Kannada NewsKarnataka NewsLatest

*ಕನ್ನಡ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ* *ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕನ್ನಡ ರಾಜ್ಯೋತ್ಸವ ಭಾಷಣ*

ಪ್ರಗತಿವಾಹಿನಿ ಸುದ್ದಿ, ಉಡುಪಿ:  ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಧ್ವಜಾರೋಹಣ ನೆರವೇರಿಸಿದರು. 

ಬಳಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಪಥ ಸಂಚಲದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. 

ಅವರ ಭಾಷಣದ ಪೂರ್ಣ ಪಾಠ ಹೀಗಿದೆ –

ಎಲ್ಲಾ ಅತಿಥಿ ಗಣ್ಯರೇ, ಸನ್ಮಾನಿತರೇ, ಸಾರ್ವಜನಿಕ ಬಂಧುಗಳೇ, ಅಧಿಕಾರಿಗಳೇ, ವಿದ್ಯಾರ್ಥಿಗಳೇ ಹಾಗೂ ಮಾಧ್ಯಮ ಸ್ನೇಹಿತರೇ

ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವಯುತವಾಗಿ ಆಚರಿಸುತ್ತಿರುವ ಇಂದಿನ 69 ನೇ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತೇನೆ.

ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಈದಿನ ನಮ್ಮ ನಾಡಿನ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ನೆನೆದು ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದರ ಮೂಲಕ ಅವುಗಳನ್ನು ಅಭಿವೃದ್ಧಿಗೊಳಿಸುವ ಮಹತ್ವದ ದಿನ. ಇವುಗಳ ಉಳಿವಿಗಾಗಿ ನಾವೆಲ್ಲರೂ ಧೀಕ್ಷೆ ತೊಡುವ ದಿನ ಇದಾಗಿದೆ ಎಂದು ಭಾವಿಸುತ್ತೇನೆ.

ಕನ್ನಡ ರಾಜ್ಯ ಸ್ಥಾಪನೆಗೆ ಕನ್ನಡ ನುಡಿಯನ್ನು ಕಟ್ಟುವ, ಉಳಿಸಿ-ಬೆಳೆಸುವ ಕಾಯಕದಲ್ಲಿ ತೊಡಗಿದವರ ಹಾಗೂ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಅನೇಕರು ಶ್ರಮಿಸಿದ್ದು, ಶ್ರಮಿಸಿದವರನ್ನೆಲ್ಲಾ ಈ ದಿನ ನಾಡ ಉತ್ಸವದಲ್ಲಿ ಗೌರವ ಪೂರ್ವಕವಾಗಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ…

ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ಕನ್ನಡ ಭಾಷೆಗೆ ಉನ್ನತ ಸ್ಥಾನವಿದೆ. ಕನ್ನಡ ಭಾಷೆಯು 8 ಬಾರಿ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಸಾಹಿತ್ಯ ಭಾಷೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ. ಕನ್ನಡ ಬರಿ ಭಾಷೆಯಲ್ಲ. ಇದೊಂದು ಶಕ್ತಿ. ನಮ್ಮ ನಾಡು-ನುಡಿ, ಸಂಸ್ಕೃತಿಗೆ ಭವ್ಯವಾದ 2000 ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಹಬ್ಬಿದೆ ಎಂದು ಕನ್ನಡದ ಮೊದಲ ಕೃತಿ “ಕವಿರಾಜಮಾರ್ಗ” ದಲ್ಲಿ ಉಲ್ಲೇಖಿಸಿರುವುದು ಇದಕ್ಕೆ ಸಾಕ್ಷಿ.

ಇಂತಹ ಭವ್ಯ ಪರಂಪರೆಯ ಈ ನಮ್ಮ ನೆಲದ ಸಂಪತ್ತು, ಸಂಪ್ರದಾಯ, ಪರಂಪರೆ, ಕಲೆ, ಸಂಸ್ಕೃತಿ ಹಾಗೂ ಭಾಷೆ ಇವುಗಳನ್ನೆಲ್ಲಾ ಉಳಿಸಿ-ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯ… ಮಾತೃ ಭಾಷೆಯನ್ನು ಗೌರವಿಸಬೇಕೆಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ್ದರು ಎಂಬುದನ್ನು ಮನಗಂಡು ಮಾತೃಭಾಷೆಗೆ ಪ್ರಧಾನ ಸ್ಥಾನ ನೀಡಬೇಕಿದೆ.

 ನಿತ್ಯ  ಉತ್ಸವಗಳ ನಾಡಾದ ಜಿಲ್ಲೆಯು ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿಯನ್ನು  ಹೊಂದಿ, ಪ್ರಸಿದ್ಧಿ ಪಡೆದು, ಸಾಹಿತ್ಯ  ಕ್ಷೇತ್ರದಲ್ಲಿ  ತನ್ನದೇ ಆದ ಹಿರಿಮೆಯನ್ನು  ಗಳಿಸುವುದರ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ವಿವಿಧತೆಯಲ್ಲಿ ಏಕತೆಗೆ ನಮ್ಮ ಜಿಲ್ಲೆ  ಬಹುದೊಡ್ಡ  ಉದಾಹರಣೆಯಾಗಿದೆ.

ಈ ನಮ್ಮ ನೆಲವು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಧರ್ಮಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ. ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಶರಣ ಚಳವಳಿಯು ಸಮಾಜದಲ್ಲಿ ಬದಲಾವಣೆಯನ್ನು ಹಾಗೂ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಭದ್ರ ಬುನಾದಿಯನ್ನು 12 ನೇ ಶತಮಾನದಲ್ಲಿ ಹಾಕಿತು.

ಆಲೂರು ವೆಂಕಟರಾವ್ ಅವರ ನೇತೃತ್ವದಲ್ಲಿ 1905ರಲ್ಲಿ ಕರ್ನಾಟಕ ಏಕೀಕರಣದ ಹೋರಾಟದೊಂದಿಗೆ ಪ್ರಾರಂಭವಾಗಿ 1956 ರ ನವೆಂಬರ್ 01 ರಂದು ಭಾಷಾವಾರು ಪ್ರಾಂತ್ಯಗಳು ರಚನೆಯೊಂದಿಗೆ ಮೈಸೂರು ಉದಯವಾಯಿತು. ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜು ಅರಸು ಅವರ ಪ್ರಯತ್ನದ ಫಲವಾಗಿ 1973 ರ ನವೆಂಬರ್ 01 ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಮರುನಾಮಕರಣವಾದ 50 ವರ್ಷಗಳಾದ ನೆನಪಿಗಾಗಿ ಕರ್ನಾಟಕ ಸಂಭ್ರಮವನ್ನು “ಹೆಸರಾಯಿತು ಕರ್ನಾಟಕ- ಉಸಿರಾಯಿತು ಕನ್ನಡ” ಎಂಬ ಘೋಷಣೆಯೊಂದಿಗೆ ವರ್ಷಪೂರ್ತಿ ಆಚರಿಸುವುದರೊಂದಿಗೆ, ಕರ್ನಾಟಕದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡುನುಡಿಗೆ ಸಂಬಂಧಿಸಿದಂತೆ ಹಾಗೂ ಯುವ ಜನತೆಯಲ್ಲಿ ಕನ್ನಡ- ಕನ್ನಡಿಗ -ಕರ್ನಾಟಕದ ಅರಿವು ಮೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದೆ.

ಕನ್ನಡ ಭಾಷೆಯ ಮೊಟ್ಟ ಮೊದಲ ಶಿಲಾಶಾಸನ ಎಂಬ ಹೆಗ್ಗಳಿಕೆಯ ಕ್ರಿಸ್ತ ಶಕ 450 ನೇ ಸಾಲಿನ ಪಾಚೀನವಾದ ಹಲ್ಮಿಡಿ ಶಾಸನದ ಮಹತ್ವವನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಆಶಯದಿಂದ ನಗರದ ಭುಜಂಗ ಶೆಟ್ಟಿ ಪಾರ್ಕ್‌ನಲ್ಲಿ ಸ್ಥಾಪಿಸಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಇಂದು ಬೆಳಗ್ಗೆ ಲೋಕಾಪರ್ಣೆ ಮಾಡಲಾಗಿದ್ದು, ಈ ಸವಿನೆನಪನ್ನು ಶಾಶ್ವತವಾಗಿ ಇಡಲಾಗಿದೆ.

ಆಡಳಿತದಲ್ಲಿ ಕನ್ನಡ ನೂರಕ್ಕೆ ನೂರರಷ್ಟು ಬಳಕೆಯಾಗಬೇಕು ಎಂಬುದು ನಿರ್ವಿವಾದದ ಸಂಗತಿ. ನಮ್ಮ ಸರ್ಕಾರದ ಆಶಯವೂ ಅದೇ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ದೃಢ ಹೆಜ್ಜೆಗಳನ್ನು ಇಟ್ಟಿದೆ. ಕನ್ನಡ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಯುವ ಪೀಳಿಗೆಗೆ ಸಾಹಿತ್ಯ, ಪರಿಸರ, ಜನಪದ ಕಲೆಗಳನ್ನು ಉಳಿಸಲು ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮವನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಹಾಗೂ ಹೋಟೆಲ್‌ಗಳು ಮುಂತಾದವುಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯಲ್ಲಿ ಕನಿಷ್ಠ ಶೇಕಡ 60 ರಷ್ಟು ಪ್ರದರ್ಶಿಸಬೇಕು ಹಾಗೂ ಕನ್ನಡ ಭಾಷೆಯು ನಾಮ ಫಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗಿದೆ ಎಂದು ಸ್ಥಳೀಯ ಸಂಸ್ಥೆಗಳು ಖಚಿತ ಪಡಿಸಿಕೊಳ್ಳತಕ್ಕದ್ದು ಎಂದು ಸೂಚಿಸಲಾಗಿದೆ.
ರಾಜ್ಯ ಸರಕಾರಿ ನೌಕರರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿಗೆ ಕನ್ನಡ ಧ್ವಜದ ಬಣ್ಣವಾದ ಹಳದಿ – ಕೆಂಪು ಬಣ್ಣದ ಕೊರಳು ದಾರ ಹಾಕುವಂತೆ ಆದೇಶ ಹೊರಡಿಸಲಗಿದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವುದರಲ್ಲಿ ನಮ್ಮ ಸರಕಾರ ಹಿಂದೆ ಬಿದ್ದಿಲ್ಲ.

ಸುಧೀರ್ಘವಾದ ಮತ್ತು ಅತ್ಯಂತ ವೈವಿಧ್ಯವಾದ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ತುಂಬಿರುವ ನಮ್ಮ  ಜಿಲ್ಲೆ, ಇಲ್ಲಿನ ಇತಿಹಾಸ, ಸಾಂಸ್ಕೃತಿಕ ಭಾಷೆ, ವೈವಿಧ್ಯ, ಜನಪದ ಆಚರಣೆ ಹಾಗೂ ನಂಬಿಕೆಗಳು ಬಹಳ ಹಿಂದಿನಿಂದಲೂ ದೇಶ–ವಿದೇಶಗಳ ಪ್ರವಾಸಿಗರನ್ನು  ಆಕರ್ಷಿಸುತ್ತಿದೆ.    

ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸರ್ವರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ  ನೀಡಲು ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ಮೂಲಕ ಜನರ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕೆ  ಯಾವುದೇ ರೀತಿಯ ಧಕ್ಕೆ ಆಗದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಕಳಕಳಿಯಾಗಿದೆ. 

  ಕರ್ನಾಟಕ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಗೆ ಬಲತುಂಬಿವೆ ಎಂಬ ಸಂಗತಿ ಇತ್ತೀಚೆಗೆ ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆ ಬಿಡುಗಡೆ ಮಾಡಿರುವ ಆರ್ಥಿಕ ಪ್ರಗತಿ ವರದಿಯಲ್ಲಿ ಕರ್ನಾಟಕ ರಾಜ್ಯದ ಜಿ.ಡಿ.ಪಿ ದರ ಶೇಕಡ 10.2 ರಷ್ಟು ದಾಖಲಾಗಿದೆ. ಇದು ದೇಶದ ಒಟ್ಟಾರೆ ಜಿ.ಡಿ.ಪಿ ದರಕ್ಕಿಂತ ಹೆಚ್ಚು. . ಕರ್ನಾಟಕದ ಈ ಆರ್ಥಿಕ ಪ್ರಗತಿಗೆ ನಮ್ಮ  ಸರ್ಕಾರದ ಗ್ಯಾರಂಟಿಗಳ ಕೊಡುಗೆ ಗಣನೀಯವಾಗಿದೆ.

ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಲಿದೆ ಎಂದು ನಿರೀಕ್ಷೆ ಮಾಡಿದವರಿಗೆ ಈಗ ಭ್ರಮನಿರಸನವಾಗಿದೆ. ಇವುಗಳ ನಡುವೆಯೂ ನಾವು ಆರ್ಥಿಕ ಬೆಳವಣಿಗೆ ಸಾಧಿಸಿ ತೋರಿಸಿ ಅವರಿಗೆ ಉತ್ತರ ನೀಡಿದ್ದೇವೆ. ಈ ಐದು ಯೋಜನೆಗಳ ಫಲವಾಗಿ ಪ್ರತಿಯೊಬ್ಬ ಫಲಾನುಭವಿಗಳ ಕುಟುಂಬಕ್ಕೆ ಸರಾಸರಿ ತಿಂಗಳಿಗೆ 4000 ದಿಂದ 5000 ರೂ.ಗಳ ತನಕ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರ್ಥಿಕ ನೆರವು ಲಭಿಸಿದೆ. ಇಂತಹದೊಂದು ಯೋಜನೆಯನ್ನು  ಪಡೆದ ರಾಜ್ಯದ ಜನರು ಸಂತೃಪ್ತರಾಗಿದ್ದಾರೆ.

 ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ, ಒಂದು ವರ್ಷ ಪೂರ್ಣಗೊಂಡಿದ್ದು, ಈವರೆಗೆ ರಾಜ್ಯದಲ್ಲಿ 1 ಕೋಟಿ 23 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಪ್ರತೀ ತಿಂಗಳು 2000 ರೂ. ಗಳಂತೆ ತಿಂಗಳಿಗೆ 2,280 ಕೋಟಿ ರೂ.ಗಳ ಹಣ ವರ್ಗಾವಣೆ ಮಾಡುವ ಮೂಲಕ ಒಂದು ವರ್ಷದಲ್ಲಿ  ಒಟ್ಟು 25,248 ಕೋಟಿ ರೂ. ವರ್ಗಾಯಿಸಲಾಗಿದೆ. 

ಈ ಯೋಜನೆಯ ಹಣ ಕುಟುಂಬದ ಯಜಮಾನಿಗೆ ನಾನಾ ರೀತಿಯಲ್ಲಿ ನೆರವಿಗೆ ಬಂದಿದೆ. ಮುಂದೆಯೂ ಈ ಯೋಜನೆಯಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿ ಎಂಬುದೇ ನಮ್ಮ ಆಶಯವಾಗಿದೆ.
ಜಿಲ್ಲೆಯಲ್ಲಿ ಈ ಯೋಜನೆಯಡಿ 2,23,084 ಮಹಿಳಾ ಫಲಾನುಭವಿಗಳ ಖಾತೆಗೆ ತಲಾ 2000 ರೂ.ಗಳಂತೆ ಪಾವತಿಸಿ, ಶೇಕಡ. 96.25 ಪ್ರಗತಿ ಸಾಧಿಸಲಾಗಿದೆ.
ಇತರ ಗ್ಯಾರಂಟಿ ಯೋಜನೆಗಳಿಂದ ಕೂಡ ಜಿಲ್ಲೆಯ ಜನರಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ.

 ರಾಜ್ಯವನ್ನು  ಬಂಡವಾಳ ಹೂಡಿಕೆಯ ಪ್ರಶಸ್ತ ತಾಣವಾಗಿಸಿದ ನಮ್ಮ ಸರ್ಕಾರದ ಪ್ರಯತ್ನಗಳು ಹಾಗೂ ಯುವ ಜನರಿಗೆ ಕೈಗಾರಿಕೆಗಳು ಮತ್ತು ಉದ್ದಿಮೆಗಳಲ್ಲಿ ಬೇಡಿಕೆಯಿರುವ ಕೌಶಲ್ಯಾಧಾರಿತ ತರಬೇತಿ ನೀಡುತ್ತಿರುವುದರ ಪರಿಣಾಮ ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲಿಯೇ ನಂ.1 ಸ್ಥಾನಕ್ಕೇರಿದೆ. 

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಕ್ಕೆ ಅನುಮೋದನೆ ನೀಡಲಾಗಿದ್ದು, ಇದರಿಂದ ಕರ್ನಾಟಕ ಪ್ರವಾಸೋದ್ಯಮವನ್ನು ವೈವಿಧ್ಯಮಯ ಹಾಗೂ ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಹಾಗೂ ಸೇವೆಯ ಮೂಲಕ ಪ್ರವಾಸಿಗರಿಗೆ ವಿಶ್ವ ದರ್ಜೆಯ ಅನುಭವವನ್ನು ಒದಗಿಸಿ, ಕರ್ನಾಟಕವನ್ನು ಜಾಗತಿಕವಾಗಿ ಹಾಗೂ ದೇಶದ ಆಕರ್ಷಣೀಯ ಪ್ರವಾಸಿ ತಾಣವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ 1,349 ಕೋಟಿ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

 ರಾಜ್ಯದ ಸರ್ಕಾರಿ ಶಾಲೆಗಳ 4 ಮತ್ತು 5 ನೇ ತರಗತಿ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಕಲಿಕಾ ಸಾಮಗ್ರಿಗಳನ್ನು  ವಿನ್ಯಾಸಗೊಳಿಸಿ, ಮುದ್ರಿಸಿ, ವಿತರಿಸಲು ಹಾಗೂ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲು 14.2 ಕೋಟಿ ರೂ. ವೆಚ್ಚದ “ಓದು ಕರ್ನಾಟಕ” ಚಟುವಟಿಕೆಗೆ ಅನುಮೋದನೆ ನೀಡಲಾಗಿದೆ. 

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ಪಸರಿಸುವ ಮಹತ್ವದ ಉದ್ದೇಶದೊಂದಿಗೆ ರಾಜ್ಯದಲ್ಲಿ ಬೀದರ್‌ನಿಂದ ಚಾಮರಾಜನಗರದ ವರೆಗೆ 2,500 ಕಿ.ಮೀ ವರೆಗೆ ಜನರು ಪರಸ್ಪರ ಕೈ ಹಿಡಿದು ಮಾನವ ಸರಪಳಿ ರಚಿಸಿರುವುದು ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ ಗೆ ಸೇರಿದೆ.

  ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ 1 ಕೋಟಿ 88 ಲಕ್ಷ ರೂ.ಗಳ ಮೊತ್ತದಲ್ಲಿ ಕಿಂಡಿ ಆಣೆಕಟ್ಟು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರಿಂದ 33 ಹೆಕ್ಟೇರ್ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಒದಗಲಿದೆ. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗಾಗಿ ಸುಮಾರು 6 ಕೋಟಿ 15 ಲಕ್ಷ ರೂ. ಮೊತ್ತದಲ್ಲಿ 151 ಕಿ.ಮೀ  ಉದ್ದದ ನದಿ ದಂಡೆ ಸಂರಕ್ಷಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. 

   ಪ್ರಸಕ್ತ ಸಾಲಿನ ಮುಂಗಾರು ಮಳೆಯು 4,486 ಮಿ.ಮೀ ದಾಖಲಾಗಿ ವಾಡಿಕೆ ಮಳೆಗಿಂತ ಶೇ. 12 ರಷ್ಟು ಹೆಚ್ಚುವರಿ ಮಳೆಯಾಗಿದೆ. ಈ ಮಳೆಯಿಂದಾಗಿ ಮಾನವ ಜೀವಹಾನಿ, 1,288 ವಾಸ್ತವ್ಯ ಮನೆಹಾನಿ, 665.10 ಹೆಕ್ಟೇರ್ ಕೃಷಿ ಹಾಗೂ 200.48 ಹೆಕ್ಟೇರ್ ‌ನಷ್ಟು ತೋಟಗಾರಿಕೆ ಬೆಳೆಗಳ ಹಾನಿಯಾಗಿದೆ. ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ, ಮಾರ್ಗಸೂಚಿಯನ್ವಯ ಹಾನಿಗೆ ಸಂಬಂಧಿಸಿದ ಪ್ರಕರಣಗಳಿಗೆ ಇದುವರೆಗೆ 3 ಕೋಟಿ 09 ಲಕ್ಷ ರೂ. ಪರಿಹಾರವನ್ನು  ಪಾವತಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿನ ಭೂಕುಸಿತ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಿ, ಭೂಕುಸಿತ ತಡೆಗಟ್ಟುವ ಬಗ್ಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಕುರಿತು ಈಗಾಗಲೇ ಬೆಂಗಳೂರಿನ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕಚೇರಿಯ ತಾಂತ್ರಿಕ ಸಿಬ್ಬಂದಿಗಳು ಸರ್ವೇ ಮಾಡಿ, ವರದಿಯೊಂದಿಗೆ ಸರ್ಕಾರಕ್ಕೆ  ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇವುಗಳ ತಡೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. 

ಜಿಲ್ಲೆಯ ನಾಗರಿಕರಿಂದ ಅಹವಾಲುಗಳನ್ನು  ಆಲಿಸಿ, ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಒದಗಿಸಲು ಪ್ರತೀ ತಿಂಗಳು ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಒಟ್ಟು 1,089 ಅರ್ಜಿಗಳು ಸ್ವೀಕೃತವಾಗಿದ್ದು, ಎಲ್ಲಾ ಅರ್ಜಿಗಳನ್ನು  ವಿಲೇವಾರಿಗೊಳಿಸಲಾಗಿದೆ. 

 ನಾಡಿನಲ್ಲಿ ಕನ್ನಡವನ್ನು  ಸಮಗ್ರವಾಗಿ ಅಭಿವೃದ್ಧಿ  ಮಾಡಲು ಸರ್ವತೋಮುಖವಾಗಿ ಬೆಳೆಸಲು ನಮ್ಮ ಸರ್ಕಾರಕ್ಕೆ ಸಂಪೂರ್ಣ ಬದ್ಧತೆ ಇದೆ. ಇದಕ್ಕೆ ನಮ್ಮ ಕನ್ನಡದ ಜನರೂ ಪೂರ್ಣ ಸಹಕಾರ ನೀಡಬೇಕು. ಕನ್ನಡ ನಾಡಿನಲ್ಲಿ ಕನ್ನಡದ ಮನಸ್ಸುಗಳು ನಿರ್ಮಾಣವಾಗಬೇಕು. ಕನ್ನಡ ಪುಸ್ತಕಗಳನ್ನು ಹೆಚ್ಚು ಹೆಚ್ಚಾಗಿ ಓದುವ, ಕನ್ನಡ ಸಂಸ್ಕೃತಿಯನ್ನು ಅಭಿಮಾನಿಸಿ, ಪ್ರೀತಿಸುವ ಮನೋಭಾವ ನಮ್ಮ ಜನರಲ್ಲಿ ಬರಬೇಕು.

ವಿಶಿಷ್ಟ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ ನಮ್ಮ ಜಿಲ್ಲೆಯು ಸೌಹಾರ್ದ ಪರಂಪರೆಯನ್ನು  ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕೆ ಈ ರಾಜ್ಯೋತ್ಸವ ನಾಂದಿಯಾಗಲಿ ಎಂದು ಹಾರೈಸುತ್ತೇನೆ. 

ಈ ವೈಭವಪೂರ್ಣ ಸಮಾರಂಭದಲ್ಲಿ ಭಾಗವಹಿಸಿರುವ ಎಲ್ಲ ಕನ್ನಡಾಭಿಮಾನಿಗಳಿಗೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ, ತಾಯಿ ಭುವನೇಶ್ವರಿ ದೇವಿಯು ಎಲ್ಲ ಜನತೆಗೆ ಶಾಂತಿ ಮತ್ತು ನೆಮ್ಮದಿಯ ಬದುಕನ್ನು ಕರುಣಿಸಲೆಂದು ಆಶಿಸುತ್ತಾ ಈ ನನ್ನ ಸಂದೇಶ ಭಾಷಣಕ್ಕೆ ವಿರಾಮ ಹಾಡುತ್ತಿದ್ದೇನೆ.

|| ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ,
ಸಿರಿಗನ್ನಡಂ ಏಳ್ಗೆ ||
ಕನ್ನಡವೇ ನಿತ್ಯ, ಕನ್ನಡವೇ ಸತ್ಯ
“ಜೈ ಕರ್ನಾಟಕ”

ಈ ವೇಳೆ ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್,ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ್ ಸುರೇಂದ್ರ ಅಡಿಗ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button