೆಳಕು ತರುವ ಕೆಲಸಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ಹೇಳಿದರು.
ಪ್ರತಿಜ್ಞಾ ವಿಧಿ ಭೋದನೆ
ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಅನ್ನಪೂರ್ಣ ಅವರು ಭ್ರಷ್ಟಚಾರ ನಿರ್ಮೂಲನೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಡಿಸಿಪಿ ನಿರಂಜನ ರಾಜ್ ಅರಸ್, ಮಹಾನಗರ ಪಾಲಿಕೆ ಆಯುಕ್ತ ಶುಭ. ಬಿ, ಹಿರಿಯ ಕಾನೂನು ಅಭಿಯೋಜಕ ರಾಜೇಶ ಜಂಬಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ, ಕರ್ನಾಟಕ ಲೋಕಾಯುಕ್ತ ಸಾರ್ವಜನಿಕ ಅಭಿಯೋಜಕರು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ